ಮಂಗಳವಾರ, ಆಗಸ್ಟ್ 4, 2020
22 °C
ಯಳಂದೂರು: ಸೋಂಕು ಹೆಚ್ಚಾದಂತೆ ಊಟ, ತಿಂಡಿಗೆ ಬರುವವರ ಸಂಖ್ಯೆ ಕುಸಿತ

ಚಾಮರಾಜನಗರ | ಕೋವಿಡ್‌–19ನಿಂದಾಗಿ ಹೋಟೆ‌ಲ್‌ಗಳತ್ತ ಸುಳಿಯದ ಜನ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಲಾಕ್‌ಡೌನ್‌ ಸಡಿಲಿಕೆಯಾಗಿ ತಾಲ್ಲೂಕಿನಲ್ಲಿ ಹೋಟೆಲ್‌ಗಳು ಆರಂಭವಾಗಿ ವ್ಯಾಪಾರ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಏಟು ಬಿದ್ದಿದೆ. ಗ್ರಾಮ ಮತ್ತು ಪಟ್ಟಣಗಳಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದ್ದಂತೆ ಹೋಟೆಲ್‌ಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಶೇ 70ರಷ್ಟು ವಹಿವಾಟು ಕುಸಿತ ಕಂಡಿದೆ. 

ಜೂನ್‌ನಲ್ಲಿ ಸಣ್ಣಪುಟ್ಟ ಹೋಟೆಲ್‌ಗಳು ತೆರೆದಿದ್ದವು. ಸದಾ ಜನ ಜಂಗುಳಿಯಿಂದ ತುಂಬಿರುತ್ತಿದ್ದ ದೊಡ್ಡ ಹೋಟೆಲ್‌ಗಳಲ್ಲಿ ಪಾರ್ಸೆಲ್ ವಿತರಿಸಲಾಗುತ್ತಿತ್ತು. ನಂತರ ಗ್ರಾಹಕರಿಗೆ ಕುಳಿತು ಆಹಾರ ಸೇವಿಸಲು ಅವಕಾಶ ಕಲ್ಪಿಸಲಾಗಿತ್ತು. ಸೋಂಕು ಹೆಚ್ಚಳದ ಕಾರಣದಿಂದ ಹೋಟೆಲ್‌ಗಳಿಗೆ ಬರುವ ಗ್ರಾಹಕರಿಗೆ ಬಾಳೆಲೆ ಹಾಕಿ ಶುಚಿ–ರುಚಿಯಾದ ತಿಂಡಿ ನೀಡಿದರೂ ಹೋಟೆಲ್‌ಗಳತ್ತ ಬರುತ್ತಿಲ್ಲ.

‘ಈಗಾಗಲೇ ಬಾಣಸಿಗರು ಮತ್ತು ಕಾರ್ಮಿಕರ ಕೊರತೆ ಉಂಟಾಗಿದೆ. ಲಾಕ್‌ಡೌನ್ ಪರಿಣಾಮ ಕಾರ್ಮಿಕರು ಊರುಗಳತ್ತ ತೆರಳಿದ್ದಾರೆ. ಹೀಗಾಗಿ, ಮಾಲೀಕರೇ ತಿಂಡಿ, ಉಪಾಹಾರಗಳಿಗೆ ವಹಿವಾಟು ಮಿತಿಗೊಳಿಸಿದ್ದಾರೆ. ಆದರೂ, ಮಧ್ಯಾಹ್ನದ ಊಟ ಮತ್ತು ತಿಂಡಿಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆದಿತ್ತು’ ಎಂದು ಫ್ರೆಂಡ್ಸ್ ಹೋಟೆಲ್ ಮಾಲೀಕ ಬಾಲು ಹೇಳಿದರು.  

ಕೋವಿಡ್ ಭೀತಿಯಿಂದ ಹೋಟೆಲ್‌ಗಳಲ್ಲಿ ಸ್ಟೀಲ್ ತಟ್ಟೆ ಬದಲಾಗಿ, ಪ್ಲಾಸ್ಟಿಕ್ ತಟ್ಟೆ, ಚಮಚ ಮತ್ತು ಗ್ಲಾಸ್ ಬಳಕೆ ಮಾಡಲಾಗುತ್ತಿದೆ. ಚಹಾಕ್ಕೂ ಪೇಪರ್ ಲೋಟ ಬಳಸುತ್ತಿದ್ದಾರೆ. ಕೆಲವರು ಆರೋಗ್ಯದ ದೃಷ್ಟಿಯಿಂದ ಬಾಳೆಎಲೆಯಲ್ಲಿ ಆಹಾರ ಬಡಿಸುತ್ತಿದ್ದಾರೆ. 

‘ಪ್ಲಾಸ್ಟಿಕ್ ತಟ್ಟೆ, ಲೋಟವನ್ನು ಸುಲಭವಾಗಿ ವಿಲೇವಾರಿ ಮಾಡಬಹುದು. ಅಲ್ಲದೆ, ತೊಳೆಯುವ ತಾಪತ್ರಯ ಇರುವುದಿಲ್ಲ. ಆದರೆ, ಇದು ಮತ್ತೆ ಬೀದಿಗೆ ಬೀಳುತ್ತದೆ. ನಿರ್ವಹಣೆಯ ಸಮಸ್ಯೆಯೂ ಎದುರಾಗುತ್ತದೆ. ಹಾಗಾಗಿ, ಎಲೆ ಹಾಕಿ ತಿಂಡಿ ಬಡಿಸುತ್ತೇವೆ’ ಎಂದು ಹೋಟೆಲ್ ಮಾಲೀಕ ಬಸವಣ್ಣ ಅವರು ಹೇಳಿದರು.  

ಪಟ್ಟಣದ ಬಸ್ ನಿಲ್ದಾಣ ಬಳಿ ಮಾಂಸಾಹಾರ ಮತ್ತು ಸಸ್ಯಾಹಾರ ಹೋಟೆಲ್‌ಗಳಿವೆ. ತಳ್ಳುಗಾಡಿಗಳಲ್ಲೂ ವ್ಯಾಪಾರ ನಡೆಯುತ್ತಿದೆ. ಆದರೆ, ಗ್ರಾಮಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೋಟೆಲ್ ವಹಿವಾಟಿಗೆ ದೊಡ್ಡ ಹೊಡೆತ ನೀಡಿದೆ. ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದವರ ಸಂಖ್ಯೆಯೂ ಕುಸಿದಿದೆ.

‘ಚಿಕನ್ ಬಿರಿಯಾನಿ ₹60ಕ್ಕೆ ನೀಡುತ್ತೇವೆ. ತಿಂಡಿಗಳ ದರ ₹30 ದಾಟುವುದಿಲ್ಲ. ಮಧ್ಯಾಹ್ನ ಸಮಯ ಊಟಕ್ಕಾಗಿ ಜನರು ತುಂಬಿ ಹೋಗುತ್ತಿದ್ದರು. ವಿವಿಧ ಗ್ರಾಮಗಳಿಂದ ಬರುವವರು ಕಾಯಂ ಆಗಿ ಊಟ ಮಾಡುತ್ತಿದ್ದರು. ಎಲ್ಲವೂ ಬಂದ್ ಆಗಿದೆ’ ಎನ್ನುತ್ತಾರೆ ಹೋಟೆಲ್‌ಗಳ ಸಿಬ್ಬಂದಿ.

‘ಗ್ರಾಮೀಣ ಭಾಗಗಳಲ್ಲಿ ಬಸ್ ಸಂಚಾರ ಇದ್ದರೂ ಜನರು ನಿರೀಕ್ಷಿತ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ. ಮದುವೆ ಮತ್ತಿತರ ಕಾರ್ಯಕ್ರಮಗಳು ಇಲ್ಲ. ಹೀಗಾಗಿ, ವ್ಯಾಪಾರ ಇಲ್ಲದಂತೆ ಆಗಿದೆ. ಬೆಳಿಗ್ಗೆ 11 ವರೆಯಿಂದ 4 ಗಂಟೆಗೆ ಊಟ, ತಿಂಡಿ ಸಿಗುತ್ತದೆ. 30 ಪ್ಲೇಟ್ ಮಾರಾಟವಾದರೆ ಅದೇ ಹೆಚ್ಚು’ ಇದರಿಂದ ಹಾಕಿದ ಬಂಡವಾಳ ಕೈಸೇರುತ್ತಿಲ್ಲ’ ಹೋಟೆಲೊಂದರ ಮಾಲೀಕ ನಾಗಣ್ಣ ಹೇಳಿದರು.

ಮುನ್ನೆಚ್ಚರಿಕೆ ಕ್ರಮ ಪಾಲನೆ ಕಡ್ಡಾಯ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಮಹೇಶ್ ಕುಮಾರ್ ಅವರು. ’ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಬೇಕು. ಬಿಸಿಯಾದ ಶುಚಿ–ರುಚಿ ತಿಂಡಿ ತಿನಿಸು ಒದಗಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಲು ಗ್ರಾಹಕರು ಕಡ್ಡಾಯವಾಗಿ ಸಾಬೂನು, ಸ್ಯಾನಿಟೈಸರ್‌, ಮಾಸ್ಕ್‌ ಧರಿಸಿರುವುದನ್ನು ಖಾತ್ರಿಗೊಳಿಸಬೇಕು ಎಂದು ಮಾಲೀಕರಿಗೆ ತಿಳಿಸಲಾಗಿದೆ. ಗ್ರಾಹಕರಿಂದ ದೂರು ಬಂದರೆ ಹೋಟೆಲ್‌ ಪರವಾನಗಿ ಅಮಾನತುಮಾಡಲಾಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು