ಸೋಮವಾರ, ಸೆಪ್ಟೆಂಬರ್ 20, 2021
21 °C
ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್‌ಗೆ ಸಚಿವ ಸ್ಥಾನಕ್ಕೆ ಒತ್ತಾಯ, ಎನ್‌.ಮಹೇಶ್‌ರಿಂದಲೂ ಪ್ರಯತ್ನ

ಮಂತ್ರಿಗಿರಿ: ಜಿಲ್ಲೆಗೆ ಈ ಬಾರಿಯೂ ನಿರಾಸೆ?

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಹೊಸ ಸಚಿವ ಸಂಪುಟ ರಚನೆಯ ಬಗ್ಗೆ ಭಾರಿ ಕುತೂಹಲ ಮೂಡಿದ್ದು, ಜಿಲ್ಲೆಯ ಜನತೆ ಕೂಡ ಈ ಬಾರಿಯಾದರೂ ಜಿಲ್ಲೆಗೆ ಪ್ರಾತಿನಿಧ್ಯ ದೊರೆಯಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ. 

ಆದರೆ, ಈ ಬಾರಿಯೂ ಆ ಸಾಧ್ಯತೆ ಕ್ಷೀಣ ಎಂದು ಹೇಳುತ್ತಿವೆ ಬಿಜೆಪಿ ಮೂಲಗಳು. 

ಜಿಲ್ಲೆಯಲ್ಲಿ ಬಿಜೆಪಿಗೆ ಒಬ್ಬರೇ ಶಾಸಕರಿದ್ದಾರೆ. ಗುಂಡ್ಲುಪೇಟೆಯ ಸಿ.ಎಸ್‌.ನಿರಂಜನ ಕುಮಾರ್‌ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದಾರೆ.   

ಬೊಮ್ಮಾಯಿ ಅವರ ಹೊಸ ಸಚಿವ ಸಂಪುಟದಲ್ಲಿ ಯುವ ಹಾಗೂ ಹೊಸ ಮುಖಗಳಿಗೆ ವರಿಷ್ಠರು ಮಣೆ ಹಾಕಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾಗಿ, ಯುವ ಶಾಸಕರಾಗಿರುವ ನಿರಂಜನ ಕುಮಾರ್‌ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯ ಬಗ್ಗೆ ಅವರ ಬೆಂಬಲಿಗರು, ಅಭಿಮಾನಿಗಳು ಚರ್ಚೆ ಆರಂಭಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾರ್ಯಕರ್ತರು ಹಾಗೂ ಮುಖಂಡರು ಬಹಿರಂಗವಾಗಿಯೇ ಒತ್ತಾಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಬೆಂಬಲಿಗರು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. 

ಸ್ಥಳೀಯರೇ ಸಚಿವರಾದರೆ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಹೊರಗಿನವರಿಂದ ಅದು ಸಾಧ್ಯವಿಲ್ಲ ಎಂಬುದು ಅವರು ತಮ್ಮ ಒತ್ತಾಯಕ್ಕೆ ನೀಡುತ್ತಿರುವ ಕಾರಣ. 

ಯಡಿಯೂರಪ್ಪ ಅವರ ಆಪ್ತರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನೇ ಹೈಕಮಾಂಡ್‌ ಮುಖ್ಯಮಂತ್ರಿಯಾಗಿ ಮಾಡಿದೆ. ಹೀಗಿರುವಾಗ ಯಡಿಯೂರಪ್ಪ ಅವರ ಬಳಗದಲ್ಲೇ ಗುರುತಿಸಿಕೊಂಡಿರುವ ನಿರಂಜನ ಕುಮಾರ್‌ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬುದು ಜಿಲ್ಲೆಯ ಪಕ್ಷದ ಕಾರ್ಯಕರ್ತರು, ಶಾಸಕರ ಬೆಂಬಲಿಗರ ಲೆಕ್ಕಾಚಾರ. 

ಸಾಧ್ಯತೆ ಇಲ್ಲ: ನಿರಂಜನ ಕುಮಾರ್‌ ಅವರು ಇದೇ ವಿಚಾರವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ‘ಯಡಿಯೂರಪ್ಪ ಅವರು ಯಾವುದೇ ಭರವಸೆ ನೀಡಿಲ್ಲ’ ಎಂದು ಗೊತ್ತಾಗಿದೆ. ಹಾಗಾಗಿ, ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂಬುದು ಜಿಲ್ಲೆಯ ಪಕ್ಷದ ಮುಖಂಡರ ಮಾತು. 

ನಿರಂಜನ ಕುಮಾರ್‌ ಅವರು ಮೊದಲ ಬಾರಿ ಶಾಸಕರಾಗಿದ್ದಾರೆ. ರಾಜಕಾರಣದಲ್ಲಿ ಇನ್ನೂ ಯುವಕರು. ಮುಂದೆ ಸಾಕಷ್ಟು ಅವಕಾಶಗಳು ಇವೆ. ಅದಲ್ಲದೇ, ಈಗಾಗಲೇ ಮೂರ್ನಾಲ್ಕು ಬಾರಿ ಶಾಸಕರಾಗಿ ಪಕ್ಷಕ್ಕೆ ನಿಷ್ಠರಾದವರು, ಆರ್‌ಎಸ್‌ಎಸ್‌ನೊಂದಿಗೆ ಉತ್ತಮ ಸಂಬಂಧ ಹೊಂದಿರುವವರಿಗೆ ಇನ್ನೂ ಸಚಿವ ಸ್ಥಾನ ಸಿಕ್ಕಿಲ್ಲ. ಅಂತಹವರಿಗೆ ವರಿಷ್ಠರು ಮಣೆ ಹಾಕಲಿದ್ದಾರೆ. ಜೊತೆಗೆ, ನಿರಂಜನ ಕುಮಾರ್‌ ಅವರಿಗೆ ಈಗಾಗಲೇ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹೀಗಿರುವಾಗ ಸಚಿವ ಸ್ಥಾನ ಕಷ್ಟ ಎಂಬ ಮಾತುಗಳೂ ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ.

ಸಚಿವ ಸ್ಥಾನಕ್ಕೆ ಎನ್‌.ಮಹೇಶ್‌ ಲಾಬಿ? 

ಈ ಮಧ್ಯೆ, ಬಿಜೆಪಿ ಸೇರಲು ಮನಸ್ಸು ಮಾಡಿರುವ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಕೂಡ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಬುಧವಾರ ನಡೆದ ಬೊಮ್ಮಾಯಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಅವರು ಭಾಗಿಯಾಗಿದ್ದರು. ಯಡಿಯೂರಪ್ಪ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನಕ್ಕೆ ಗೈರಾಗಿ ಸರ್ಕಾರ ಪತನಕ್ಕೆ ಪರೋಕ್ಷವಾಗಿ ಕಾರಣವಾಗಿದ್ದ ಎನ್‌.ಮಹೇಶ್‌ ಅವರು ಬಿಜೆಪಿ ಹಾಗೂ ಯಡಿಯೂರಪ್ಪ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರವನ್ನು ಬೆಂಬಲಿಸುತ್ತಿರುವುದಾಗಿ ಅವರು ಬಹಿರಂಗವಾಗಿ ಹೇಳಿಕೆಯನ್ನೂ ನೀಡಿದ್ದಾರೆ. 

‘ಬಿಜೆಪಿಯಲ್ಲೇ ಸಚಿವ ಸ್ಥಾನಕ್ಕಾಗಿ ಪೈಪೋಟಿ ಇದೆ. ಎನ್‌. ಮಹೇಶ್‌ ಇನ್ನೂ ಪಕ್ಷ ಸೇರಿಲ್ಲ. ಮೈತ್ರಿ ಸರ್ಕಾರ ಪತನವಾದ ಸಂದರ್ಭದಲ್ಲಿ ಅವರು ನೇರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಸಚಿವರಾಗಿ ಎರಡು ವರ್ಷವಾಗುತ್ತಿತ್ತು. ಪಕ್ಷಕ್ಕೆ ಈಗ ಅವರನ್ನು ನೆಚ್ಚಿಕೊಳ್ಳುವ ಸ್ಥಿತಿ ಇಲ್ಲ’ ಎಂದು ಬಿಎಸ್‌ವೈ ಅವರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

–––––––

ಸಚಿವ ಸ್ಥಾನದ ಬಗ್ಗೆ ವರಿಷ್ಠರು ತೀರ್ಮಾನಿಸಲಿದ್ದಾರೆ. ಸಿಕ್ಕಿದರೆ ಜಿಲ್ಲೆಗೆ ಅನುಕೂಲ. ಮಂತ್ರಿ ಪದವಿ ಕೊಟ್ಟರೆ ಜವಾಬ್ದಾರಿ ಹೊರಲು ಸಿದ್ಧ

– ಸಿ.ಎಸ್‌.ನಿರಂಜನಕುಮಾರ್‌, ಗುಂಡ್ಲುಪೇಟೆ ಶಾಸಕ

–––

ನಾನಿನ್ನೂ ಸ್ವತಂತ್ರ ಶಾಸಕನಾಗಿಯೇ ಇದ್ದೇನೆ. ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಸಚಿವ ಸ್ಥಾನದ ಬಗ್ಗೆ ಈಗಲೇ ಏನೂ ಹೇಳಲಾರೆ

ಎನ್‌.ಮಹೇಶ್‌, ಕೊಳ್ಳೇಗಾಲ ಶಾಸಕ

–––

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು