ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಪಾ ವೈರಸ್‌: ಕೇರಳ ಗಡಿಯಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ ಐದು ಹಾಸಿಗೆಗಳು ಮೀಸಲು
Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಕೇರಳದ ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ನಿಪಾ ವೈರಸ್‌ನಿಂದ ಇಬ್ಬರು ಮೃತಪಟ್ಟಿರುವುದು ದೃಢಪಡುತ್ತಿದ್ದಂತೆ, ಆರೋಗ್ಯ ಇಲಾಖೆ ಕೇರಳದ ಗಡಿಭಾಗದಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದು, ಗುಂಡ್ಲುಪೇಟೆ ತಾಲ್ಲೂಕಿನ ಮೂಲೆ ಹೊಳೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೆ ಜಿಲ್ಲಾ ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ. 

ಗುಂಡ್ಲುಪೇಟೆಯ ಮೂಲಕ ಕೇರಳಕ್ಕೆ ತರಕಾರಿ ಸೇರಿದಂತೆ ಅನೇಕ ಸರಕು ವಾಹನಗಳು ಓಡಾಡುತ್ತವೆ. ಆ ಕಡೆಯಿಂದಲೂ ಸಾಕಷ್ಟು ವಾಹನಗಳು, ಪ್ರವಾಸಿಗರು ಜಿಲ್ಲೆಯತ್ತ ಬರುತ್ತಾರೆ.

ನಿಪಾ ವೈರಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಚರ್ಚೆ ನಡೆಸಿದ್ದು, ಗಡಿಭಾಗದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. 

ನಿಪಾ ವೈರಸ್‌ ರೋಗ ಲಕ್ಷಣಗಳನ್ನು ಹೊಂದಿರುವವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ಹಾಸಿಗೆಗಳನ್ನು ಮೀಸಲಿಡಲಾಗಿದೆ. 

‘ಗುರುವಾರದಿಂದ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಕೇರಳದಿಂದ ಬರುವ ವಾಹನಗಳನ್ನು ತಪಾಸಣೆ ನಡೆಸಲಾಗುವುದು. ಪ್ರಯಾಣಿಕರನ್ನೂ ವಿಚಾರಿಸಲಾಗುವುದು. ನಿಪಾ ವೈರಸ್‌ನ ರೋಗ ಲಕ್ಷಣಗಳಿರುವರ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಿಪಾ ವೈರಸ್ ಲಕ್ಷಣಗಳು ಕಂಡುಬಂದರೆ ಅಂತಹವರನ್ನು ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಗಾ ವಹಿಸಲು ಪ್ರತ್ಯೇಕ ಕೊಠಡಿ ತೆರೆಯಲಾಗಿದೆ’ ಎಂದು ಗುಂಡ್ಲುಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಹೇಳಿದರು. 

‘ಕೇರಳದಿಂದ ತಾಲ್ಲೂಕಿನ ಕಡೆಗೆ ಬರುವವರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜೊತೆಗೆ ತಾಲ್ಲೂಕಿನಿಂದ ಕೇರಳಕ್ಕೆ ಕೆಲಸಕ್ಕೆ ಹೋಗುವವರ ಮೇಲೂ ನಿಗಾ ವಹಿಸಲು ಸಿಬ್ಬಂದಿಗೆ‌ ತಿಳಿಸಲಾಗಿದೆ’ ಎಂದು ಅವರು ಹೇಳಿದರು. 

ಗಡಿ ಗ್ರಾಮಗಳಲ್ಲೂ ಕಟ್ಟೆಚ್ಚರ: ಗಡಿಯಲ್ಲಿ ಮಾತ್ರವಲ್ಲದೇ ಕೇರಳಕ್ಕೆ ಗಡಿ ಹೊಂದಿರುವ ಗ್ರಾಮಗಳಲ್ಲೂ ಕಟ್ಟೆಚ್ಚರ ವಹಿಸಲಾಗುವುದು. ನಮ್ಮಲ್ಲಿ 158 ಗ್ರಾಮಗಳಿವೆ. ಅಲ್ಲಿಗೆ ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ಕಳುಹಿಸಿ ಮಾಹಿತಿ ಕಲೆ ಹಾಕಲಾಗುವುದು, ತಪಾಸಣೆ ನಡೆಸಲಾಗುವುದು’ ಎಂದು ಡಾ.ವಿಶ್ವೇಶ್ವರಯ್ಯ ಮಾಹಿತಿ ನೀಡಿದರು. 

ರೋಗ ಲಕ್ಷಣಗಳು: ಜ್ವರ, ತಲೆನೋವು, ಕೆಮ್ಮು, ತಲೆ ತಿರುಗುವಿಕೆ, ನೆಗಡಿ, ಗಂಟಲು ಕೆರೆತ, ಉಸಿರಾಟದ ತೊಂದರೆ, ವಾಂತಿ ಮತ್ತು ಅತಿಸಾರ.. ನಿಫಾ ವೈರಸ್‌ನ ರೋಗ ಲಕ್ಷಣಗಳು.

ಎರಡೂ ಚೆಕ್‌ಪೋಸ್ಟ್‌ನಲ್ಲಿ ನಿಗಾವಹಿಸಿ: ಮೂಲೆಹೊಳೆ ಚೆಕ್‌ಪೋಸ್ಟ್‌ ಮೂಲಕ ಕೇರಳದಿಂದ ನೇರವಾಗಿ ರಾಜ್ಯ ಪ್ರವೇಶಿಬಹುದು. ಇದಲ್ಲದೇ ಕೇರಳದಿಂದ ರಾಷ್ಟ್ರೀಯ ಹೆದ್ದಾರಿ 67ರ  ಮೂಲಕ ತಮಿಳುನಾಡಿನ ಮಾರ್ಗವಾಗಿ ರಾಜ್ಯ ಪ್ರವೇಶ ಮಾಡಬಹುದು. ಆದ್ದರಿಂದ ಮೂಲೆಹೊಳೆಯಲ್ಲಿ ಮಾತ್ರವಲ್ಲದೆ ಊಟಿ ರಸ್ತೆಯಲ್ಲಿರುವ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ನಲ್ಲೂ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಕ್ರಮವಹಿಸಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ದೀಲಿಪ್ ಒತ್ತಾಯಿಸಿದರು.

ಎಚ್ಚರಿಕೆ ವಹಿಸಲು ಮನವಿ 

ಈ ಮಧ್ಯೆ ಕೇರಳದಲ್ಲಿ ಕಂಡು ಬಂದಿರುವ ನಿಪಾ ವೈರಸ್‌ ಪ್ರಕರಣದ ಬಗ್ಗೆ ಜಿಲ್ಲೆಯ ಜನರು ಆತಂಕ ಪಡಬೇಕಾಗಿಲ್ಲ. ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಹಂದಿ ಕುದುರೆ ನಾಯಿ ಬೆಕ್ಕುಗಳಂತಹ ಸೋಂಕಿತ ಪ್ರಾಣಿಗಳಿಂದ ರೋಗ ಹರಡುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಬೇಕು. ರೋಗ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನೂ ಪ್ರತ್ಯೇಕವಾಗಿಸಬೇಕು. ಅವರು ಬಳಸುವ ಬಟ್ಟೆ ಪಾತ್ರೆಗಳು ಮುಖ್ಯವಾಗಿ ಸ್ನಾನ ಮತ್ತು ಶೌಚಾಲಯದಲ್ಲಿ ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಶುಚಿಗೊಳಿಸಬೇಕು.

ಹಸ್ತಲಾಘವ ಕೊಡುವುದನ್ನು ತಪ್ಪಿಸಿ ಸೋಂಕಿತರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಬೇಕು. ಎಲ್ಲ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಅಥವಾ ಬೇಯಿಸಿ ತಿನ್ನಬೇಕು. ಫ್ಲೂ ರೀತಿಯ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು.

ನೆರವಿಗಾಗಿ 104ಕ್ಕೆ ಕರೆ ಮಾಡಬೇಕು. ಪ್ರಾಣಿ ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರಾ ಶೇಂದಿ ಸೇವಿಸಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರೋಗಿಯ ಜೊಲ್ಲು ಬೆವರು ಮೂತ್ರ ಸಂಪರ್ಕ ತಪ್ಪಿಸಬೇಕು. ಹಂದಿ ಸಾಕಾಣಿಕಾ ವ್ಯಾಪ್ತಿಯಲ್ಲಿ ಬಾವಲಿಗಳು ಹಂದಿಗಳ ಸಂಪರ್ಕಕ್ಕೆ ಬಾರದಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. 

ಗುರುವಾರದಿಂದ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಕೇರಳದಿಂದ ಬರುವ ವಾಹನಗಳು ಪ್ರಯಾಣಿಕರ ತಪಾಸಣೆ ಮಾಡಲಾಗುವುದು
-ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT