ಸೋಮವಾರ, ಆಗಸ್ಟ್ 15, 2022
26 °C
ಅಪ್ಪನ ಐಡಿ ಕಾರ್ಡ್ ಹಿಡಿದು ಆಟ ಆಡುವ ಮಗನ ಭವಿಷ್ಯಕ್ಕೆ ದಿಕ್ಕು ಯಾರು

ಯಳಂದೂರು: ಅಪ್ಪಂದಿರ ದಿನದ ಸಂಭ್ರಮ ಕಸಿದ ಕೋವಿಡ್‌

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ‘ಮಗ ಸಮರ್ಥ್ ಪ್ರತಿ ದಿನ ಕೊಠಡಿಯತ್ತ ತೆರಳಿ ಬಾಗಿಲು ಬಡಿಯುತ್ತಾನೆ. ಅಪ್ಪ ಬರುತ್ತಾರೆ
ಎಂದು ಕಾಯುತ್ತಾನೆ. ಇವನಿಗೆ ಏನು ಉತ್ತರ ಕೊಡಬೇಕು’ ಎಂದು ಹೇಳಿ ಕಣ್ಣೀರಾದರು ತಾಯಿ ನಾಗರತ್ನ.

ಮೂರು ವರ್ಷಗಳ ಹಿಂದೆ ಮಳವಳ್ಳಿ ತಾಲ್ಲೂಕಿನ ಮಲ್ಲಿನಾಥಪುರ ಗ್ರಾಮದ ಎಂ.ಎನ್.ಅಜಯ್‌ಕುಮಾರ್ ಅವರು ಕೆಸ್ತೂರು ಗ್ರಾಮದ ನಾಗರತ್ನ ಅವರನ್ನು ವಿವಾಹವಾಗಿದ್ದರು. 2 ವರ್ಷದ ಹಿಂದೆ ಮಗನ ಆಗಮನದೊಂದಿಗೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು.

ಸಂಸ್ಕೃತ ಆಗಮನ ಶಾಸ್ತ್ರ ಕಲಿತಿದ್ದ ಅಜಯ್, ಬೆಂಗಳೂರು ಕೋರಮಂಗಲದ ಶ್ರೀವೀರಾಂಜನೇಯಸ್ವಾಮಿ
ದೇಗುಲದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದರು. ಕೌಟುಂಬಿಕ ಜೀವನದಲ್ಲಿ ನೆಲೆ ಮತ್ತು ನೆಮ್ಮದಿ ಸಿಕ್ಕಿತು. ಆದರೆ,
ಕೋವಿಡ್ ಎರಡನೇ ಅಲೆ ಅವರ ಜೀವನದಲ್ಲಿ ಬಿರುಗಾಳಿ ಉಂಟು ಮಾಡಿತ್ತು. ಅಜಯ್ ಕುಮಾರ್‌ ಅವರು ಕೋವಿಡ್‌ ಹಾಗೂ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗೆ ಬಲಿಯಾದರು.

ಪ್ರಾಣ ಕಸಿದ ಅವ್ಯವಸ್ಥೆ: ‘ಲಾಕ್‌ಡೌನ್‌ ಘೋಷಣೆ ಆಗುತ್ತಿದ್ದಂತೆ ಅಮ್ಮನ ಮನೆಗೆ ಬಂದೆವು. ಏಪ್ರಿಲ್ 28ರಂದು ಅಜಯ್‌ಗೆ ಕೆಮ್ಮು ಕಾಣಿಸಿಕೊಂಡಿತು. 29ರಂದು ಯಳಂದೂರು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಐದಾರು ಗಂಟೆ ಕಾಯಬೇಕಾಯಿತು. ವೈದ್ಯರು ಕೋವಿಡ್ ಪರೀಕ್ಷೆ ಮಾಡಿಸಲು ಸಲಹೆ ನೀಡಿದರು. ನಂತರ ಪಾಸಿಟಿವ್ ಬಂದಿತ್ತು. ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ಒಪ್ಪಲಿಲ್ಲ. ನಂತರ ಚಾಮರಾಜನಗರದ ಖಾಸಗಿ
ಆಸ್ಪತ್ರೆಗೆ ದಾಖಲಿಸಲಾಯಿತು. ಮೇ 2ರಂದು ಬೆಳಿಗ್ಗೆ ಅಲ್ಲಿ ಆಮ್ಲಜನಕ ಕೊರತೆ ಇದ್ದ ಕಾರಣ, ಅಜಯ್ ಅವರನ್ನು
ಜಿಲ್ಲಾ ಆಸ್ಪತ್ರ್ರೆಗೆ ಸೇರಿಸಬೇಕಾಯಿತು’ ಎಂದು ನಾಗರತ್ನ ಹೇಳಿದರು. 

‘ಆಸ್ಪತ್ರೆಯಲ್ಲಿ ಆಮ್ಲಜನಿಕ ಇಲ್ಲ ಎಂಬುದು ಮೊದಲ ದಿನವೇ ನಮ್ಮವರಿಗೆ ಗೊತ್ತಿತ್ತು. 'ಇದು ಸಾಮಾನ್ಯ ಸಮಸ್ಯೆ. ಒಂದೆರಡು ಗಂಟೆಗಳಲ್ಲಿ ಪ್ರಾಣವಾಯು ವ್ಯವಸ್ಥೆ ಮಾಡುವುದಾಗಿ ಶುಶ್ರೂಷಕರು ಹೇಳಿದ್ದಾರೆ. ಹಾಗಾಗಿ, ನೆಮ್ಮದಿಯಿಂದ ಇರಿ' ಎಂದು ಸಂಜೆ ಪತಿ ಪೋನ್ ಮಾಡಿದ್ದರು. ಇದೇ ಕೊನೆ. ಮುಂಜಾನೆ ಅವರ ಸಾವಿನ ಸುದ್ಧಿ ಬಂತು’ ಎಂದು
ಗದ್ಗತಿತರಾದರು.

‘ಮಗ ಪ್ರತಿ ದಿನ ಅಪ್ಪನ ಧ್ಯಾನ ಮಾಡುತ್ತಾನೆ. ಅವರ ಐಡಿ ಕಾರ್ಡ್ ಹಿಡಿದು ಆಟ ಆಡುತ್ತಾನೆ. ಬಾಗಿಲಿನತ್ತ ಪದೇಪದೇ ದಿಟ್ಟಿಸುತ್ತಾನೆ. ಇವನಿಗೆ ಹೇಗೆ ಉತ್ತರಿಸುವುದು? ತವರು ಮನೆಯ ಪೋಷಕರು ಅರ್ಚಕ ವೃತ್ತಿ ಮಾಡುತ್ತಾರೆ. ಪತಿಯ ಮನೆಯಲ್ಲಿ ಅಲ್ಪ ಭೂಮಿ ಇದೆ. ಪಿಯುಸಿ ಓದಿರುವ ನನಗೆ ಸರ್ಕಾರಿ ಕೆಲಸ ಕೊಟ್ಟರೆ ಜೀವನ ರೂಪಿಸಿಕೊಳ್ಳಬಹುದು. ಮಗನಿಗೆ ಉತ್ತಮ ಶಿಕ್ಷಣ ಕೊಡಿಸಬಹುದು. ತಮ್ಮನ ಜೊತೆ ಸೇರಿ ಕುಟುಂಬದ ಭಾರವನ್ನು ತುಸು ಕಡಿಮೆ
ಮಾಡಬಹುದು’ ಎಂದು ನಾಗರತ್ನ ದುಃಖಿಸಿದರು. 

ಮಗುವಿಗಿಲ್ಲ ಆಧಾರ

ನಾಗರತ್ನ ಪೋಷಕರೇ ಸದ್ಯ ಕುಟುಂಬಕ್ಕೆ ಹಿರಿಯರು. ಮೊಮ್ಮಗ ಮತ್ತು ಮಗಳ ಉಸ್ತುವಾರಿ
ನೋಡಿಕೊಂಡಿದ್ದಾರೆ.

‘ಮಂಡ್ಯ ಜಿಲ್ಲೆಯಲ್ಲಿರುವ ಮಗಳ ಮಾವನ ಮನೆಯವರು ಸ್ಥಿತಿವಂತರಲ್ಲ. ಪತಿಯ ಅಗಲಿಕೆ ಆಕೆಗೆ ನೋವು ತಂದಿದೆ. ಅವರ ಮಗನ ಭವಿಷ್ಯಕ್ಕೆ ಒಂದು ಕೆಲಸ ಮಾಡಬೇಕಿದೆ. ಸರ್ಕಾರ ಪರಿಹಾರವಾಗಿ ₹2 ಲಕ್ಷ ನೀಡಿದೆ. ಉಸ್ತುವಾರಿ ಸಚಿವರಿಗೆ ಮಗಳು ಕಷ್ಟ ನಿವೇದಿಸಿಕೊಂಡಿದ್ದಾಳೆ. ಮಗುವಿನ ಭವಿಷ್ಯ ಕಟ್ಟಿಕೊಡುವ ದೃಷ್ಟಿಯಿಂದ ಎಳವೆಯಲ್ಲಿಯೇ ಪತಿ ಕಳೆದುಕೊಂಡ ಹೆಣ್ಣು ಮಗಳಿಗೆ ಸರ್ಕಾರಿ ಕೆಲಸ ನೀಡಬೇಕು’ ಎಂಬುದು ನಾಗರತ್ನ ತಾಯಿ ನೀಲಮ್ಮ ಅವರ ಮನವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು