ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆ ಸಾರುತ್ತಿದೆ ಭುಜಂಗೇಶ್ವರ ದೇವಾಲಯ

ಐತಿಹಾಸಿಕ ಹಲವು ದೇವಾಲಯಗಳಿಗೆ ಆಶ್ರಯ ನೀಡಿರುವ ಉಮ್ಮತ್ತೂರು ಗ್ರಾಮ
Last Updated 8 ಡಿಸೆಂಬರ್ 2019, 2:42 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಕರ್ನಾಟಕದ ಇತಿಹಾಸದಲ್ಲಿ ಹೋಬಳಿ ವ್ಯಾಪ್ತಿಯ ಉಮ್ಮತ್ತೂರು ಗ್ರಾಮವು ಪಾಳೇಗಾರರ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು. ಅವರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು ಜಿಲ್ಲೆ, ರಾಜ್ಯದ ಕಲೆ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕಪರಂಪರೆಯನ್ನು ಬಿಂಬಿಸುತ್ತಿವೆ.

ಗ್ರಾಮದಲ್ಲಿ ಪಾಳೇಗಾರರ ಹೆಸರಿನಲ್ಲಿ ಆಡಳಿತ ನಡೆಸಿದ ರಾಜರು ವಿಜಯನಗರದ ಅರಸರಿಗೆ ಸಾಮಂತರಾಗಿದ್ದರು ಎಂಬುದಕ್ಕೆ ಇಲ್ಲಿನ ಶಿಲಾ ಶಾಸನಗಳಲ್ಲಿ ಉಲ್ಲೇಖಗಳಿವೆ. ಆ ಕಾಲದಲ್ಲಿ ನಿರ್ಮಾಣಗೊಂಡಿರುವ ರಂಗನಾಥ ದೇವಾಲಯ, ಉರುಕಾತೇಶ್ವರಿ, ಜೈನ ಬಸದಿಗಳು, ಮಕ್ಕಳ ಮಹದೇಶ್ವರ, ಬಸವೇಶ್ವರ,ಭುಜಂಗೇಶ್ವರ ದೇವಾಲಯಗಳು ಪ್ರಮುಖವಾದವುಗಳು.

15ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯಗಳು ಇಂದಿಗೂ ಜನಾಕರ್ಷಣೆಯನ್ನು ಉಳಿಸಿಕೊಂಡಿವೆ. ಇತಿಹಾಸಕಾರರು, ಇತಿಹಾಸ ವಿದ್ಯಾರ್ಥಿಗಳು ಹಾಗೂ ಪ್ರಾಚ್ಯ ಇಲಾಖೆ ತಜ್ಞರು ಆಗಾಗ್ಗೆ ಇಲ್ಲಿಗೆ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುತ್ತಿರುವುದರಿಂದ ಈ ದೇವಾಲಯಗಳು ಇಂದಿಗೂ ರಾಜ್ಯದ ಇತಿಹಾಸದಲ್ಲಿ ಮನೆ ಮಾತಾಗಿವೆ.

ಹೆಚ್ಚು ಪ್ರಚಲಿತದಲ್ಲಿ ಇಲ್ಲದಈ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹ.

ಉಮ್ಮತ್ತೂರು ಅರಸರ ಕಾಲದ ಪ್ರಮುಖ ದೇವಲಾಯಗಳಲ್ಲಿ ಒಂದಾಗಿರುವ ಭುಜಂಗೇಶ್ವರ ದೇವಾಲಯ ದ್ರಾವಿಡ ಶೈಲಿಯನ್ನು ಹೊಂದಿದ್ದು, ವಿಶಾಲವಾಗಿಯೂ ಸುಂದರವಾಗಿಯೂ ಕಾಣುತ್ತಿದೆ.ನಂಜೆರಾಜ ಪಾಳೆಗಾರನ ಅವಧಿಯಲ್ಲಿ ದೇವಾಲಯ ನಿರ್ಮಾಣವಾಗಿತ್ತು ಎಂದು ಹೇಳುತ್ತದೆ ಇತಿಹಾಸ.

ಈ ದೇವಾಲಯದ ಮುಂದೆ ಎತ್ತರವಾದ ಗರುಡಗಂಬವಿದೆ. ಇದರ ಕೆಳಗಡೆ ವಿವಿಧ ವಿಗ್ರಹಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಬಾಗಿಲು ಪೂರ್ವ ದಿಕ್ಕಿನಲ್ಲಿದ್ದು, ದ್ವಾರದ ಮುಂದೆ ನಂದಿ ವಿಗ್ರಹ ಅಪೂರ್ವ ಶಿಲ್ಪವಾಗಿದೆ. ದೇವಾಲಯದ ಒಳಗಡೆ ಇರುವ ಪಂಚಲಿಂಗದ ಮೇಲೆ ಜಟೆ ಇದೆ. ಭುಜದ ಮೇಲೆ ಗಂಗೆಯ ಮೂರ್ತಿ ಇದೆ. ಎರಡು ಗೋಪುರಗಳು, ಗರ್ಭಗೃಹ, ಶಿವನ ಲಿಂಗ ಸುತ್ತಲಿನ ಗೋಡೆಗಳಲ್ಲಿ ಕೆತ್ತಿರುವ ವಿಗ್ರಹಗಳು ದೇವಾಲಯದ ಮಹತ್ವವನ್ನು ಸಾರುತ್ತವೆ.

ಇಲ್ಲಿ ಆಡಳಿತ ನಡೆಸಿದ ಅರಸನೊಬ್ಬನಿಗೆ ಬೇತಾಳನ ಕಾಟವಿತ್ತು. ಭುಜಂಗೇಶ್ವರ ದೇವಾಲಯ ಕಟ್ಟಿಸಿದ ನಂತರ ಬೇತಾಳನ ಸಮಸ್ಯೆಯಿಂದ ಆತನಿಗೆ ಮುಕ್ತಿ ಸಿಕ್ಕಿತು. ಆ ಬಳಿಕದೇವಸ್ಥಾನದ ಮೂಲೆಯೊಂದರಲ್ಲಿ ತೆರೆದ ಬಾಯಿ, ಕೋರೆಹಲ್ಲುಗಳು, ಕೆದರಿದ ತಲೆ ಹಾಗೂ ಉಬ್ಬಿದ ಕಣ್ಣುಗಳನ್ನು ಹೊಂದಿರುವ ಬೇತಾಳ ಮೂರ್ತಿಯನ್ನು ಕೆತ್ತಿಸಿದನೆಂದು ಇತಿಹಾಸ ಹೇಳುತ್ತದೆ.

ನಂತರ ಬಂದ ರಾಜ ಮನೆತನದ ಅರಸರು ಭುಜಂಗೇಶ್ವರ ದೇವಾಲಯವನ್ನು ಪೋಷಿಸಿಕೊಂಡು ಬಂದರು. ಶೈವ ಪಂಥದ ಪ್ರಗತಿಯ ಸಂಕೇತವಾಗಿ ಇಂದಿಗೂ ಭುಜಂಗೇಶ್ವರ ದೇವಾಲಯ ಉಳಿದುಕೊಂಡು ಬಂದಿದೆ.

ಅಧ್ಯಯನಕ್ಕಾಗಿ ವಿದ್ಯಾರ್ಥಿಗಳ ಭೇಟಿ
ಚರಿತ್ರೆಗಳಲ್ಲಿ ಉಮ್ಮತ್ತೂರಿನ ಇತಿಹಾಸ ದಾಖಲಾಗಿರುವುದರಿಂದ ಜಿಲ್ಲೆಯ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ದೇವಾಲಯದ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿಯಿಂದಲೂ ಸ್ನಾತಕೋತ್ತರ ವಿದ್ಯಾರ್ಥಿಗಳು ಆಗಮಿಸಿ ಈ ದೇವಸ್ಥಾನದ ಬಗ್ಗೆ ಮಾಹಿತಿ ಸಂಗ್ರಹಿಸಿಕೊಳ್ಳುತ್ತಿದ್ದಾರೆ.

‘ರಾಜ್ಯದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ಈ ದೇವಾಲಯವನ್ನು ಪ್ರಾಚ್ಯವಸ್ತು ಇಲಾಖೆ ಅಭಿವೃದ್ಧಿಪಡಿಸಿದರೆ, ಇದು ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಕ್ರಿ.ಶ. 1513ರಲ್ಲಿ ಇಲ್ಲಿನ ದೇವಸ್ಥಾನಗಳು ನಿರ್ಮಾಣವಾಗಿವೆ. ಪ್ರಾಚ್ಯವಸ್ತು ಇಲಾಖೆಯವರು ಈ ದೇವಸ್ಥಾನವನ್ನು ನವೀಕರಣಗೊಳಿಸಿ ಕಲಾ ವೈಭವವನ್ನು ಮತ್ತೇ ಉತ್ತುಂಗಕ್ಕೆ ತರಬೇಕು. ಜತೆಗೆ ದೇವಸ್ಥಾನದ ನಿರ್ವಹಣೆಯನ್ನು ವಹಿಸಿಕೊಳ್ಳಬೇಕು. ಸದ್ಯ ಇತಿಹಾಸಕಾರರು ಭೇಟಿ ನೀಡುವ ಇಂತಹ ದೇವಸ್ಥಾನದಲ್ಲಿ ಸ್ವಚ್ಛತೆ ಕಣ್ಮರೆಯಾಗಿರುವುದು ವಿಷಾದನೀಯ’ ಎಂದು ಕುದೇರು ಎಂ.ಸಂಗಶೆಟ್ಟಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆ.ನಾಗರಾಜು ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT