ಬುಧವಾರ, ಅಕ್ಟೋಬರ್ 27, 2021
21 °C
ಮೂಲಸೌಕರ್ಯಗಳ ಕೊರತೆ, ಅಭಿವೃದ್ಧಿ ಕಾಣದ ಕೈಗಾರಿಕಾ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿಗೂ ಪೆಟ್ಟು

ದೊಡ್ಡ ಉದ್ಯಮಗಳಿಲ್ಲ, ಸ್ಥಳೀಯರಿಗೆ ಉದ್ಯೋಗವೂ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಹೊಂದಿರುವ ಗಡಿ ಜಿಲ್ಲೆ ಚಾಮರಾಜನಗರವು ಕೈಗಾರಿಕಾ ಅಭಿವೃದ್ಧಿಯಲ್ಲೂ ಹಿಂದುಳಿದಿದೆ. ಆರ್ಥಿಕವಾಗಿ ಜಿಲ್ಲೆ ಪ್ರಗತಿ ಕಾರಣದಿರುವುದಕ್ಕೆ ಇದೂ ಒಂದು ಕಾರಣ.

ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿ 24 ವರ್ಷಗಳು ಸಂದರೂ, ಹೆಚ್ಚೆಚ್ಚು ಉದ್ದಿಮೆಗಳು ಸ್ಥಾಪನೆಯಾಗುವ ವಾತಾವರಣ ನಿರ್ಮಾಣವಾಗಿಲ್ಲ. ನೈಸರ್ಗಿಕವಾಗಿ ಸಂಪತ್ಭರಿತವಾಗಿರುವ ಜಿಲ್ಲೆಯು ಕಪ್ಪು ಶಿಲೆಗೆ ಹೆಸರುವಾಸಿ. ಇಲ್ಲಿನ ಗ್ರ್ಯಾನೈಟ್‌ಗೆ ವಿದೇಶದಲ್ಲೂ ಬೇಡಿಕೆ ಇದೆ. ಹಾಗಾಗಿ, ಗ್ರ್ಯಾನೈಟ್‌ ಕಾರ್ಖಾನೆಗಳು 20ಕ್ಕೂ ಹೆಚ್ಚು ಇವೆ. ಈ ಪೈಕಿ 16 ಕಾರ್ಖಾನೆಗಳು ಹೊರ ದೇಶಗಳಿಗೆ ಗ್ರ್ಯಾನೈಟ್‌ ರಫ್ತು ಮಾಡುತ್ತವೆ. ಇವುಗಳ ವಾರ್ಷಿಕ ರಫ್ತು ವಹಿವಾಟು ₹1,000 ಕೋಟಿಗೂ ಅಧಿಕ ಇದೆ. ಜಿಲ್ಲೆಯ ಮಟ್ಟಿಗೆ ನಡೆಯುವ ದೊಡ್ಡ ಕೈಗಾರಿಕಾ ವಹಿವಾಟು ಎಂದರೆ ಇದುವೇ. ಉಳಿದಂತೆ ಒಂದು ಸಕ್ಕರೆ ಕಾರ್ಖಾನೆ, ಒಂದು ಗಾರ್ಮೆಂಟ್ಸ್‌ ಕಾರ್ಖಾನೆ, ಹಾಗೂ ಒಂದು ಚೆಂಡು ಹೂವಿನ ಸಂಸ್ಕರಣಾ ಘಟಕ ಇದೆ. ಅದು ಬಿಟ್ಟರೆ ಜಿಲ್ಲೆಯ ಯಾವ ಭಾಗದಲ್ಲೂ ದೊಡ್ಡ ಕೈಗಾರಿಕೆಗಳು ಕಾಣುವುದಿಲ್ಲ.

ಜಿಲ್ಲೆಯಲ್ಲಿ ಗುಡಿ ಕೈಗಾರಿಕೆಗಳು ಇವೆ. ಇವುಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೆಲವು ಕೈಗಾರಿಕೆಗಳಿವೆ. ಮೂಲ ಸೌಕರ್ಯಗಳ ಕೊರತೆಯಿಂದ ಇವು ನಲುಗಿವೆ. ಕೈಗಾರಿಕೆಗಳು ಇಲ್ಲದಿರುವುದರಿಂದ ವಿದ್ಯಾವಂತರಿಗೆ ಸ್ಥಳೀಯವಾಗಿ ಉದ್ಯೋಗ ಸಿಗುತ್ತಿಲ್ಲ. ಕೆಲಸಕ್ಕಾಗಿ ಮೈಸೂರು, ಬೆಂಗಳೂರು, ತಮಿಳುನಾಡಿನ ತಿರಪ್ಪೂರು, ಕೊಯಮತ್ತೂರಿನಂತಹ ನಗರಗಳನ್ನು ಅವಲಂಬಿಸಬೇಕಾಗಿದೆ.   

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಕೈಗಾರಿಕಾ ಪ್ರದೇಶಗಳು ಕೊಳ್ಳೇಗಾಲದಲ್ಲಿ (ನಾಲ್ಕು ದಶಕಗಳಷ್ಟು ಹಿಂದಿನಂದು), ಚಾಮರಾಜನಗರದ ಉತ್ತವಳ್ಳಿ ಬಳಿ, ಗುಂಡ್ಲುಪೇಟೆಯ ಹೊರ ವಲಯದ ವೀರನಗೇಟ್‌ ಬಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದೆ. ಆದರೆ, ಚಾಮರಾಜನಗರ ಹಾಗೂ ಗುಂಡ್ಲುಪೇಟೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಸಮಸ್ಯೆ ಇದೆ. ಕೈಗಾರಿಕೆಗೆ ಅತಿ ಅವಶ್ಯವಾದ ನೀರಿನ ಪೂರೈಕೆಯೇ ಇಲ್ಲಿಲ್ಲ. ನೀರಿನ ಕೊರತೆಯ ಕಾರಣಕ್ಕೆ ಕೈಗಾರಿಕೆ ಸ್ಥಾಪನೆಗೆ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ.

ಕೈಗಾರಿಕಾ ಪ್ರದೇಶ ಖಾಲಿ: ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ನಗರಕ್ಕೆ ಸಮೀಪದ ಕೆಲ್ಲಂಬಳ್ಳಿ–ಬದನಗುಪ್ಪೆ ಬಳಿ 1,400 ಎಕರೆ ಪ್ರದೇಶದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಐಡಿಬಿ) ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿತ್ತು. 2015ರಲ್ಲಿ ಇದರ ಉದ್ಘಾಟನೆಯಾಗಿತ್ತು. ಆರು ವರ್ಷಗಳು ಕಳೆದರೂ ಇನ್ನೂ ಕೈಗಾರಿಕೆಗಳು ಬಂದಿಲ್ಲ. ದೂರ ದೂರಲ್ಲಿ ಅಲ್ಲೊಂದು ಇಲ್ಲೊಂದು ಕಾರ್ಖಾನೆಗಳು ಕಾಣುವುದು ಬಿಟ್ಟರೆ ಉಳಿದ ಜಾಗ ಖಾಲಿಯಾಗಿದೆ. 

ರಸ್ತೆ, ವಿದ್ಯುತ್‌ ಸೌಲಭ್ಯ ಇದ್ದರೂ ಮೂರು ತಿಂಗಳ ಹಿಂದಿನವರೆಗೆ ನೀರಿನ ವ್ಯವಸ್ಥೆ ಇರಲಿಲ್ಲ. ಈಗ ನಂಜನಗೂಡಿನ ಬಳಿ ಕಪಿಲಾ ನದಿಯಿಂದ ₹42 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ನಿರ್ಮಿಸಿ ನೀರು ಪೂರೈಸಲಾಗುತ್ತಿದೆ. 232 ಘಟಕಗಳಿಗೆ ಅನುಮತಿ ನೀಡಲಾಗಿದೆ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಕೆಲವು ಘಟಕಗಳು ನಿರ್ಮಾಣ ಹಂತದಲ್ಲಿವೆ.  

ಭೂಮಿ ಹಂಚಿಕೆ ಮಾಡಿದ ನಂತರ ಉದ್ದಿಮೆ ಸ್ಥಾಪಿಸಲು ಐದು ವರ್ಷಗಳ ಕಾಲಾವಕಾಶ ಇದೆ. ಹಾಗಾಗಿ, ಭೂಮಿ ಪಡೆದವರು ಘಟಕ ಸ್ಥಾಪನೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ಕೋವಿಡ್‌ ಹಾವಳಿಯೂ ಸ್ವಲ್ಪ ಪರಿಣಾಮ ಬೀರಿದೆ. ಈಗ ಎಲ್ಲ ಸೌಕರ್ಯಗಳನ್ನು ಒದಗಿಸುವುದರಿಂದ ಬೇಗ ಉದ್ದಿಮೆ ಸ್ಥಾಪನೆಯಾಗಲಿದೆ ಎಂಬುದು ಅಧಿಕಾರಿಗಳ ಹೇಳಿಕೆ.   

ಪೂರಕ ವಾತಾವರಣ: ‘ಕೈಗಾರಿಕೆಗಳ ಅಭಿವೃದ್ಧಿಗೆ ಬೇಕಾದ ಪೂರಕ ವಾತಾವರಣ ಇದೆ. ರಸ್ತೆ, ರೈಲು ಮಾರ್ಗ, 45 ಕಿ.ಮೀ ದೂರದಲ್ಲಿ ವಿಮಾನ ನಿಲ್ದಾಣ ಎಲ್ಲವೂ ಇಲ್ಲಿದೆ. ಕೈಗಾರಿಕಾ ಪ್ರದೇಶ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೆ. ಮೈಸೂರು, ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು 100ರಿಂದ 150 ಕಿ.ಮೀ ದೂರದಲ್ಲಿವೆ. ಸರ್ಕಾರ ಒಂದಷ್ಟು ಪ್ರೋತ್ಸಾಹ ನೀಡಿದರೆ ಕೈಗಾರಿಕಾ ಕ್ಷೇತ್ರದಲ್ಲಿ ಜಿಲ್ಲೆ ಕ್ರಾಂತಿ ಮಾಡಲಿದೆ. ಸ್ಥಳೀಯರಿಗೂ ಸಾಕಷ್ಟೂ ಉದ್ಯೋಗಗಳು ಸೃಷ್ಟಿಯಾಗಲಿದೆ. ಜಿಲ್ಲೆಯಲ್ಲಿ ಕೌಶಲ ಹೊಂದಿರುವ ಯುವಕ ಯುವತಿಯರ ಕೊರತೆ ಇದ್ದು, ಅವರಿಗೆ ತರಬೇತಿ ನೀಡುವ ಅಗತ್ಯವಿದೆ’ ಎಂಬುದು ಸ್ಥಳೀಯ ಉದ್ಯಮಿಗಳ ಮಾತು. 

ಉದ್ದಿಮೆ ಬೆಳವಣಿಗೆಗ ಜಿಲ್ಲಾಡಳಿತವೂ ಪ್ರಯತ್ನ ಮಾಡುತ್ತಿದೆ. ಸಣ್ಣ ಉದ್ಯಮಿಗಳಿಗೆ ಅದರಲ್ಲೂ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಕೈಗಾರಿಕಾ ಪ್ರದೇಶದಲ್ಲಿ  132 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಉಪ ಬಡಾವಣೆ ನಿರ್ಮಿಸುತ್ತಿದೆ. 

ಜನರು ಏನಂತಾರೆ?

ಕೃಷಿ ಕೈಗಾರಿಕೆಗೆ ವಿಪುಲ ಅವಕಾಶ 

ನಮ್ಮದು ಕೃಷಿ ಪ್ರಧಾನ ಜಿಲ್ಲೆ. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಯಲಾಗುತ್ತದೆ. ಹಾಗಾಗಿ ಕೃಷಿ ಆಧರಿತ ಉದ್ದಿಮೆ ಸ್ಥಾಪನೆಗೆ ಹೆಚ್ಚು ಅವಕಾಶ ಇದೆ. ಆದರೆ, ಸರ್ಕಾರದ ನಿರುತ್ಸಾಹದಿಂದಾಗಿ ಕೈಗಾರಿಕೆ ಬೆಳೆಯುತ್ತಿಲ್ಲ. ಕೈಗಾರಿಕಾ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ. ಹೊಸ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಹಂಚಿಕೆಯಾದವರು ದುಡ್ಡು ಪಾವತಿಗೆ ಕಷ್ಟ ಪಡುತ್ತಿದ್ದಾರೆ ಎಂಬ ಮಾಹಿತಿ ಇದೆ. ನೀರಿನ ಕೊರತೆ, ವಿದ್ಯುತ್‌ ದರ ಏರಿಕೆ, ಕಠಿಣ ನಿಯಮಗಳು ಜನರು ಉದ್ದಿಮೆಯಿಂದ ದೂರ ಉಳಿಯುವಂತೆ ಮಾಡಿದೆ.  

ಎಂ.ಮಹೇಶ್‌ ಪ್ರಭು, ರೈತ ಸಂಘದ ರಾಜ್ಯ ಉಪಾಧ್ಯಕ್ಷ

ಎಸ್‌ಸಿ, ಎಸ್‌ಟಿ ಜನರಿಗೆ ಭೂಮಿ ಇಲ್ಲ 

ಯಳಂದೂರು ತಾಲ್ಲೂಕಿನಲ್ಲಿ ಕೈಗಾರಿಕೆ ಬೇಕಾದ ಜಮೀನು ಹೆಚ್ಚಿಲ್ಲ. ವಿಶೇಷವಾಗಿ ಪರಿಶಿಷ್ಟರಿಗೆ ಸರ್ಕಾರ ನೀಡುವ ಸವಲತ್ತನ್ನು ಬಳಸಿಕೊಂಡು, ಉದ್ಯಮ ಸ್ಥಾಪಿಸುವ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ. ನುರಿತ ಕೆಲಸಗಾರರ ಕೊರತೆಯೂ ಕಾಡಿದೆ. ಸಂಪನ್ಮೂಲ ಮತ್ತು ಹೂಡಿಕೆ ಕೊರತೆಯೂ ಕಾಡಿದೆ. ನವೋದ್ಯಮಗಳ ಬಗ್ಗೆ ಅರಿವಿನ ಕೊರತೆ ಇದೆ.  ಅರೆ ಕುಶಲ ಕಾರ್ಮಿಕರಲ್ಲಿ ಮೂಢನಂಬಿಕೆ ಮನೆ ಮಾಡಿದ್ದು, ಮಹಿಳೆಯರು ಹೊರಗೆ ದುಡಿಮೆ ಮಾಡುವುದನ್ನು ಇಷ್ಟ ಪಡುತ್ತಿಲ್ಲ. ತಾಂತ್ರಿಕ ಶಿಕ್ಷಣದ ಮಿತಿಯೂ ಕೈಗಾರಿಕೆ ಸ್ಥಾಪನೆಗೆ ಹಿನ್ನಡೆ ತಂದಿದೆ. 

ತ್ರಿವೇಣಿ, ಸಹ ಹೃದಯ ಫೌಂಢೇಷನ್ ಅಧ್ಯಕ್ಷೆ, ಯಳಂದೂರು 

ಗೃಹ ಕೈಗಾರಿಕೆ ಮಾತ್ರ

ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಗುಡಿ ಕೈಗಾರಿಕೆಗಳು ಹೆಚ್ಚಿವೆ. ಇವು ಉದ್ಯಮವಾಗಿ ಗುರುತಿಸುವಷ್ಟು ಬೆಳೆದಿಲ್ಲ. ಬಹುತೇಕರು ಕೃಷಿ ಕಾರ್ಮಿಕರಾಗಿದ್ದು, ಬಿಡುವಿನ ವೇಳೆಯಲ್ಲಿ ಮಾತ್ರ ಕೆಲಸ ಮಾಡುತ್ತಾರೆ. ಸರ್ಕಾರವೂ ಸ್ಥಳ, ನೀರು ಮತ್ತು ಮೂಲ ಸೌಕರ್ಯ ವಿಸ್ತರಿಸುವ ಬಗ್ಗೆ ಯಾವುದೇ ಮಾಹಿತಿ, ಸಹಕಾರ ನೀಡಿಲ್ಲ. ಪಟ್ಟಣಗಳಲ್ಲಿ ತಾಂತ್ರಿಕ ಶಿಕ್ಷಣ ಕಲಿತ ಬೆರಳೆಣಿಕೆ ಮಂದಿ ಹೊರ ಜಿಲ್ಲೆಗಳಿಗೆ ತೆರಳಿ ದುಡಿಯುತ್ತಿದ್ದು, ಬೃಹತ್ ಕೈಗಾರಿಕೆ ಸ್ಥಾಪಿಸುವ ಬಗ್ಗೆ ಯಾರು ಮುಂದಾಗುತ್ತಿಲ್ಲ.

ಶಕೀಲ್ ಅಹಮದ್, ರೇಷ್ಮೆ ಉದ್ಯಮಿ, ಯಳಂದೂರು

ಅರಿಸಿನ ಉದ್ಯಮ ಪ್ರೋತ್ಸಾಹಿಸಿ

ಕಳೆದ ಬಜೆಟ್‌ನಲ್ಲಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ (ಆತ್ಮ ನಿರ್ಭರ) ಅರಿಸಿನವನ್ನು ನಮ್ಮ ಜಿಲ್ಲೆಗೆ ಆಯ್ಕೆ ಮಾಡಲಾಗಿತ್ತು. ತರಬೇತಿ ನೀಡುವ ಕೆಲಸ ಬಿಟ್ಟು, ಬೇರೇನೂ ಆಗಿಲ್ಲ. ಅರಿಸಿನ ಉಪ ಉತ್ಪನ್ನಕ್ಕೆ ಸಣ್ಣ ಕೈಗಾರಿಕೆಯೂ ಸ್ಥಾಪನೆ ಆಗಿಲ್ಲ. ಎಪಿಎಂಸಿಯಲ್ಲಿ ಅರಿಸಿನ ಸಂಸ್ಕರಣೆ ಘಟಕ ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಈಗ, ಹಣ ಇಲ್ಲ, ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾಡಿ ಎಂದು ಸರ್ಕಾರ ಹೇಳುತ್ತಿದೆ. ಎಪಿಎಂಸಿಗಳು ಕೃಷಿಕಾಯ್ದೆ ತಿದ್ದುಪಡಿ ಪರಿಣಾಮ ಮುಚ್ಚುವ ಹಂತ ತಲುಪಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೇ ಅರಿಸಿನ ಉದ್ಯಮಕ್ಕೆ ಉತ್ತೇಜನ ನೀಡಬೇಕು.

ಬಿ.ಕೆ.ರವಿಕುಮಾರ್‌, ಅರಿಸಿನ ಬೆಳೆಗಾರ, ಎಪಿಎಂಸಿ ಸದಸ್ಯ, ಚಾಮರಾಜನಗರ

ಸಮಸ್ಯೆಗಳು ಬಗೆಹರಿದಿಲ್ಲ’

ಈ ವರ್ಷಾರಂಭದಲ್ಲಿ ಹಿಂದಿನ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೈಗಾರಿಕಾ ಸ್ಥಾಪಿಸಲು ಇರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆಯಾಗಿರುವುದು ಬಿಟ್ಟರೆ, ಉಳಿದ ಸಮಸ್ಯೆಗಳು ಹಾಗೆಯೇ ಇವೆ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುವ ಕೈಗಾರಿಕಾ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ನೀರಿನ ಕೊರತೆ ಇದ್ದರೆ ಉದ್ದಿಮೆ ಸ್ಥಾಪಿಸುವುದಾದರೂ ಹೇಗೆ? ಬ್ಯಾಂಕುಗಳ ಸಾಲ ನೀಡಿಕೆ ಪ್ರಕ್ರಿಯೆ ಸಂಕೀರ್ಣವಾಗಿದೆ. ಉದ್ದಿಮೆ ಸ್ಥಾಪನೆ ಯೋಜನೆ ಚೆನ್ನಾಗಿದ್ದಾರೂ, ಪ್ರಯೋಗಿಕವಾಗಿ ಅದನ್ನು ಅಳವಡಿಸುವುದು ಕಷ್ಟ. ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್‌ ನಿರ್ವಹಣೆ ಸರಿಯಾಗಿಲ್ಲ. ಸುರಕ್ಷತೆ ವ್ಯವಸ್ಥೆ ಇಲ್ಲ. ಚಿರತೆ ಹಾವಳಿ ಇದೆ. ಇಂತಹ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. 

ಎ.ಜಯಸಿಂಹ, ಉದ್ಯಮಿ ಹಾಗೂ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

ಶೀಘ್ರ ಬರಲಿವೆ ಕೈಗಾರಿಕೆಗಳು...

ಜಿಲ್ಲೆಯಲ್ಲಿ ಗ್ರ್ಯಾನೈಟ್‌ಗೆ ಸಂಬಂಧಿಸಿದ ಕೈಗಾರಿಕಾ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿವೆ. ವಾರ್ಷಿಕವಾಗಿ ₹1000 ಕೋಟಿಗೂ ಹೆಚ್ಚು ಮೌಲ್ಯದ ರಫ್ತು ನಡೆಸುತ್ತಿವೆ. ಚಾಮರಾಜನಗರದ ಉತ್ತುವಳ್ಳಿಯ, ಗುಂಡ್ಲುಪೇಟೆಯಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ನೀರಿನ ಕೊರತೆ ಇರುವುದು ನಿಜ. ಇದರಿಂದ ಇಲ್ಲಿ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ.  ಚಾಮರಾಜನಗರ ಹೊರವಲಯದ ಕೆಲ್ಲಂಬಳ್ಳಿ– ಬದನಗುಪ್ಪೆಯಲ್ಲಿ ಕೆಐಡಿಬಿ ಅಭಿವೃದ್ಧಿ ಪಡಿಸಿರುವ 1,400 ಎಕರೆ ಪ್ರದೇಶದಲ್ಲಿ ಈಗ ನೀರು, ವಿದ್ಯುತ್‌ ರಸ್ತೆ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. 232 ಘಟಕಗಳಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ 11 ಉದ್ದಿಮೆಗಳಿಗೆ ಅನುಮತಿ ನೀಡಲಾಗಿದೆ.  ಎಂಟು ಉದ್ದಿಮೆಗಳು ಕಾರ್ಯಾರಂಭ ಮಾಡಿವೆ. 20 ಕೈಗಾರಿಕೆಗಳು ಸ್ಥಾಪನೆಯ ಕೆಲಸ ನಡೆಯುತ್ತಿವೆ. ಶೀಘ್ರದಲ್ಲಿ ಕೈಗಾರಿಕೆ ಸ್ಥಾಪಿಸಿ ಎಂದು ಜಮೀನು ಪಡೆದವರ ಮೇಲೆ ಒತ್ತಡ ಹಾಕುತ್ತಿದ್ದೇವೆ. ಶೀಘ್ರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. 

ರಾಜೇಂದ್ರ ಪ್ರಸಾದ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ (ಪ್ರಭಾರ)

–––

ನಮ್ಮಲ್ಲಿ ವಿಸ್ತಾರವಾದ ಕೈಗಾರಿಕಾ ಪ್ರದೇಶವಿದೆ. ಉದ್ದಿಮೆಗಳನ್ನು ಆಕರ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಗಮನ ಸೆಳೆದಿದ್ದೇನೆ
ಸಿ.ಪುಟ್ಟರಂಗಶೆಟ್ಟಿ, ಶಾಸಕ

––

ಕೈಗಾರಿಕಾ ಸ್ಥಳದಲ್ಲಿ ನೀರು, ವಿದ್ಯುತ್ ಮತ್ತು ಇ– ಸ್ವತ್ತಿನ ಸಮಸ್ಯೆ ಇದೆ. ಬ್ಯಾಂಕ್‌ಗಳಲ್ಲಿ ಸಾಲವೂ ಸಿಗುತ್ತಿಲ್ಲ. ಹೀಗಾದರೆ ಕಾರ್ಖಾನೆ ಆರಂಭಿಸುವುದು ಹೇಗೆ?
ಆನಂದ್, ಉದ್ಯಮಿ, ಮೈಸೂರು

–––

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ., ಬಿ.ಬಸವರಾಜು, ಅವಿನ್‌ ಪ್ರಕಾಶ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು