ಚಾಮರಾಜನಗರ: ಜಿಲ್ಲೆಯಲ್ಲಿ ಸರ್ಕಾರಿ ಕಾನೂನು ಕಾಲೇಜು ಈ ವರ್ಷವಾದರೂ ಆರಂಭವಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.
2023-24ನೇ ಶೈಕ್ಷಣಿಕ ವರ್ಷ ನವೆಂಬರ್ 15ರಿಂದ ಆರಂಭವಾಗಲಿದ್ದು, ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಕೊನೆಯ ಹಂತ ತಲುಪಿದೆ.
ಐದು ವರ್ಷದ ಕೋರ್ಸ್‌ಗೆ (ಪಿಯುಸಿಯಿಂದ ನೇರವಾಗಿ ಕಾನೂನು ಕೋರ್ಸ್‌ಗೆ) ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ಮೂರು ವರ್ಷದ ಕೋರ್ಸ್‌ಗೆ (ಪದವಿ ಮುಗಿಸಿ ಕಾನೂನು ಪದವಿಗೆ ಸೇರುವವರಿಗೆ) ಪ್ರವೇಶಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
‘ಅಕ್ಟೋಬರ್ 15ರಿಂದಲೇ ಶೈಕ್ಷಣಿಕ ವರ್ಷ ಆರಂಭವಾಗಬೇಕಿತ್ತು. ಆದರೆ, ಪರೀಕ್ಷೆಯ ಕಾರಣಕ್ಕೆ ಕಾಲೇಜು ಆರಂಭದ ದಿನಾಂಕವನ್ನು ಒಂದು ತಿಂಗಳು ಮುಂದೂಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಈ ವರ್ಷದಿಂದ ಕಾಲೇಜು ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಜುಲೈ 15ರಂದು ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಸ್ಥಾನಿಕ ಪರಿಶೀಲನಾ ಸಮಿತಿ ತಂಡ ಕಾಲೇಜಿನ ನಿಯೋಜಿತ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕೆಲವು ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಸಮಿತಿ ಸಲಹೆ ನೀಡಿತ್ತು.
‘ತಾತ್ಕಾಲಿಕ ಕಟ್ಟಡದಲ್ಲಿ ಕಾಲೇಜು ಆರಂಭಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು’ ಎಂಬ ಭರವಸೆಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸಮಿತಿಗೆ ನೀಡಿದ್ದರು.
ಆದರೆ, ಕಾಲೇಜು ಆರಂಭಕ್ಕೆ ಕಾನೂನು ವಿವಿ ಇನ್ನೂ ಅನುಮತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆಯೇ ನಗರದ ಕಾನೂನು ಕಾಲೇಜಿಗೆ ನಿಯೋಜಿಸಲಾಗಿದ್ದ ಪ್ರಾಂಶುಪಾಲ ಎ.ಗೋಪಾಲ ಅವರನ್ನು ಕೋಲಾರದ ಕಾನೂನು ಕಾಲೇಜಿಗೆ ವರ್ಗಾವಣೆ ಮಾಡಲಾಗಿದೆ. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಮ್ಮ ಅವರಿಗೆ ಅಧಿಕಾರ ಹಸ್ತಾಂತರಿಸಿ ಹೋಗಿದ್ದಾರೆ.
ಐದು ವರ್ಷಗಳಿಂದ ನನೆಗುದಿಗೆ: ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ 2017ರಲ್ಲಿ ಜಿಲ್ಲೆಗೆ ಸರ್ಕಾರಿ ಕಾನೂನು ಕಾಲೇಜು ಮಂಜೂರು ಮಾಡಿತ್ತು.
ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆ ಇಲಾಖೆಗೆ ಸೇರಿದ ನವೀಕೃತ ಕಟ್ಟಡದಲ್ಲಿ (ಮೊದಲು ಕೇಂದ್ರೀಯ ವಿದ್ಯಾಲಯ ಆಗಿತ್ತು) ತಾತ್ಕಾಲಿಕವಾಗಿ ಕಾಲೇಜು ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
2019–20ನೇ ಶೈಕ್ಷಣಿಕ ವರ್ಷದಲ್ಲೇ ಕಾಲೇಜು ಆರಂಭವಾಗಬೇಕಿತ್ತು. ಕಾನೂನು ವಿವಿ ಕಾಲೇಜಿನ ಪರಿಶೀಲನಾ ಸಮಿತಿ ಕಾಲೇಜಿಗೆ ಭೇಟಿ ನೀಡಿ ಕಟ್ಟಡ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪರಿಶೀಲನೆ ನಡೆಸಿತ್ತು. ಆದರೆ, ಭಾರತೀಯ ವಕೀಲರ ಪರಿಷತ್ತು, 2019ರಿಂದ 2022ರವರೆಗೆ ದೇಶದಾದ್ಯಂತ ಹೊಸ ಕಾನೂನು ಕಾಲೇಜು ಆರಂಭಿಸುವುದಕ್ಕೆ ನಿರ್ಬಂಧ ಹೇರಿತ್ತು. ಹಾಗಾಗಿ, ನಗರಲ್ಲಿ ಕಾಲೇಜು ಆರಂಭವಾಗಿರಲಿಲ್ಲ.
ನಿರ್ಬಂಧ ಸಡಿಲಿಕೆಯಾಗಿದ್ದರಿಂದ ಈ ವರ್ಷ ಕಾಲೇಜು ಆರಂಭವಾಗುವ ನಿರೀಕ್ಷೆಯಲ್ಲಿ ಜನ ಹಾಗೂ ಕಾನೂನು ಪದವಿ ಪಡೆಯುವ ಆಕಾಂಕ್ಷೆ ಹೊಂದಿದ್ದ ಯುವಕರು ಇದ್ದರು. ಜುಲೈ ತಿಂಗಳಲ್ಲಿ ಸಮಿತಿ ಭೇಟಿ ನೀಡಿದ ನಂತರ ಕಾಲೇಜು ಶುರುವಾಗುವ ವಿಶ್ವಾಸ ಹೆಚ್ಚಿತ್ತು.
ಆದರೆ, ಕಾನೂನು ಪದವಿಯ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲು ಇನ್ನು 20 ದಿನಗಳಷ್ಟೇ ಬಾಕಿ ಇದೆ. ಜಿಲ್ಲೆಯಲ್ಲಿ ಯಾವುದೇ ಪ್ರಕ್ರಿಯೆ ನಡೆಯದಿರುವುದರಿಂದ ಕಾಲೇಜು ಆರಂಭಕ್ಕೆ ಇನ್ನೊಂದು ವರ್ಷ ಕಾಯಬೇಕಾಗಿದೆ.
ವಿವಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಕಾಲೇಜು ಆರಂಭಿಸಬೇಕು ಎಂದು ಸಿ.ಎಂಗೆ ಈಗಾಗಲೇ ಮನವಿ ಮಾಡಿದ್ದೇನೆಸಿ.ಪುಟ್ಟರಂಗಶೆಟ್ಟಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.