ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂಗಳಲ್ಲಿ ಸುರಕ್ಷತೆ ಮರೀಚಿಕೆ

ಕೊರೊನಾ ಭೀತಿ: ಸ್ಯಾನಿಟೈಸರ್‌ಗಾಗಿ ಗ್ರಾಹಕರ ಹುಡುಕಾಟ
Last Updated 4 ಏಪ್ರಿಲ್ 2020, 14:27 IST
ಅಕ್ಷರ ಗಾತ್ರ

ಯಳಂದೂರು: ಕೊರೊನಾ ವೈರಸ್‌ನ ಭೀತಿ ನಡುವೆಯೂ ಪಟ್ಟಣದ ಬ್ಯಾಂಕ್‌ಗಳ ಬಳಿ ಅಳವಡಿಸಿರುವ ಎಟಿಎಂ ಕೇಂದ್ರಗಳಲ್ಲಿ ಜನರು ಹಣ ಪಡೆಯುತ್ತಿದ್ದಾರೆ. ಆದರೆ, ಯಂತ್ರಗಳನ್ನು ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ನಿಯಮಗಳ ಪಾಲನೆಯಾಗುತ್ತಿಲ್ಲ. ಇದು ಗ್ರಾಹಕರ ಕಳವಳಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಎಸ್‌ಬಿಐ, ಕೆನರಾ, ಯೂನಿಯನ್‌ ಬ್ಯಾಂಕುಗಳಿಗೆ ಸೇರಿದಂತೆ ಆರು ಎಟಿಎಂ ಕೇಂದ್ರಗಳಿವೆ. ಕೆಲವು ಎಟಿಎಂ ಕೇಂದ್ರದ ಮುಂಭಾಗ ಕೋವಿಡ್‌–19 ಬಗ್ಗೆ ತಿಳಿವಳಿಕೆ ನೀಡುವ ಫಲಕ ಹಾಕಲಾಗಿದೆ. ಯಂತ್ರ ಬಳಸುವ ಮೊದಲು, ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು ಮತ್ತು ಮುಖಗವಸು ಬಳಸಿ ಹಣ ಪಡೆಯಬೇಕು ಎಂದು ಸೂಚಿಸಲಾಗಿದೆ.

‘ಹಣ ಪಡೆಯುವಾಗ ನಾವು, ಎಟಿಎಂ ಪರದೆಯನ್ನು ಮುಟ್ಟಬೇಕಾಗುತ್ತದೆ. ಸಹಜವಾಗಿ ನಮ್ಮ ಬೆರಳಿನ ಅಚ್ಚು ಪರದೆಯಲ್ಲಿ ಬೀಳುತ್ತದೆ. ಕೊರೊನಾ ವೈರಸ್‌ ಭೀತಿಯ ಈ ಸಮಯದಲ್ಲಿ ಒಬ್ಬರು ಸ್ಪರ್ಶಿಸಿದ ಜಾಗವನ್ನು ಇನ್ನೊಬ್ಬರು ಮುಟ್ಟಬಾರದು. ಇಂತಹ ಸಂದರ್ಭದಲ್ಲಿ ಸ್ಯಾನಿಟೈಸರ್‌ ಅನ್ನು ಬಳಸಬೇಕು. ಆದರೆ, ಎಟಿಎಂ ಕೇಂದ್ರದಲ್ಲಿ ಸ್ಯಾನಿಟೈಸರ್ ಇಡದೆ ಇರುವುದರಿಂದ ಆತಂಕವಾಗುತ್ತದೆ’ ಎಂದು ಪಟ್ಟಣದ ನಿವಾಸಿ ಸುರೇಶ್‌ ಕುಮಾರ್‌ ಹೇಳಿದರು.

ಎಟಿಎಂ ಕೇಂದ್ರಗಳ ಮುಂಭಾಗ ಸುರಕ್ಷತೆ ದೃಷ್ಟಿಯಿಂದ ಮಾರ್ಗದರ್ಶನ ಮಾಡಲು ಬ್ಯಾಂಕ್‌ಗಳು ಯಾರನ್ನೂ ನೇಮಿಸಿಲ್ಲ. ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂಗಳಲ್ಲಿ ಏಕಕಾಲದಲ್ಲಿ ಹಲವರು ಒಳ ಹೋಗುವುದೂ ಇದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದವರೂ ಇದ್ದಾರೆ.

‘ದಿಗ್ಬಂಧನ ಆದೇಶ ಜಾರಿಯಾದ ತಕ್ಷಣವೇ ಬ್ಯಾಂಕ್‌ಗಳು ಗ್ರಾಹಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ತಿಂಗಳ ಆರಂಭದಲ್ಲಿ ಸಂಬಳ ಮತ್ತಿತರ ಕೆಲಸಗಳಿಗೆ ಬ್ಯಾಂಕ್‌ಗೆ ಸಾರ್ವಜನಿಕರು ಹೆಚ್ಚಾಗಿ ಪ್ರವೇಶಿಸುತ್ತಾರೆ. ಹಾಗಾಗಿ, ಗ್ರಾಹಕರಿಗೆ ಬ್ಯಾಂಕ್‌ ಸಿಬ್ಬಂದಿ ಮಾರ್ಗದರ್ಶನ ಮಾಡಬೇಕು’ ಎಂದು ಶಿಕ್ಷಕ ಮಹದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇಟ್ಟಿದ್ದನ್ನು ಎತ್ತಿಕೊಂಡು ಹೋದರು...

ಕೆಲವು ಬ್ಯಾಂಕ್‌ಗಳು ಎಟಿಎಂಗಳಲ್ಲಿ ಸ್ಯಾನಿಟೈಸರ್‌ಗಳನ್ನು ಇಟ್ಟಿವೆ. ಆದರೆ, ಅವುಗಳನ್ನು ಜನರು ಎತ್ತಿಕೊಂಡು ಹೋಗುತ್ತಾರೆ ಎಂದು ಬ್ಯಾಂಕ್‌ ಅಧಿಕಾರಿಗಳು ಹೇಳುತ್ತಾರೆ.

‘ದಿಗ್ಬಂಧನ ಹೇರಿದ ಸಮಯದಲ್ಲಿಎಟಿಎಂ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಇಡಲಾಗಿತ್ತು. ಹಣ ಪಡೆಯುವುದಕ್ಕೂ ಮೊದಲು ಇದನ್ನು ಬಳಸುವಂತೆ ಗ್ರಾಹಕರಿಗೆ ಸೂಚಿಸಲಾಗಿತ್ತು. ಭದ್ರತಾ ಸಿಬ್ಬಂದಿ ಇಲ್ಲದ ಸಂದರ್ಭದಲ್ಲಿ ಸ್ಯಾನಿಟೈಸರ್‌ಗಳನ್ನು ಗ್ರಾಹಕರು ಎತ್ತಿಕೊಂಡು ಹೋಗಿದ್ದಾರೆ. ಹಾಗಾಗಿ, ದಾರ ಕಟ್ಟಿ ಇಡುವ ಪ್ರಯತ್ನ ಮಾಡಬೇಕಿದೆ’ ಎಂದು ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕಿ ಕೆ.ವಿ.ಗೀತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹಳಷ್ಟು ಗ್ರಾಮೀಣ ಗ್ರಾಹಕರು ಎಟಿಎಂ ಬಳಸುವ ಮೊದಲು ಸ್ಯಾನಿಟೈಸರ್‌ ಬಳಸಬೇಕು ಎಂಬ ನಿಯಮ ಪಾಲಿಸುತ್ತಿಲ್ಲ. ಕೆಲವರು ಸಂಜೆ ಆಗುತ್ತಿದ್ದಂತೆ ಸುರಕ್ಷತೆಗೆ ಇಟ್ಟಿದ್ದ ಬಾಟಲ್‌ ಅನ್ನು ಎಸೆದು ಹೋಗುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT