ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ, ಹಾಸಿಗೆ, ಆಮ್ಲಜನಕ ಕೊರತೆ ಇಲ್ಲ: ಸಚಿವ ಸುರೇಶ್‌ ಕುಮಾರ್‌

ಕೋವಿಡ್‌ ನಿಯಂತ್ರಣ: ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವರ ಸಭೆ
Last Updated 21 ಏಪ್ರಿಲ್ 2021, 13:29 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ನಿರ್ವಹಣೆಗೆ ಹಣ, ಹಾಸಿಗೆ ಹಾಗೂ ಆಮ್ಲಜನಕದ ಕೊರತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಬುಧವಾರ ಹೇಳಿದರು.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ‘ಕಳೆದ ವರ್ಷ ಕೋವಿಡ್‌ ನಿರ್ವಹಣೆಯಲ್ಲಿ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಈ ವರ್ಷ ಕೂಡ, ನಿರ್ವಹಣೆಯಲ್ಲಿ ನಾವು ಹಿಂದೆ ಬೀಳಬಾರದು. ಅದಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.

‘ನಮಗೆ ಹಣದ ಕೊರತೆ ಇಲ್ಲ.‌ಕೋವಿಡ್‌ ನಿಯಂತ್ರಣಕ್ಕಾಗಿ ₹10 ಕೋಟಿ ಬಿಡುಗಡೆಯಾಗಿದೆ. ಎಲ್ಲ ಕಡೆಯು ಆಮ್ಲಜನಕದ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ನಮ್ಮಲ್ಲಿ ಕೊರತೆ ಇಲ್ಲ. ಜಿಲ್ಲಾಸ್ಪತ್ರೆಯಲ್ಲಿ ಹೊಸ ಆಮ್ಲಜನಕ ಘಟಕ ಸ್ಥಾಪಿಸಲಾಗಿದ್ದು, ಶನಿವಾರದಿಂದ ಕಾರ್ಯಾರಂಭ ಮಾಡಲಿದೆ’ ಎಂದು ಅವರು ಹೇಳಿದರು.

333 ಹಾಸಿಗೆ ಲಭ್ಯ: ‘ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳಿವೆ. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಹೋಂ ಐಸೊಲೇಷನ್‌ಗೆ ಕಳುಹಿಸಲಾಗುತ್ತಿದೆ. ಸದ್ಯ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ 273 ಹಾಸಿಗೆಗಳು ಲಭ್ಯವಿವೆ. ಒಂದು ವಾರದ ಅವಧಿಯಲ್ಲಿ ಇನ್ನೂ 50 ಹಾಸಿಗೆಗಳು ಸೇರ್ಪಡೆಯಾಗಲಿವೆ. ಹಾಗಾಗಿ, ಒಟ್ಟಾರೆ 333 ಹಾಸಿಗೆಗಳು ಸಿಕ್ಕಂತಾಗಲಿದೆ. ಈ ಪೈಕಿ 76 ಸಾಮಾನ್ಯ ಹಾಸಿಗೆಗಳು. 257 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಇವುಗಳಲ್ಲಿ 67 ಐಸಿಯು ಹಾಸಿಗೆಗಳಿವೆ. 35 ಹಾಸಿಗೆಗಳಿಗೆ ವೆಂಟಿಲೇಟರ್‌ ಸೌಲಭ್ಯವಿದೆ’ ಎಂದು ಸಚಿವರು ಹೇಳಿದರು.

‘ಇದಲ್ಲದೇ ಖಾಸಗಿ ಆಸ್ಪತ್ರೆಗಳಾದ ಕಾಮಗೆರೆಯ ಹೋಲಿಕ್ರಾಸ್‌ ಹಾಗೂ ಚಾಮರಾಜನಗರದ ಬಸವರಾಜೇಂದ್ರ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಕರ್ಯಗಳಿವೆ’ ಎಂದು ವಿವರಿಸಿದರು.

‘ಕೋವಿಡ್‌ ರೋಗಿಗಳು ಮೃತಪಟ್ಟರೆ ಅವರ ಅಂತ್ಯಸಂಸ್ಕಾರಕ್ಕಾಗಿ ಮತ್ತೆ ಒಂದು ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಲಾಗಿದೆ’ ಎಂದು ಸುರೇಶ್‌ ಕುಮಾರ್‌ ಅವರು ಹೇಳಿದರು.

15 ದಿನಗಳ ಅವಧಿ ಅತ್ಯಂತ ಮುಖ್ಯ: ‘ಕೋವಿಡ್‌ ನಿಗ್ರಹ ಮಾಡುವುದಕ್ಕೆ ಮುಂದಿನ 10 ರಿಂದ 15 ದಿನಗಳ ಅವಧಿ ಅತ್ಯಂತ ಪ್ರಾಮುಖ್ಯ ಪಡೆದಿದೆ. ಎಲ್ಲರೂ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬೇಡಿ. ಅಗತ್ಯ, ಅನಿವಾರ್ಯ ಕೆಲಸಗಳಿದ್ದರೆ ಮಾತ್ರ ಬರಬೇಕು. ಅಗತ್ಯ ಕೆಲಸ ಇಲ್ಲದಿದ್ದರೆ ಸರ್ಕಾರಿ ಕಚೇರಿಗಳಿಗೂ ಜನರು ಬರಬಾರದು’ ಎಂದು ಅವರು ಮನವಿ ಮಾಡಿದರು.

ಗುಣಮುಖ ಪ್ರಮಾಣ ಶೇ 90.94

ಜಿಲ್ಲೆಯಲ್ಲಿ ಈವರೆಗೆ 8,066 ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೆ 3.29ರಷ್ಟು ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ ರೋಗ ಲಕ್ಷಣ ಹೊಂದಿದವರು 1,924 ಮಂದಿ ಮಾತ್ರ. 6,312 ಜನರಲ್ಲಿ ರೋಗ ಲಕ್ಷಣಗಳು ಇರಲಿಲ್ಲ.7,303 ಮಂದಿ ಸೋಂಕುಮುಕ್ತರಾಗಿದ್ದು,ಗುಣಮುಖ ಪ್ರಮಾಣ ಶೇ 90.54ರಷ್ಟಿದೆ ಎಂದು ಸುರೇಶ್‌ ಕುಮಾರ್‌ ಅವರು ಹೇಳಿದರು.

ಲಸಿಕೆ ಹಾಕಿಸಿಕೊಳ್ಳಿ, ಚಿಕಿತ್ಸೆ ಪಡೆಯಿರಿ: ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಇಲ್ಲ. 10,710 ಡೋಸ್‌ಗಳು ದಾಸ್ತಾನು ಇವೆ. ಲಸಿಕೆ ತೆಗೆದುಕೊಳ್ಳುವುದು ಕರ್ತವ್ಯ ಎಂದು ಭಾವಿಸಿ, ಅರ್ಹರೆಲ್ಲರೂ ಲಸಿಕೆ ಪಡೆಯಬೇಕು. ರೋಗ ಲಕ್ಷಣ ಕಂಡು ಬಂದ ಕೂಡಲೇ ಪರೀಕ್ಷೆ ನಡೆಸಿ ಚಿಕಿತ್ಸೆ ಪಡೆಯಬೇಕು. ಮೃತಪಟ್ಟವರಲ್ಲಿ ಬಹುತೇಕರು ವಿಳಂಬವಾಗಿ ಆಸ್ಪತ್ರೆಗೆ ದಾಖಲಾದವರು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ವ್ಯವಸ್ಥೆ ಇದೆ. ನಿರ್ಭೀತಿಯಿಂದ ಚಿಕಿತ್ಸೆ ಪಡೆಯಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT