ಬುಧವಾರ, ಆಗಸ್ಟ್ 10, 2022
25 °C
ಹನೂರು: ಪಟ್ಟಣದಿಂದ ಎರಡು ಕಿ.ಮೀ ದೂರದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್‌

ಹನೂರು: ಬಸ್‌ ಸೌಲಭ್ಯವಿಲ್ಲ; ಹೆಣ್ಣು ಮಕ್ಕಳ ಪರದಾಟ

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಪಟ್ಟಣದ ಹೊರವಲಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ವಿದ್ಯಾರ್ಥಿನಿ ನಿಲಯಕ್ಕೆ ಬಸ್ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು ಎರಡು ಕಿ.ಮೀ ನಡೆದುಕೊಂಡೇ ಕಾಲೇಜಿಗೆ ಹೋಗಬೇಕಿದೆ.

ಸಮೀಪದ ಚಿಂಚಳ್ಳಿ ಗ್ರಾಮದ ಬಳಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಇದು ಪಟ್ಟಣದಿಂದ ದೂರವಿದೆ. ಪಟ್ಟಣದಲ್ಲಿರುವ ಕ್ರಿಸ್ತರಾಜ, ವಿವೇಕಾನಂದ, ಜಿ.ವಿ.ಗೌಡ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿಗೆ ಹೋಗಲು ಪ್ರತಿನಿತ್ಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿನಿ ನಿಲಯ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್ ಅವರು ಕಟ್ಟಡವನ್ನು ಉದ್ಘಾಟಿಸಿದ್ದರು.

ಸ್ವಂತ ಕಟ್ಟಡ ನಿರ್ಮಾಣವಾಗಿ ವಿದ್ಯಾರ್ಥಿಗಳ ವಾಸ್ತವ್ಯ, ಓದಿಗೆ ಅನುಕೂಲವಾದರೆ, ಬಸ್‌ ಸೌಲಭ್ಯ ಇಲ್ಲದಿರುವುದರಿಂದ ಕಾಲೇಜುಗಳಿಗೆ ಹೋಗಿ ಬರುವುದು ದೊಡ್ಡ ಸಾಹಸವಾಗಿದೆ. ನಿಗದಿತ ಸಮಯಕ್ಕೆ  ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಸಂಚರಿಸುವ ಖಾಸಗಿ ವಾಹನ ಗಳು ಅಥವಾ ಆಟೊಗಳಿಗೆ ಹೆಚ್ಚು ದುಡ್ಡು ತೆತ್ತು ಕಾಲೇಜಿಗೆ ತೆರಳುವಂತಾಗಿದೆ.

‘ಕಾಲೇಜಿಗೆ ತೆರಳಲು ವಿದ್ಯಾರ್ಥಿ ಗಳಿಗೆ ಬಸ್ ಸೌಕರ್ಯ ಕಲ್ಪಿಸಿಕೊಡುವ ಬಗ್ಗೆ ಸಾರಿಗೆ ನಿಗಮದ ಘಟಕ ನಿಯಂತ್ರಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಗಮನಹರಿಸುತ್ತಿಲ್ಲ. ಕೂಡಲೇ ಸಾರಿಗೆ ನಿಗಮದ ಅಧಿಕಾರಿಗಳು ಪರಿಶೀಲಿಸಿ ಬಸ್ ಸಂಚಾರ ಆರಂಭಿ ಸುವಂತೆ ಸೂಚಿಸಬೇಕು’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಸೇತುವೆ ನಿರ್ಮಿಸಿ: ಪಟ್ಟಣದಿಂದ ವಿದ್ಯಾರ್ಥಿ ನಿಲಯಕ್ಕೆ ಹಾದು ಹೋಗುವ ಮಧ್ಯೆ ಬರುವ ಸೇತುವೆ ಕೆಳಮಟ್ಟದಲ್ಲಿದೆ.  ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಹರಿಯುವುದ ರಿಂದ  ಮಕ್ಕಳು ಕಾಲೇಜಿಗೆ ತೆರಳಲು ತೊಂದರೆಯಾಗುತ್ತಿದೆ.  ಮಳೆ ಜಾಸ್ತಿಯಾದರೆ ಒಮ್ಮೊಮ್ಮೆ ಅಧಿಕವಾಗಿ ನೀರು ಹರಿಯುತ್ತದೆ. ಆ ದಿನ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಸಾಧ್ಯವಾಗದೇ ವಿದ್ಯಾರ್ಥಿ ನಿಲಯದಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಮನವಿ ಮಾಡಲಾಗಿದೆ: ‘ಚಿಂಚಳ್ಳಿಯಲ್ಲಿರುವ ಹಾಸ್ಟೆಲ್ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಈಗಾಗಲೇ ಕೆಎಸ್‌ಆರ್‌ಟಿಸಿಯ ವಿಭಾಗ ನಿಯಂತ್ರಾಣಾಧಿಕಾರಿಗಳ ಕಚೇರಿಗೆ ಮೂರು ಬಾರಿ ಹೋಗಿ ಮನವಿ ಮಾಡಿದ್ದೇನೆ. ಜಿಲ್ಲಾಧಿಕಾರಿ ಹಾಗೂ ಹನೂರು ಶಾಸಕರು ಬಸ್ ಬಿಡುವಂತೆ ಸೂಚಿಸಿದ್ದಾರೆ.  ಅಲ್ಲದೆ ಗಾಣಿಗಮಂಗಲ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲೂ ಜಿಲ್ಲಾಧಿಕಾರಿಗಳು ಹಾಸ್ಟೆಲ್ ಮಾರ್ಗಕ್ಕೆ ಬಸ್ ಬಿಡುವಂತೆ ಸೂಚಿಸಿದ್ದಾರೆ ಇಷ್ಟಾದರೂ ಸಾರಿಗೆ ಇಲಾಖೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಧಿಕಾರಿ ರೇವಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕೊಳ್ಳೇಗಾಲದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಹಾಜರಾತಿ ಕೊರತೆ ಆತಂಕ

ಪಟ್ಟಣದಲ್ಲಿ ಮೂರು ಪದವಿ ಪೂರ್ವ ಕಾಲೇಜು ಹಾಗೂ ಒಂದು ಪ್ರಥಮ ದರ್ಜೆ ಕಾಲೇಜು ಇರುವುದರಿಂದ ತಾಲ್ಲೂಕಿನಾದ್ಯಂತ ವಿದ್ಯಾರ್ಥಿಗಳು ಇಲ್ಲಿಗೆ ವ್ಯಾಸಂಗಕ್ಕೆ ಬರುತ್ತಾರೆ. ಆದರೆ, ವಿದ್ಯಾರ್ಥಿ ನಿಲಯಕ್ಕೂ ಕಾಲೇಜಿಗೂ ದೂರ ಇರುವುದರಿಂದ ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿ ನಿಲಯಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸಬಹುದು ಎಂದು ಆತಂಕ ಅಧಿಕಾರಿಗಳನ್ನು ಕಾಡುತ್ತಿದೆ.

--

ವಿದ್ಯಾರ್ಥಿ ನಿಲಯಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿತ್ತು. ಮತ್ತೊಮ್ಮೆ ಸಾರಿಗೆ ನಿಯಂತ್ರಣಾಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು

-ಆರ್. ನರೇಂದ್ರ, ಶಾಸಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು