ಬುಧವಾರ, ಆಗಸ್ಟ್ 17, 2022
25 °C

ಚಾಮರಾಜನಗರದಲ್ಲಿ ನಾರಾಯಣ ಗುರು ಜಯಂತಿ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಅಸ್ಪೃಶ್ಯತೆ, ಅಜ್ಞಾನ, ಅಂಧಶ್ರದ್ಧೆ ವಿರುದ್ಧ ಹೋರಾಟ ನಡೆಸಿ, ಸಮ ಸಮಾಜ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ನಾರಾಯಣ ಗುರು ಅವರ ಚಿಂತನೆಗಳು ಎಲ್ಲರಿಗೂ ದಾರಿದೀಪ’ ಎಂದು ಶಾಸಕ ಸಿ.ಪುಟ್ಟರಂಗ ಶೆಟ್ಟಿ ಅವರು ಪ್ರತಿಪಾದಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇರಳದಲ್ಲಿ ಶೋಷಿತ ಸಮುದಾಯಗಳು ಅನುಭವಿಸುತ್ತಿದ್ದ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದವರು ನಾರಾಯಣಗುರುಗಳು. ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದಾಗ ಸ್ವತಃ ಅವರು ಶಿವನ ದೇವಸ್ಥಾನ ನಿರ್ಮಿಸಿದರು. ಶೋಷಿತರ ವಿದ್ಯಾಭ್ಯಾಸಕ್ಕಾಗಿ ಕೇರಳದ ಕರಾವಳಿ ಪ್ರದೇಶದ ಕಾಲಡಿಯಲ್ಲಿ ಪಾಠಶಾಲೆಯನ್ನು ತೆರೆದರು. ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದವರು’ ಎಂದು ಹೇಳಿದರು.

‘ನಾರಾಯಣ ಗುರುಗಳ ಚಿಂತನೆ, ಅಧ್ಯಾತ್ಮ ವಿಷಯಗಳು ಮುನ್ನೆಲೆಗೆ ಬರಬೇಕಾದರೆ ಅವರ ಪುಸ್ತಕವನ್ನು ಹೆಚ್ಚು ಓದಿ ನಾರಾಯಣ ಗುರುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಅನೇಕ ಸಾಧಕರು, ಸಮಾಜ ಸುಧಾರಕರು ನಾರಾಯಣ ಗುರು ಅವರ ಕುರಿತ ಗ್ರಂಥಗಳನ್ನು ಅಧ್ಯಯನ ಮಾಡಿ ಪ್ರಭಾವಿತರಾಗಿದ್ದರು. ನಾರಾಯಣ ಗುರು ಜಯಂತಿಯು ಆಚರಣೆಗೆ ಸೀಮಿತವಾಗದೇ ಜೀವನದಲ್ಲಿ ಅವರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಬಿ.ಶಾಂತಮೂರ್ತಿ ಅವರು ಮಾತನಾಡಿ, ‘ನಾರಾಯಣ ಗುರುಗಳ ಸಂದೇಶ, ಅವರ ಜೀವನ ನಮಗೆ ಆದರ್ಶವಾಗಿದೆ. ದೇಶದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಇವರಂತೆ ಎಲ್ಲರೂ ಶ್ರಮಿಸಿ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಮುಖಂಡ ಅರಕಲವಾಡಿ ನಾಗೇಂದ್ರ ಅವರು ಮಾತನಾಡಿ, ‘ಕೇರಳಕ್ಕೆ ಸೀಮಿತವಾಗಿದ್ದ ಸಾಮಾಜಿಕ ಚಳವಳಿಯನ್ನು ಇಡೀ ದೇಶವೇ ತಿರುಗಿ ನೋಡುವ ರೀತಿ ಮಾಡಿದ ಕೀರ್ತಿ ನಾರಾಯಣ ಗುರು ಅವರಿಗೆ ಸಲ್ಲುತ್ತದೆ. ಹಟ ಸಾಧನೆ, ಯೋಗವನ್ನು ಬಲ್ಲವರಾಗಿದ್ದು, ಎಲ್ಲವನ್ನು ಜಯಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದರು’ ಎಂದು ಹೇಳಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ. ಗಿರೀಶ್, ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ವೆಂಕಟೇಶ್, ನಿಜಧ್ವನಿ ಗೋವಿಂದರಾಜು, ಬ್ಯಾಡಮೂಡ್ಲು ಬಸವಣ್ಣ, ಜಿ.ಬಂಗಾರು, ಶ್ರೀನಿವಾಸ್, ಸಿ.ಎಸ್.ಪುಟ್ಟಣ್ಣ, ಪರ್ವತರಾಜು ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು