ಗುರುವಾರ , ನವೆಂಬರ್ 14, 2019
19 °C
ಡಾ.ಕೆ.ಬಿ. ಸಿದ್ದಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮುನಿರಾಜು ಅಭಿಮತ

ಶೋಷಿತ ಸಮುದಾಯಕ್ಕೆ ದಾರಿದೀಪ

Published:
Updated:
Prajavani

ಚಾಮರಾಜನಗರ: ‘ದಲಿತ ಕವಿ ಡಾ.ಕೆ.ಬಿ. ಸಿದ್ದಯ್ಯ ಅವರ ಚಿಂತನೆಗಳು ಶೋಷಿತ ಸಮುದಾಯಕ್ಕೆ ದಾರಿದೀಪವಾಗಿವೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು ಹೇಳಿದರು.

ನಗರದ ರೋಟರಿ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟ, ರಂಗವಾಹಿನಿ ಸಂಸ್ಥೆ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ದಲಿತ ಕವಿ ಡಾ.ಕೆ.ಬಿ. ಸಿದ್ದಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ದಲಿತ ಕವಿಯಾಗಿದ್ದ ಸಿದ್ದಯ್ಯ ಅವರು ದಲಿತ ಸಂವೇದನೆಯ ಅಲ್ಲಮ. ಇವರು ಹೋರಾಟದಲ್ಲಿ ಕಡಿಮೆ ಇರಲಿಲ್ಲ. ಯಾವುದೇ ವಿಚಾರದಲ್ಲಿ ನಿಷ್ಠುರ, ನಿರ್ದಾಕ್ಷಿಣ್ಯವಾಗಿ ಮಾತನಾಡುತ್ತಿದ್ದರು. ದಲಿತ ಸಾಹಿತ್ಯ ಕಲಿಸಿದ್ದಾರೆ. ಸಂಘಟನೆ ಹೇಗೆ ಮಾಡಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಇವರು ಪ್ರತಿನಿತ್ಯ ಚಳವಳಿ ಕುರಿತು ಮಾತನಾಡುತ್ತಿದ್ದರು. ಅವರ ಸಾಹಿತ್ಯ, ಕವನ ಹಾಗೂ ಬರಹಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಶೋಷಿತ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಿದೆ’ ಎಂದರು.

‘ಅವರ ಆದರ್ಶ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ. ಸಿದ್ದಯ್ಯ ಅವರ ಆದರ್ಶ ಪಾಲನೆಗಾಗಿ ಇಡೀ ದಿನ ವಿಚಾರ ಸಂಕಿರಣ ಅಯೋಜನೆ ಮಾಡಿ ಜನಸಾಮಾನ್ಯರಿಗೆ ಅವರ ಆದರ್ಶ ತಿಳಿಸುವ ಕೆಲಸ ಮಾಡಬೇಕಿದೆ’ ಎಂದರು.

ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ‘ಸಿದ್ದಯ್ಯ ಅವರು ಮಾನವ ಹೃದಯದ ಸಮಾಜ ಚಿಂತಕರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದ ಅಲ್ಲಮಪ್ರಭುವಿನಂತೆ 21ನೇ ಶತಮಾನದಲ್ಲಿ ಆಧುನಿಕ ಅಲ್ಲಮಪ್ರಭುವಾಗಿ ಪ್ರಸಿದ್ಧರಾಗಿದ್ದರು. ಅವರ ನಿಧನದಿಂದ ಸಮಾಜ, ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಹೇಳಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಮಾತನಾಡಿ, ‘ನಾಡು ಕಂಡಂತಹ ದಲಿತ ಕವಿ ಸಿದ್ದಯ್ಯ. ಇವರು ಸ್ನೇಹಜೀವಿಯಾಗಿದ್ದರು. ಭಗವಾನ್‌ ಬುದ್ಧ, ಅಂಬೇಡ್ಕರ್‌ ಅವರ ವಿಚಾರಗಳನ್ನು ಅವರ ಸಾಹಿತ್ಯ ಒಳಗೊಂಡಿದೆ’ ಎಂದರು.

ಸಭೆಯಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಕೆ.ಎಂ. ನಾಗರಾಜು, ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಮುಖಂಡರಾದ ಎಂ.ಶಿವಮೂರ್ತಿ, ಬಸವನಪುರ ರಾಜಶೇಖರ್, ಈಶ್ವರ್ ಇದ್ದರು.

ಅಲೆಮಾರಿ ಹೋರಾಟಗಾರ
‘ದಲಿತ ಕವಿ ಸಿದ್ದಯ್ಯ ಅವರು ಪ್ರಾಮಾಣಿಕ ಹೋರಾಟಗಾರರು. ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮೊದಲ ಅಲೆಮಾರಿನ ಹೋರಾಟಗಾರರಾಗಿದ್ದರು. ದಲಿತ ಹಿತಾಸಕ್ತಿ ಬಂದಾಗ ನಾವೆಲ್ಲ ಒಂದಾಗಿ ಹೋರಾಟ ಮಾಡಬೇಕಿದೆ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಸಿ.ಎಂ. ಕೃಷ್ಣಮೂರ್ತಿ ಹೇಳಿದರು.

ಪ್ರತಿಕ್ರಿಯಿಸಿ (+)