ಸೋಮವಾರ, ಅಕ್ಟೋಬರ್ 26, 2020
21 °C
‘ಮಾಸದ ನೆನಪು ಹಾಗೂ ನುಡಿ ನಮನ’ ‌ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಿ.ಗುರುಸ್ವಾಮಿ ಸ್ಮರಣೆ

ಜಾತ್ಯತೀತ ನಿಲುವಿನ ನೇರ ನುಡಿಯ ರಾಜಕಾರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸಾಹುಕಾರ, ವಕೀಲ, ಶಾಸಕ, ಮಾಜಿ ಶಾಸಕ ಎಂಬ ಅಹಂಕಾರವನ್ನು ಎಲ್ಲೂ ತೋರಿಸಿಕೊಳ್ಳದೇ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದ ಸಿ. ಗುರುಸ್ವಾಮಿ ಅವರ ದಿಢೀರ್‌ ನಿಧನವನ್ನು ಯಾರೂ ನಿರೀಕ್ಷಿಸಿರಲಿಲ್ಲ’ ಎಂದು ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಎ.ಜಿ.ಶಿವಕುಮಾರ್‌ ಅವರು ಹೇಳಿದರು.

ಸಿ.ಗುರುಸ್ವಾಮಿ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ನಗರದ ಸಿದ್ದಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಮಾಸದ ನೆನಪು ಹಾಗೂ ನುಡಿ ನಮನ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ‘ಬಾಲ್ಯದಿಂದಲೇ ಸೇವಾ ಮನೋಭಾವನೆ ಹೊಂದಿದ್ದ ಗುರುಸ್ವಾಮಿ ನೇರ ನಡೆ, ನುಡಿಗೆ ಹೆಸರಾಗಿದ್ದವರು. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದರು.  

ಉತ್ತಮ ಕುಟುಂಬದಿಂದ ಬಂದ ಸಿ.ಗುರುಸ್ವಾಮಿ, ಸಿದ್ದಗಂಗಾ ಮಠದಲ್ಲಿ ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮುಗಿಸಿ ನಂತರ ಪದವಿ ಹಾಗೂ ಎಲ್‌ಎಲ್‌ಬಿ ಮುಗಿಸಿ, ವಕೀಲರಾಗಿ, ನಂತರ ರಾಜಕಾರಣಿಯಾಗಿಯಾದವರು. ಜಾತ್ಯತೀತ ನಿಲುವಿನ ತಮ್ಮ ನೇರ, ನುಡಿಗೆ ಅಪಾರ ಸ್ನೇಹಿತರನ್ನು ಸಂಪಾದಿಸಿದ್ದರು. ತಾವು ರಾಜಕಾರಣಿಯಾಗಬೇಕು ಎಂಬ ಹಂಬಲವನ್ನು ಅವರು ಎಂದೂ ವ್ಯಕ್ತಪಡಿಸಿರಲಿಲ್ಲ. ಅವರ ಜಾತ್ಯತೀತ ಮನೋಭಾವನೆಯೇ ಅವರನ್ನು ರಾಜಕಾರಣಿಯನ್ನಾಗಿ ಮಾಡಿತು’ ಎಂದು ಶಿವಕುಮಾರ್‌ ಅವರು ಅಭಿಪ್ರಾಯಪಟ್ಟರು.  

ರಸ್ತೆಗೆ ಹೆಸರಿಡಿ: ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ಮಾತನಾಡಿ, ‘ಗುರುಸ್ವಾಮಿ ಅವರು ಅಜಾತಶತ್ರುವಾಗಿದ್ದರು.  ಜಾತ್ಯತೀತ, ಪಕ್ಷಾತೀತ ಮತ್ತು ಸ್ನೇಹಮಹಿ ನಾಯಕರಾಗಿದ್ದ ಅವರು ಚಾಮರಾಜನಗರದ ಅಭಿವೃದ್ದಿಗೆ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ನಮ್ಮಂತಹ ಯುವ ನಾಯಕರಿಗೆ ಮಾರ್ಗದರ್ಶಕರಾಗಿದ್ದರು. ಇವರ ಮನೆಯಿರುವ ರಸ್ತೆಗೆ ಸಿ.ಗುರಸ್ವಾಮಿಯವರ ಹೆಸರಿಡಬೇಕು’ ಎಂದು ಅವರು ಹೇಳಿದರು. 

ಜನಸೇವೆಯಲ್ಲಿ ತಂದೆಯ ಕಾಣುವೆ:  ಗುರುಸ್ವಾಮಿ ಅವರ ಮಗಳು, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಅವರು ಮಾತನಾಡಿ, ‘ತಂದೆಯ ಸಾವಿನಿಂದ ನಾನು ದೃತಿಗೆಟ್ಟಿಲ್ಲ. ಆದರೆ, ನಮ್ಮನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದ ಅವರ ಸೇವೆಯನ್ನು ಮಾಡಲಾಗಲಿಲ್ಲವೆಂಬ ನೋವು ಕಾಡುತ್ತಿದೆ’ ಎಂದು ದುಃಖಿಸಿದರು.

‘ನನಗೆ ತಂದೆಯಾಗಿ, ಗುರುವಾಗಿ, ರಾಜಕೀಯ ಗುರುವಾಗಿ ಎಲ್ಲವನ್ನೂ ಕಲಿಸಿದ್ದಾರೆ. ಜನಸೇವೆಯೇ ಜನಾರ್ದನ ಸೇವೆ ಎಂಬ ಬಗ್ಗೆ ಅರಿವು ಮೂಡಿಸಿದ್ದಾರೆ. ಆ ಜನಸೇವೆಯಲ್ಲಿಯೇ ತಂದೆಯನ್ನು ಕಾಣುವೆ’ ಎಂದರು.

ಆಶೀರ್ವಚನ: ಮರಿಯಾಲ ಮಠದ ಇಮ್ಮಡಿ ಮುರುಘರಾಜೆಂದ್ರಸ್ವಾಮೀಜಿ, ಹರವೆ ಮಠದ ಸರ್ಪಭೂಷಣಸ್ವಾಮೀಜಿ, ನಗರದ ವಿರಕ್ತ ಮಠದ ಚನ್ನಬಸವಸ್ವಾಮೀಜಿ, ಹಂಡ್ರಕಳ್ಳಿ ಮಠದ ಪಂಚಾಕ್ಷರಿ ಸ್ವಾಮೀಜಿ, ಪ್ರಜಾಪತಿ ಬ್ರಹ್ಮಕುಮಾರಿ ವಿವಿಯ ಜಿಲ್ಲಾ ಸಂಚಾಲಕಿ ದಾನೇಶ್ವರೀ ಅವರು ಆಶೀರ್ವಚನ ನೀಡಿ, ಗುರುಸ್ವಾಮಿಯವರ ಕೊಡುಗೆಗಳನ್ನು ಸ್ಮರಿಸಿದರು.

ಪಕ್ಷಭೇದ ಮರೆತರು: ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಭಾಗವಹಿಸಿದರು. 

ಗುರುಸ್ವಾಮಿ ಅವರ ಒಡನಾಡಿಗಳಾಗಿದ್ದ ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಎಸ್‌.ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಕಾಳನಹುಂಡಿ ಗುರುಸ್ವಾಮಿ, ಎಂ.ರಾಮಚಂದ್ರ, ಬರಹಗಾರ ಲಕ್ಷ್ಮೀನರಸಿಂಹ, ಕೂಡ್ಲೂರು ಹನುಮಂತಶೆಟ್ಟಿ, ಎಸ್.ಬಾಲರಾಜು, ಮಹಮದ್ ಅಸ್ಗರ್ ಮುನ್ನಾ, ವೆಂಕಟರಮಣಸ್ವಾಮಿ (ಪಾಪು), ಶಿವಮೂರ್ತಿ, ಸಿ.ಎಂ.ಜಗದೀಶ್, ದಿಲೀಪ್, ಚನ್ನಬಸಪ್ಪ ಇತರರು ಗುರುಸ್ವಾಮಿಯವರೊಂದಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು