ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ತಂಗುದಾಣ ಇಲ್ಲದೆ ಬಸವಳಿದ ಪ್ರಯಾಣಿಕರು

ಬಿಸಿಲಲ್ಲೇ ಬಸ್‌ಗಾಗಿ ಕಾಯುವ ಜನ, ಮರ, ಕಟ್ಟಡಗಳ ನೆರಳೇ ಆಸರೆ
Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಸೂಕ್ತ ತಂಗುದಾಣಗಳಿಲ್ಲದೇ ಬಸ್‌ಗಳಿಗೆ ಕಾಯುವ ಪ್ರಯಾಣಿಕರು ಬಸವಳಿಯುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕೊಳ್ಳೇಗಾಲದಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ತಾತ್ಕಾಲಿಕ ಬಸ್‌ ನಿಲ್ದಾಣದಲ್ಲೂ ಸರಿಯಾದ ನೆರಳಿನ ವ್ಯವಸ್ಥೆ ಇಲ್ಲ. ಇದು ಒಂದು ಕಡೆಯಾದರೆ, ನಗರದ ಪ್ರಮುಖ ರಸ್ತೆಗಳಲ್ಲಿರುವ ಬಸ್‌ ನಿಲ್ಲಿಸುವ ಸ್ಥಳಗಳಲ್ಲಿ ಎಲ್ಲೂ ತಂಗುದಾಣಗಳು ಇಲ್ಲ. ಇದರಿಂದಾಗಿ ಮಹಿಳೆಯರು, ಮಕ್ಕಳು, ವೃದ್ಧರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ತಂಗುದಾಣಗಳು ಇಲ್ಲದಿರುವುದರಿಂದ‍ಪ್ರಯಾಣಿಕರು ಬಿಸಿಲಲ್ಲಿ ಬಸ್‌ಗಳಿಗೆ ಕಾಯಬೇಕಾದ ಸ್ಥಿತಿ ಇದೆ. ಮರಗಳಿದ್ದ ಕಡೆ ಅದರ ನೆರಳಿನ ಆಸರೆಯನ್ನು ಪಡೆಯುತ್ತಿದ್ದಾರೆ. ಇಲ್ಲದಿರುವ ಕಡೆ, ಕಟ್ಟಡಗಳ ನೆರಳು, ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಗಂಟೆಗೊಮ್ಮೆ ಬಸ್‌ಗಳಿರುತ್ತವೆ. ಒಂದು ಬಸ್‌ ತಪ್ಪಿದರೆ ಮತ್ತೆ ಒಂದು ಗಂಟೆ ಕಾಯಬೇಕಾಗಿದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಬಿಸಿಲಿನಲ್ಲೇ ನಿಂತು ಬಸವಳಿಯಬೇಕು.

‘ಕೊಳ್ಳೇಗಾಲವು ಹಲವು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಸ್ಥಳವಾಗಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿರುತ್ತದೆ. ಸಾವಿರಾರು ಮಂದಿ ಇಲ್ಲಿಗೆ ಬರುತ್ತಿರುತ್ತಾರೆ. ಬಸ್‌ಗಳಿಗೆ ಕಾಯುವವರಿಗೆ ನೆರಳಿನ ವ್ಯವಸ್ಥೆ ಇಲ್ಲದಿರುವುದರಿಂದ ಬಿಸಿಲಿನಲ್ಲೇ ಅವರು ನಿಲ್ಲಬೇಕಾಗಿದೆ’ ಎಂದು ಪ್ರಯಾಣಿಕ ಪರಶಿವ ‘ಪ‍್ರಜಾವಾಣಿ’ಗೆ ತಿಳಿಸಿದರು.

ಹಿಂದೆ ಇತ್ತು, ಮತ್ತೆ ನಿರ್ಮಾಣ ಆಗಿಲ್ಲ

ಹಿಂದೆ ನಗರದ ಪ್ರಮುಖ ಸ್ಥಳಗಳಲ್ಲಿ ಬಸ್‌ ತಂಗು ದಾಣಗಳಿದ್ದವು. ಎಸ್.ವಿ.ಕೆ ಕಾಲೇಜು ವೃತ್ತದ ಬಸ್‌ ತಂಗುದಾಣ ಬೆಂಗಳೂರಿನ ಕಡೆಗೆ ಹೋಗುವವರಿಗೆ ಅನುಕೂಲವಾಗುತ್ತಿತ್ತು. ಎ.ಡಿ.ಬಿ ವೃತ್ತದಲ್ಲಿದ್ದ ತಂಗುದಾಣ ಮಹದೇಶ್ವರ ಬೆಟ್ಟದ ಕಡೆ ಹೋಗುವವರಿಗೆ, ಮುಡಿಗುಂಡದಲ್ಲಿ ಇದ್ದ ತಂಗುದಾಣ ಮೈಸೂರು ಮತ್ತು ಚಾಮರಾಜನಗರಕ್ಕೆ ಹೋಗುವ ಬಸ್‌ಗಳಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ನೆರಳು ನೀಡುತ್ತಿತ್ತು.

ಈ ಮೂರು ತಂಗುದಾಣಗಳೂ ಈಗ ಇಲ್ಲ. ರಸ್ತೆ ವಿಸ್ತರಣೆ ಮಾಡುವ ವೇಳೆ ಬಸ್ ತಂಗುದಾಣಗಳನ್ನು ಒಡೆದು ಹಾಕಲಾಗಿತ್ತು. ರಸ್ತೆ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಆ ಸ್ಥಳಗಳಲ್ಲಿ ಬಸ್‌ ತಂಗುದಾಣಗಳು ಇನ್ನೂ ನಿರ್ಮಾಣವಾಗಿಲ್ಲ. ನಗರಸಭೆ, ಶಾಸಕರೂ ಇತ್ತ ಗಮನ ಹರಿಸಿದಂತೆ ಕಾಣುತ್ತಿಲ್ಲ. ಇದು ಜನರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ನಗರಸಭೆ ಆಯುಕ್ತ ನಾಗಶೆಟ್ಟಿ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ಅನುದಾನದ ಕೊರತೆ: ಶಾಸಕ

ಈ ಬಗ್ಗೆ ‘ಪ್ರಜಾವಾ‌ಣಿ’ಯೊಂದಿಗೆ ಮಾತನಾಡಿದ ಸ್ಥಳೀಯ ಶಾಸಕ ಎನ್‌.ಮಹೇಶ್‌ ಅವರು, ‘ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 20 ಬಸ್‌ ತಂಗುದಾಣಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇನೆ. ಸದ್ಯಕ್ಕೆ ಅನುದಾನದ ಕೊರತೆ ಇದೆ. ಅನುದಾನ ಬಂದ ನಂತರ, ನಗರ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ತಂಗುದಾಣ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT