ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯಲ್ಲಿ ಮುಂದುವರಿಸಲು ನರ್ಸ್‌ಗಳ ಆಗ್ರಹ

Last Updated 5 ಏಪ್ರಿಲ್ 2022, 15:42 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಸಮಯದಲ್ಲಿಜಿಲ್ಲಾಸ್ಪತ್ರೆಯಲ್ಲಿ (ಸಿಮ್ಸ್) ತಾತ್ಕಾಲಿಕವಾಗಿ ನೇಮಕಮಾಡಿಕೊಂಡಿದ್ದ 110 ನರ್ಸ್‌ಗಳನ್ನು ಸೇವೆಯಿಂದ ವಜಾ ಮಾಡಿರುವ ಆದೇಶವನ್ನು ವಾಪಸ್‌ ಪಡೆಯುವಂತೆ ಒತ್ತಾಯಿಸಿ ನರ್ಸ್‌ಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು.

‘ಕೋವಿಡ್ ಸಮಯದಲ್ಲಿ ಜಿಲ್ಲಾಸ್ಪತ್ರೆಯಲ್ಲಿ (ಸಿಮ್ಸ್‌) ಖಾಲಿ ಇರುವ ನರ್ಸ್‌ಗಳ ಹುದ್ದೆಗೆ 110 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಎರಡು ವರ್ಷಗಳಿಂದ ನಾವು ಜೀವದ ಹಂಗು ತೊರೆದು ಕೋವಿಡ್‌ ಸೇನಾನಿಗಳಾಗಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಸೇವೆ ಮಾಡಿದ್ದೇವೆ. ನಮಗೆ ಬರುತ್ತಿದ್ದ ಸಂಬಳದಿಂದಲ್ಲೇ ಕುಟುಂಬದ ಜೀವನ ಸಾಗುತ್ತಿತ್ತು. ಆದರೆ ಏಕಾಏಕಿ ನಮ್ಮನ್ನು ಸೇವೆಯಿಂದ ತೆಗೆಯಲು ಆದೇಶ ಮಾಡಲಾಗಿದೆ. ಇದರಿಂದ ನಮ್ಮ ಬದುಕು ಬೀದಿಗೆ ಬಂದಂತಾಗಿದೆ. ನಮ್ಮ ಕುಟುಂಬಗಳೂ ಕಷ್ಟಕ್ಕೆ ಸಿಲುಕಿವೆ. ಹಾಗಾಗಿ, ನಮ್ಮನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮೂರು ತಿಂಗಳುಗಳಿಂದ ನಮಗೆ ವೇತನ ಬಾಕಿ ಇದ್ದು, ಅದನ್ನು ತಕ್ಷಣ ಬಿಡುಗಡೆ ಮಾಡಬೇಕು. ಸರ್ಕಾರ ಘೋಷಣೆ ಮಾಡಿದ್ಧ ಕೋವಿಡ್ ವಿಶೇಷ ಪೋತ್ಸಾಹಧನವನ್ನು ಕೊಡಿಸಬೇಕು’ ಪ್ರತಿಭಟನನಿರತರು ಆಗ್ರಹಿಸಿದರು.

ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್ ರಾಜ್ ಮಾತನಾಡಿ, ‘ಕೋವಿಡ್‌ ಸೇನಾನಿಗಳಾಗಿ ನೇಮಕಗೊಂಡಿರುವ ನರ್ಸ್‌ಗಳು ರಾಜ್ಯದಾದ್ಯಂತ 6000ಕ್ಕೂ ಹೆಚ್ಚು ಮಂದಿ ಇದ್ದಾರೆ. ಜಿಲ್ಲೆಯಲ್ಲಿ 110 ಮಂದಿ ಇದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಇನ್ನೂ 300ಕ್ಕೂ ಹೆಚ್ಚು ನರ್ಸ್‌ ಹುದ್ದೆಗಳು ಭರ್ತಿಯಾಗಬೇಕಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಸಾರ್ವಜನಿಕರ ಸೇವೆ ಸಲ್ಲಿಸಿರುವ 110 ನರ್ಸ್‌ಗಳನ್ನು ಮಾನವೀಯತೆ, ಅನುಭವದ ದೃಷ್ಟಿಯಿಂದ ಒಳಗುತ್ತಿಗೆಯಲ್ಲಿ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ಸಾಗರ್, ರವಿ, ಪ್ರದೀಪ್, ರಾಘು, ಮಧುಸೂದನ್, ಶಿಲ್ಪ, ಶಶಿ, ಶಶಿಕಲಾ, ಲೀಲಾವತಿ, ನಂದಿನಿ, ಸುಷ್ಮಾ, ರುಕ್ಮಿಣಿ, ಮೇಘನಾ, ಸುಶ್ಮಿತಾ, ಕಲಾವತಿ, ನಾಗಮ್ಮ, ಶೋಭ, ಲಾವಣ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT