ಮಂಗಳವಾರ, ಆಗಸ್ಟ್ 9, 2022
20 °C
ಜಿಲ್ಲೆಗೆ ಭೇಟಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ಸುದ್ದಿಗೋಷ್ಠಿಯಲ್ಲಿ ಹೇಳಿಕೆ

ರಸಗೊಬ್ಬರ, ಬಿತ್ತನೆ ಬೀಜ ಕೊರತೆ ಇಲ್ಲ: ಬಿ.ಸಿ.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಸ, ರಸಗೊಬ್ಬರದ ಕೊರತೆ ಇಲ್ಲ. ಸಾಕಷ್ಟು ದಾಸ್ತಾನು ಇದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು. 

ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ 6,479 ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದೆ. ನಮ್ಮಲ್ಲಿ 8,230 ಕ್ಚಿಂಟಲ್‌ ಬೀಜ ಲಭ್ಯವಿದೆ. ಈವರೆಗೆ 2,545 ಕ್ವಿಂಟಲ್‌ಗಳಷ್ಟು ಬೀಜ ವಿತರಣೆ ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 690 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಇದೆ’ ಎಂದರು.

‘ಯೂರಿಯಾ, ಡಿಎಪಿ, ಪೊಟಾಷ್‌, ಕಾಂಪ್ಲೆಕ್ಸ್‌ ಸೇರಿದಂತೆ 22,718 ಕ್ವಿಂಟಲ್‌ ರಸಗೊಬ್ಬರಕ್ಕೆ ಬೇಡಿಕೆ ಇದೆ. 25,197.13 ಕ್ವಿಂಟಲ್‌ ದಾಸ್ತಾನು ಮಾಡಲಾಗಿತ್ತು. 12,990.34 ಕ್ವಿಂಟಲ್‌ ಮಾರಾಟವಾಗಿದೆ. ಇನ್ನು 12,206.79 ಕ್ವಿಂಟಲ್‌ ದಾಸ್ತಾನು ಇದೆ’ ಎಂದರು. 

‘ಜಿಲ್ಲೆಯಲ್ಲಿ ಈ ಬಾರಿ ಸ್ವಲ್ಪ ಮಳೆಯ ಕೊರತೆ ಉಂಟಾಗಿದೆ. ಏಪ್ರಿಲ್‌ 1ರಿಂದ ಜೂನ್‌ 13ರವರೆಗಿನ ಅವಧಿಯಲ್ಲಿ 238.30 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಈ ವರ್ಷ 194.4 ಮಿ.ಮೀ ಮಳೆಯಾಗಿದೆ. ಶೇ 17ರಷ್ಟು ಕೊರತೆಯಾಗಿದೆ. ಈ ವರ್ಷ 1.26 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಇದುವರೆಗೆ 50 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ 39.68ರಷ್ಟು ಬಿತ್ತನೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆ ಇದ್ದು, ಕೃಷಿ ಚಟುವಟಿಕೆ ಬಿರುಸು ಪಡೆಯಲಿದೆ’ ಎಂದು ಹೇಳಿದರು. 

ಬೆಳೆ ವಿಮೆ ಪಾವತಿ: ‘2016–17ನೇ ಸಾಲಿನ ಹಿಂಗಾರು ಅವಧಿಯ ಬೆಳೆ ವಿಮೆಯನ್ನು ತಾಂತ್ರಿಕ ಕಾರಣಗಳಿಂದ ಪಾವತಿ ಮಾಡಲು ಆಗಿರಲಿಲ್ಲ. ನಾನು ಕಳೆದ ಬಾರಿ ಗುಂಡ್ಲುಪೇಟೆಗೆ ಬಂದಿದ್ದಾಗ ರೈತರು ಪ್ರತಿಭಟನೆ ನಡೆಸಿದ್ದರು. ವಾರದಲ್ಲಿ ಪಾವತಿ ಮಾಡುವ ಭರವಸೆ ನೀಡಿದ್ದೆ. ಅದರಂತೆ 27,120 ರೈತರಿಗೆ ₹12.80 ಕೋಟಿ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗಿದೆ’ ಎಂದರು. 

ಹೆಚ್ಚಿದ ವಿತರಣೆ: ಇಲಾಖೆಯ ಮೂಲಕ ರೈತರಿಗೆ ವಿತರಿಸಲಾಗುತ್ತಿರುವ ಟಾರ್ಪಲೀನ್‌ಗಳ ಸಂಖ್ಯೆ ಹಾಗೂ ನೀಡುತ್ತಿರುವ ಸಹಾಯಧನದಲ್ಲಿ ಗಣನೀಯ ಹೆಚ್ಚಳವಾಗಿದೆ. 2019–20ನೇ ಸಾಲಿನಲ್ಲಿ 4,295 ಟಾರ್ಟಲೀನ್‌ಗಳನ್ನು ವಿತರಿಸಲಾಗಿತ್ತು. ಇದಕ್ಕಾಗಿ ₹4.36 ಕೋಟಿ ಸಹಾಯಧನ ನೀಡಲಾಗಿತ್ತು. 2020–21ನೇ ಸಾಲಿನಲ್ಲಿ 15,076 ಟಾರ್ಪಲೀನ್‌ಗಳನ್ನು ವಿತರಿಸಲಾಗಿದ್ದು, ₹16.7 ಕೋಟಿ ಸಹಾಯಧನ ನೀಡಲಾಗಿದೆ’ ಎಂದು ಬಿ.ಸಿ.ಪಾಟೀಲ ಅವರು ಮಾಹಿತಿ ನೀಡಿದರು. 

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್‌.ಮಹೇಶ್, ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಇದ್ದರು.

‘ಈ ಬಾರಿ ಹೆಚ್ಚು ತೊಂದರೆಯಾಗಿಲ್ಲ’
ಲಾಕ್‌ಡೌನ್‌ ಅವಧಿಯಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಹೆಕ್ಟೇರ್‌ಗೆ ₹10 ಸಾವಿರ ಪರಿಹಾರ ಧನ ನಿಗದಿಪಡಿಸಿರುವುದಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ಪಾಟೀಲ ಅವರು, ‘ನಾವು ಕೊಡುತ್ತಿರುವುದು ಪರಿಹಾರ ಅಲ್ಲ, ಸಹಾಯ ಧನ. ಎರಡಕ್ಕೂ ವ್ಯತ್ಯಾಸ ಇದೆ. ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸ್ವಲ್ಪವಾದರೂ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಹಾಯ ಧನ ಘೋಷಿಸಲಾಗಿದೆ’ ಎಂದು ಹೇಳಿದರು. 

‘ಕಳೆದ ವರ್ಷ 54 ದಿನಗಳ ಲಾಕ್‌ಡೌನ್‌ನಿಂದ ಹೆಚ್ಚು ತೊಂದರೆಯಾಗಿತ್ತು. ಹಾಗಾಗಿ, ₹25 ಸಾವಿರ ಪರಿಹಾರ ಧನ ಘೋಷಿಸಲಾಗಿತ್ತು. ಈ ಬಾರಿ ತೊಂದರೆಯಾಗಿರುವುದು ನಿಜ. ಆದರೆ, ಹಣ್ಣು, ತರಕಾರಿಗಳ ಮಾರಾಟಕ್ಕೆ ಸಮಯ ನಿಗದಿ ಮಾಡಿ ಅವಕಾಶ ನೀಡಲಾಗಿತ್ತು. ಕಳೆದ ವರ್ಷದಷ್ಟು ಸಮಸ್ಯೆಯಾಗಿಲ್ಲ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು