ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿದಿವೆ ಹೊಸ ಕೆಂಪು ಬಸ್‌ಗಳು

ಕೆಎಸ್‌ಆರ್‌ಟಿಸಿ: ಶಿವರಾತ್ರಿ ಜಾತ್ರೆ ಸಮಯದಲ್ಲಿ ₹3.9 ಕೋಟಿ ಆದಾಯ
Last Updated 6 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಚಾಮರಾಜನಗರ ವಿಭಾಗಕ್ಕೆ ಹೊಸದಾಗಿ 35 ಬಸ್‌ಗಳು ಬಂದಿದ್ದು, ತಿಂಗಳಲ್ಲಿ ಇನ್ನೂ 20 ಬಸ್‌ಗಳು ಬರಲಿವೆ.

ಟಾಟಾ ನಿರ್ಮಿತ ಭಾರತ್‌ ಸ್ಟೇಜ್‌–4 ಮಾನದಂಡದ ಬಸ್‌ಗಳು ಇದಾಗಿದ್ದು, ಕೆಎಸ್‌ಆರ್‌ಟಿಸಿಯು ಹೊಸದಾಗಿ ಖರೀದಿಸಿದೆ.

ನಿಗಮದ ಚಾಮರಾಜನಗರ ವಿಭಾಗದಲ್ಲಿ ಒಟ್ಟು 445 ಬಸ್‌ಗಳಿದ್ದು, ಹಳೆಯ ಬಸ್‌ಗಳ ಬದಲಿಗೆ ಹೊಸ ಬಸ್‌ಗಳನ್ನು ಖರೀದಿಸಲಾಗಿದೆ.

‘ಒಂದು ಬಸ್‌ ಅನ್ನು ಗರಿಷ್ಠ 9 ಲಕ್ಷ ಕಿ.ಮೀವರೆಗೆ ಓಡಿಸಬಹುದು. ನಂತರ ಅದರ ಎಂಜಿನ್‌ ಹಾಗೂ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಮುಂದಕ್ಕೆ ಅದನ್ನು ಬಳಸಬಹುದೇ ಇಲ್ಲವೇ ಎಂದು ತೀರ್ಮಾನಿಸಲಾಗುತ್ತದೆ. ಸಾಧ್ಯವಿಲ್ಲ ಎಂದಾದರೆ ಬಸ್‌ ಅನ್ನು ಗುಜುರಿಗೆ ಹಾಕಲಾಗುತ್ತದೆ. ಹೊಸದಾಗಿ 35 ಬಸ್‌ಗಳು ಬಂದಿವೆ. ಮೈಸೂರು, ಬೆಂಗಳೂರು ಸೇರಿದಂತೆ ಹಳೆಯ ಮಾರ್ಗಗಳಲ್ಲೇ ಇವುಗಳನ್ನು ಓಡಿಸಲಾಗುತ್ತಿದೆ. ಈ ತಿಂಗಳ ಒಳಗಾಗಿ ಇನ್ನೂ 20 ಬಸ್‌ಗಳು ಬರಲಿವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತಮ ಆದಾಯ: ಕೆಎಸ್‌ಆರ್‌ಟಿಸಿಯ ಚಾಮರಾಜನಗರ ವಿಭಾಗವು ಉತ್ತಮ ಆದಾಯಕ್ಕೆ ಹೆಸರು ಗಳಿಸಿದೆ.440 ಮಾರ್ಗಗಳಲ್ಲಿ ಬಸ್‌ಗಳು ಓಡಾಡುತ್ತಿವೆ. ಪ್ರತಿ ದಿನ ಸರಾಸರಿ 2 ಲಕ್ಷ ಕಿ.ಮೀಗಳನ್ನು ಬಸ್‌ಗಳು ಕ್ರಮಿಸುತ್ತಿವೆ. ನಿಗಮದ ಅಧಿಕಾರಿಗಳು ಹೇಳುವ ಪ್ರಕಾರ, ವಿಭಾಗದ ಪ್ರತಿ ದಿನ ಸರಾಸರಿ ಆದಾಯ ₹55 ಲಕ್ಷದಿಂದ ₹60 ಲಕ್ಷಗಳಷ್ಟಿದೆ.

ಮಾದಪ್ಪನ ಕೊಡುಗೆ: ಕೆಎಸ್‌ಆರ್‌ಟಿಸಿಯ ಆದಾಯದಲ್ಲಿ ಸಿಂಹಪಾಲು ಮಹದೇಶ್ವರ ಬೆಟ್ಟದ ಮಹದೇಶ್ವರ ಸ್ವಾಮಿ ಭಕ್ತರದ್ದು. ಬೆಟ್ಟಕ್ಕೆ ರೈಲು ಮಾರ್ಗದ ವ್ಯವಸ್ಥೆ ಇಲ್ಲದಿರುವುದರಿಂದ ಸಾಮಾನ್ಯ ಭಕ್ತರು ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಮಹದೇಶ್ವರ ಬೆಟ್ಟಕ್ಕೆ ದಿನಂಪ್ರತಿ ನೂರಾರು ಹಾಗೂ ವಿಶೇಷ ಸಂದರ್ಭಗಳಲ್ಲಿ ಲಕ್ಷಾಂತರ ಮಂದಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಹೀಗಾಗಿ ಈ ಮಾರ್ಗದ ಬಸ್‌ಗಳು ಉತ್ತಮ ಆದಾಯಗಳಿಸುತ್ತಿವೆ.

ಬೆಟ್ಟದಲ್ಲಿ ಕಳೆದ ತಿಂಗಳು ನಡೆದ ಶಿವರಾತ್ರಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಯು ಬರೋಬ್ಬರಿ ₹3.90 ಕೋಟಿ ಆದಾಯ ಗಳಿಸಿದೆ. ಐದು ದಿನಗಳ ಕಾಲ ನಡೆದ ಜಾತ್ರೆಯ ಸಂದರ್ಭದಲ್ಲಿ ಹೆಚ್ಚುವರಿಯಾಗಿ 460 ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

‘ಶಿವರಾತ್ರಿ ಜಾತ್ರೆಯ ಸಮಯದಲ್ಲಿ ನಮಗೆ ಒಳ್ಳೆಯ ಆದಾಯ ಬಂದಿದೆ. ಆ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದೆ, ಬಸ್‌ಗಳು ಸುಗಮವಾಗಿ ಕಾರ್ಯಾಚರಿಸಿವೆ. ಯುಗಾದಿಯ ಸಂದರ್ಭದಲ್ಲೂ ಹೆಚ್ಚುವರಿ ಬಸ್‌ಗಳನ್ನು ಹಾಕಲಾಗುವುದು’ ಎಂದು ಶ್ರೀನಿವಾಸ್‌ ಅವರು ಮಾಹಿತಿ ನೀಡಿದರು.

ಕಾಡುತ್ತಿದೆ ಸಿಬ್ಬಂದಿ ಕೊರತೆ

ಉತ್ತಮ ಆದಾಯ ಇದ್ದರೂ ನಿಗಮಕ್ಕೆ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆ ಬಹುವಾಗಿ ಕಾಡುತ್ತಿದೆ. 150 ಮಂದಿ ಸಿಬ್ಬಂದಿಯ ಅಗತ್ಯವಿದೆ ಎಂದು ಹೇಳುತ್ತಾರೆ ಅಧಿಕಾರಿಗಳು. ಅದರಲ್ಲೂ ಚಾಲಕರು ಹಾಗೂ ನಿರ್ವಾಹಕರ ಕೊರತೆ ಇದೆ.ಉತ್ತರ ಕರ್ನಾಟಕ ಹಾಗೂ ದೂರದ ಊರಿನ ಸಿಬ್ಬಂದಿ ಇತ್ತೀಚೆಗೆ ವರ್ಗ ಮಾಡಿಸಿಕೊಂಡು ಹೋದ ನಂತರ, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

‘ಸಿಬ್ಬಂದಿ ಕೊರತೆ ಇರುವುದು ನಿಜ. ತುರ್ತಾಗಿ 80 ಮಂದಿ ಚಾಲಕರು ಹಾಗೂ ನಿರ್ವಾಹಕರ ಅಗತ್ಯವಿದೆ. ರಾಜ್ಯ ಮಟ್ಟದಲ್ಲಿ ಈಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಎರಡು ಮೂರು ತಿಂಗಳಲ್ಲಿ ಹುದ್ದೆಗಳು ಭರ್ತಿಯಾಗಲಿವೆ’ ಎಂದು ಶ್ರೀನಿವಾಸ್‌ ಅವರು ತಿಳಿಸಿದರು.

ಅಂಕಿ ಅಂಶ

455:ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದಲ್ಲಿರುವ ಬಸ್‌ಗಳು

440:ಬಸ್‌ಗಳು ಸಂಚರಿಸುವ ಮಾರ್ಗಗಳ ಸಂಖ್ಯೆ

₹55 ಲಕ್ಷ–₹60 ಲಕ್ಷ: ಪ್ರತಿ ದಿನದ ಆದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT