ಬುಧವಾರ, ಜನವರಿ 20, 2021
16 °C
ಚಿಕಿತ್ಸೆ ಕೊಡಿಸಲು ಸೋಂಕಿನ ಭವ, ಸರ್ಕಾರದಿಂದಲೂ ಸಿಗದ ಸೌಲಭ್ಯ

ಕೋವಿಡ್‌: ‌ಈ ಬಾರಿ ಅಂಗವಿಕಲರ ದಿನಾಚರಣೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಯಳಂದೂರು: ಕೋವಿಡ್‌ ಪರಿಣಾಮದಿಂದಾಗಿ ಈ ಬಾರಿ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಅಂಗವಿಕಲರ ದಿನಾಚರಣೆ ನಡೆಯುವುದಿಲ್ಲ.

ಪ್ರತಿ ವರ್ಷ ಡಿಸೆಂಬರ್‌ 3ರಂದು ನಡೆಯುವ ಅಂಗವಿಕಲರ ದಿನಾಚರಣೆಯ ಅಂಗವಾಗಿ ಅಂಗವಿಕಲ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿತ್ತು.

ಪ್ರಸ್ತುತ ಕೋವಿಡ್‌ ಇರುವುದರಿಂದ ಆರೋಗ್ಯಕ್ಕೆ ಪೂರಕವಾಗುವ ವಾತಾವರಣ ನಿರ್ಮಾಣವಾಗುವವರೆಗೂ ಕ್ರೀಡಾಕೂಟಗಳನ್ನು ಆಯೋಜಿಸಲು ನಿರ್ಬಂಧವಿರುವುದರಿಂದ ಅಂಗವಿಕಲ ಮಕ್ಕಳ ಮನೆಮನೆಗೆ ಭೇಟಿ ನೀಡುವ ಮೂಲಕ ಕಲಿಕೆಗೆ ಮಾರ್ಗದರ್ಶನ ನೀಡಿ, ಪೋಷಕರಿಗೆ ಬೆಂಬಲ ನೀಡುವ ಕಾರ್ಯಚಟುವಟಿಕೆಗಳನ್ನು ಮಾತ್ರ ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ. 

ಈ ಸಂಬಂಧ ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನ ಸಮನ್ವಯಾಧಿಕಾರಿ ಅವರು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. 

ಅನುದಾನ ಇಲ್ಲ: ‘ಈ ಚಟುವಟಿಕೆಗಳಿಗಾಗಿ ಇಲಾಖೆಯಿಂದ ಯಾವುದೇ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಎಸ್‌ಡಿಎಂಸಿ ಅಥವಾ ದಾನಿಗಳ ನೆರವು ಪಡೆದು ಅಂಗವಿಕಲ ಮಕ್ಕಳಿಗೆ ಅವಶ್ಯಕ ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಬೇಕು’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.  

‘ಮಕ್ಕಳ ಮನೆ ಮನೆಗೆ ತೆರಳಿ ಚಟುವಟಿಕೆಗಳನ್ನು ನಡೆಸಲು ಸೂಚನೆ ಬಂದಿದೆ. ಕೋವಿಡ್ ಮಾರ್ಗಸೂಚಿಯಂತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಬಾರಿ ಆಯೋಜಿಸುತ್ತಿಲ್ಲ. ಶಾಲಾ ಹಂತದಲ್ಲಿ ಎಲ್ಲ ನೆರವು ಒದಗಿಸಲಾಗಿದೆ’ ಎಂದು ಯಳಂದೂರಿನ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಎಸ್. ಭಾಗ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪೋಷಕರಲ್ಲಿ ಭಯ: ಕೋವಿಡ್‌–19 ಹಾವಳಿ ಆರಂಭಗೊಂಡ ನಂತರ ಅಂಗವಿಕಲ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶುಶ್ರೂಷೆ ಕೊಡಿಸಲು ಪೋಷಕರು ಭಯ ಪಡುತ್ತಿದ್ದಾರೆ. ಕೋವಿಡ್‌ ಸನ್ನಿವೇಶದಲ್ಲಿ ಅಂಗವಿಕಲ ಮಕ್ಕಳಿಗೆ ಸೌಲಭ್ಯಗಳು ಸಕಾಲದಲ್ಲಿ ಸಿಗುತ್ತಿಲ್ಲ ಎಂಬುದು ಪೋಷಕರ ಅಳಲು. 

ಯಳಂದೂರು ತಾಲ್ಲೂಕಿನಲ್ಲಿ ಶಿಕ್ಷಣ ಪಡೆಯುತ್ತಿರುವ 21 ಮಕ್ಕಳು ಅಂಗವೈಕಲ್ಯವನ್ನು ಹೊಂದಿದ್ದಾರೆ.

ಯಳಂದೂರು ಬಳೇ‍ಪೇಟೆಯ ಮಾದೇವ ಮತ್ತು ಗೀತಾ ಅವರ ಇಬ್ಬರು ಮಕ್ಕಳೂ ಹಿಮೊಫಿಲಿಯಾ (ರಕ್ತ ಸ್ತ್ರಾವ ಕಾಯಿಲೆ) ಬಳಲುತ್ತಿದ್ದಾರೆ. ಮಕ್ಕಳಿಗೆ ರಕ್ತ ಪೂರಣ ಮಾಡಿಸಲಾಗದೆ, ಚುಚ್ಚುಮದ್ದು ಕೊಡಿಸಲಾಗದೆ ಅವರು ಬಳಲಿದ್ದಾರೆ. ಅವರ ಮಕ್ಕಳಾದ ಪ್ರೀತಂ (8ನೇ ತಗರತಿ) ಮತ್ತು ಚೇತನ್ (5ನೇ ತರಗತಿ)  ಬಳೇಪೇಟೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ.

‘ಇಬ್ಬರಿಗೂ ಹುಟ್ಟಿನಿಂದ ಹಿಮೊಫಿಲಿಯಾ (ರಕ್ತ ಹೆಪ್ಪುಗಟ್ಟಿಸುವ ಪ್ರೊಟೀನ್‌ ಕೊರತೆಯಿಂದ ನಿರಂತರ ರಕ್ತಸ್ರಾವ ಆಗುವುದು) ಕಾಯಿಲೆ ಆವರಿಸಿದೆ. ಚಿಕಿತ್ಸೆ ಸಕಾಲದಲ್ಲಿ ದೊರೆಯದಿದ್ದರೆ ಮಂಡಿ ಸಂಪೂರ್ಣ ಊದುತ್ತದೆ. ಒಂದೆಡೆ ಮಲಗಿಸಿ ಚಿಕಿತ್ಸೆ ನೀಡಬೇಕು. ಆಗಾಗ ರಕ್ತ ನೀಡಬೇಕು. ಹೀಗಾಗಿ, ಮಕ್ಕಳನ್ನು ಬಿಟ್ಟು ಕೂಲಿನಾಲಿಗೆ ಹೋಗಲು ಆಗದು. ಪಡಿತರ ಅಕ್ಕಿ ಇವರಿಗೆ ಸಿಗುತ್ತದೆ. ಆದರೆ, ಪೋಷಕರಿಗೆ ಸಿಗುವ ಬೆಂಗಾವಲು ಭತ್ಯೆ ಸಿಕ್ಕಿಲ್ಲ. ಮತ್ತೊಂದೆಡೆ ಆಸ್ಪತ್ರೆಗೆ ಕರೆದೊಯ್ದರೆ ಚಿಕಿತ್ಸೆಗೆ ಕಾಯಿಸುತ್ತಾರೆ. ಹೀಗಾಗಿ, ಕೋವಿಡ್ ನಂತರ ಚಿಕಿತ್ಸೆಗೆ ಮುಂದಾಗಿಲ್ಲ’ ಎಂದು ಪೋಷಕರು ಅಲವತ್ತುಕೊಂಡರು. 

ಬಳೆಪೇಟೆಯ ವಿಶ್ವಾಸ್ 5ನೇ ತರಗತಿ ಕಲಿಯುತ್ತಿದ್ದಾನೆ. ಇವನ ಎರಡು ಕಾಲು ಮಡಚಿಕೊಳ್ಳುತ್ತವೆ. ನಡೆಯುವಾಗ ಭಾರೀ ಯಾತನೆ ಆಗುತ್ತದೆ. ‘ಓಡಾಟಕ್ಕೆ ಗಾಲಿ ಕುರ್ಚಿ ಇಲ್ಲವೇ ತ್ರಿಚಕ್ರ ವಾಹನ ಒದಗಿಸುವಂತೆ ಪಟ್ಟಣ ಪಂಚಾಯಿತಿಗೆ ಮನವಿ ನೀಡಿದದೂ ಪ್ರಯೋಜನ ಆಗಿಲ್ಲ. ಶಾಲೆಗೆ ಇಲ್ಲವೇ ಇತರೆಡೆ ತೆರಳಲು ಕಷ್ಟ ಎನ್ನುತ್ತಾರೆ’ ಎಂದು ಆತನ ತಾಯಿ ಲಕ್ಷ್ಮಿ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು