ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ- ಸ್ಕ್ಯಾನಿಂಗ್‌ ಲಭ್ಯವಿಲ್ಲ; ಗರ್ಭಿಣಿಯರ ಪಡಿಪಾಟಲು

ಕೊಳ್ಳೇಗಾಲ: ಸರ್ಕಾರಿ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್‌ ಇಲ್ಲ, ಖಾಸಗಿ ಡಯಾಗ್ನಾಸ್ಟಿಕ್‌ಗಳ ಅವಲಂಬನೆ
Last Updated 21 ಫೆಬ್ರುವರಿ 2022, 16:37 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾಂನಿಂಗ್ ಸೌಲಭ್ಯ ಇಲ್ಲದಿರುವುದರಿಂದ ಗರ್ಭಿಣಿಯರು ಸೇರಿದಂತೆ ಅನೇಕ ರೋಗಿಗಳು ನಿತ್ಯವೂ ಪರಿಸ್ಥಿತಿ ಇದೆ.

ವೈದ್ಯರು ಸ್ಕ್ಯಾನಿಂಗ್‌, ವಿಶೇಷ ರಕ್ತಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳಿಗೆ ಖಾಸಗಿ ಪ್ರಯೋಗಾಲಯಗಳಿಗೆ ಹೋಗುವಂತೆ ಸಲಹೆ ನೀಡುವುದರಿಂದ ಬಡ ಕುಟುಂಬದ ಗರ್ಭಿಣಿಯರು ಹಾಗೂ ಇತರ ರೋಗಿಗಳು ಖಾಸಗಿ ಡಯಾಗ್ನೊಸ್ಟಿಕ್‌ ಕೇಂದ್ರಗಳಿಗೆ ಸಾವಿರಾರು ರೂಪಾಯಿ ತೆರಬೇಕಾಗಿದೆ.

ಉಪ ವಿಭಾಗ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್‌ಗಳು ಇಲ್ಲ. ಈ ಕಾರಣಕ್ಕಾಗಿ ಸ್ಕ್ಯಾನಿಂಗ್‌ ವ್ಯವಸ್ಥೆ ಇಲ್ಲ ಎಂದು ಹೇಳುತ್ತಾರೆ ವೈದ್ಯಾಧಿಕಾರಿಗಳು. ಇಡೀ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಒಬ್ಬರು ರೇಡಿಯಾಲಜಿಸ್ಟ್‌ ಇದ್ದಾರೆ ಎಂದು ಹೇಳುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ.

ಉಪ ವಿಭಾಗದ ಆಸ್ಪತ್ರೆಯಲ್ಲಿ ಹಿಂದೆ ಸ್ಕ್ಯಾನಿಂಗ್‌ ಉಪಕರಣಗಳು ಇದ್ದವು. ಅದರ ನಿರ್ವಹಣೆಗೆ ವೈದ್ಯರು, ಸಿಬ್ಬಂದಿ ಇಲ್ಲದೇ ಇದ್ದುದರಿಂದ ಅದು ಬಳಕೆಯಲ್ಲಿರಲಿಲ್ಲ. ನಂತರ ಜಿಲ್ಲಾಸ್ಪತ್ರೆಗೆ ಅದನ್ನು ಸ್ಥಳಾಂತರಿಸಲಾಗಿತ್ತು ಎಂದು ಹೇಳುತ್ತಾರೆ ಆಸ್ಪತ್ರೆ ಸಿಬ್ಬಂದಿ.

ಕೊಳ್ಳೇಗಾಲವು ಜಿಲ್ಲೆಯ ಪ್ರಮುಖ ನಗರವಾಗಿದ್ದು, ಹನೂರು ತಾಲ್ಲೂಕಿನ ಜನರು ಕೂಡ ಚಿಕಿತ್ಸೆಗಾಗಿ ಇಲ್ಲಿನ ಉಪವಿಭಾಗ ಆಸ್ಪತ್ರೆಯನ್ನೇ ನಂಬಿದ್ದಾರೆ.

’ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಸೌಲಭ್ಯವಿಲ್ಲ. ಕೆಲವು ವಿಶೇಷ ರಕ್ತ ಪರೀಕ್ಷೆಗಳನ್ನೂ ಹೊರಗಡೆ ಮಾಡಿಸುವಂತೆ ಹೇಳುತ್ತಾರೆ. ವಿಚಾರಿಸಿದಾಗ ಸ್ಕ್ಯಾನಿಂಗ್‌ ಮಾಡುವ ವೈದ್ಯರು ಇಲ್ಲ ಎಂದು ಸಿಬ್ಬಂದಿ ಹೇಳಿದರು. ಗರ್ಭಿಣಿಯರು ಒಂಬತ್ತು ತಿಂಗಳ ಅವಧಿಯಲ್ಲಿ ಎರಡು ಮೂರು ಬಾರಿ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳಬೇಕಾಗುತ್ತದೆ. ದುಡ್ಡು ಇರುವವರಿಗಾದರೆ ಸಮಸ್ಯೆ ಇಲ್ಲ. ಬಡವರಿಗೆ ಹೊರಗಡೆ ಸ್ಕ್ಯಾನಿಂಗ್‌, ರಕ್ತ ಅಥವಾ ಇನ್ನಿತ ಪರೀಕ್ಷೆಗಳನ್ನು ಮಾಡಿಸುವುದು ಹೊರೆಯಾಗುತ್ತದೆ‘ ಎಂದು ಕೊಳ್ಳೇಗಾಲದ ಹರೀಶ್‌ ಕುಮಾರ್‌ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

’ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕುಗಳ ಜನರಿಗೆ ಚಿಕಿತ್ಸೆ ಪಡೆಯಲು ಈ ಆಸ್ಪತ್ರೆ ಅನಿವಾರ್ಯ. ಹನೂರು ತಾಲ್ಲೂಕಿನ ತಮಿಳುನಾಡು ಗಡಿ ಪ್ರದೇಶದ ಜನರು ಕೂಡ 130 ಕಿಮೀ ದೂರದಿಂದ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿ ಸರಿಯಾದ ಸೌಲಭ್ಯಗಳಿಲ್ಲ. ಹಾಗಾಗಿ, ಜಿಲ್ಲಾಸ್ಪತ್ರೆ ಅಥವಾ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಹೋಗಬೇಕಾಗಿದೆ‘ ಎಂದು ಚಿಕಿತ್ಸೆಗಾಗಿ ಬಂದಿದ್ದ ಗರ್ಭಿಣಿ ಗಿರಿಜಾ ಅವರು ತಿಳಿಸಿದರು.

’ಜಿಲ್ಲಾಸ್ಪತ್ರೆ, ಮೈಸೂರಿಗೆ ಹೋಗಲು ಸಾಧ್ಯವಾಗದವರು ಅನಿವಾರ್ಯವಾಗಿ ಖಾಸಗಿ ಡಯಾಗ್ನೊಸ್ಟಿಕ್‌ ಕೇಂದ್ರಗಳಲ್ಲಿ ಸ್ಕ್ಯಾನಿಂಗ್‌ ಮಾಡಿಸುತ್ತಿದ್ದಾರೆ. ಒಂದು ಬಾರಿ ಸ್ಕ್ಯಾನಿಂಗ್‌ ಮಾಡಿಸಿದರೆ ₹1000ದಿಂದ ₹2000 ವರೆಗೂ ಬಿಲ್‌ ಆಗುತ್ತದೆ‘ ಎಂದು ಹೇಳುತ್ತಾರೆ ಸಾರ್ವಜನಿಕರು.

’ಕಟ್ಟಡ ದೊಡ್ಡದಾಗಿ ಕಾಣಿಸುತ್ತದೆ. ಹಾಗಾಗಿ ಹೆಸರಿಗೆ ದೊಡ್ಡ ಆಸ್ಪತ್ರೆ. ಆದರೆ, ಬಹುತೇಕ ಹೆಚ್ಚಿನ ಸೌಲಭ್ಯಗಳು ಇಲ್ಲ. ಹಾಗಾಗಿ, ಖಾಸಗಿ ಆಸ್ಪತ್ರೆಯನ್ನು ಅವಲಂಬಿಸುವುದು ಅನಿವಾರ್ಯ‘ ಎಂದು ನಗರದ ಹಿರಿಯ ನಾಗರಿಕ ಪ್ರಭಾಕರ್‌ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

’ರೇಡಿಯಾಲಜಿಸ್ಟ್‌ ಇಲ್ಲದಿದ್ದರೆ, ಆರೋಗ್ಯ ಇಲಾಖೆಯು ನರ್ಸ್‌ಗಳಿಗೆ ಸ್ಕ್ಯಾನಿಂಗ್‌ ಮಾಡುವ ಬಗ್ಗೆ ತರಬೇತಿ ನೀಡಿ, ಜನರಿಗೆ ಅನುಕೂಲ ಕಲ್ಪಿಸಬಹುದಲ್ಲವೇ‘ ಎಂದು ಹರೀಶ್‌ ಕುಮಾರ್‌ ಅವರು ಪ್ರಶ್ನಿಸಿದರು.

ಕಾರ್ಯಾರಂಭ ಮಾಡದ ತಾಯಿ ಮಗು ಆಸ್ಪತ್ರೆ

ಎರಡು ವರ್ಷಗಳ ಹಿಂದೆ ಆಸ್ಪತ್ರೆಯ ಆವರಣದಲ್ಲಿ ₹8 ಕೋಟಿ ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ ಕಟ್ಟಿಸಲಾಗಿದೆ.

ಕೋವಿಡ್ ಹೆಚ್ಚಾದ ಕಾರಣ ಈ ವಿಭಾಗವನ್ನು ಗಂಟಲು ದ್ರವ ಪರೀಕ್ಷೆ ಸೇರಿದಂತೆ ಕೋವಿಡ್‌ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗಿದೆ.

ತಾಯಿ ಮಗು ಆಸ್ಪತ್ರೆಗೆ ಉಪಕರಣಗಳು ಸೇರಿದಂತೆ ಇತರ ಸೌಕರ್ಯಗಳ ವ್ಯವಸ್ಥೆ ಆಗದಿರುವುದರಿಂದ ಸದ್ಯ ಈಗ ಹಳೆಯ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ಲಿಯೂ ಸೌಲಭ್ಯಗಳ ಕೊರತೆ ಇದೆ ಎಂಬುದು ಜನರ ದೂರು.

ಬೇರೆ ಬೇರೆ ವಿಭಾಗಗಳಲ್ಲಿ ನುರಿತ ವೈದ್ಯರಿದ್ದಾರೆ. ಕೆಲವು ವೈದ್ಯಕೀಯ ಉಪಕರಣಗಳಿಲ್ಲ ಎಂಬುದು ನಿಜ. ಸ್ಕ್ಯಾನಿಂಗ್ ಮಾಡುವ ವೈದ್ಯರಿಲ್ಲ.
ಡಾ.ರಾಜಶೇಖರ್, ಆಸ್ಪತ್ರೆಯ ಆಡಳಿತಾಧಿಕಾರಿ.

ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ರೇಡಿಯಾಲಜಿಸ್ಟ್‌ ಇದ್ದಾರೆ. ಕೊಳ್ಳೇಗಾಲ ಆಸ್ಪತ್ರೆಗೆ ಹುದ್ದೆ ಮಂಜೂರಾಗಿಲ್ಲ. ಹೀಗಾಗಿ, ಅಲ್ಲಿ ಸ್ಕ್ಯಾನಿಂಗ್‌ ವ್ಯವಸ್ಥೆ ಇಲ್ಲ.
–ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT