ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಯ್ಯನಪುರ: ಒಡೆಯರ್‌, ಬಿ.ರಾಚಯ್ಯ ಭಾವಚಿತ್ರ ಮೆರವಣಿಗೆ

Last Updated 5 ಅಕ್ಟೋಬರ್ 2022, 16:01 IST
ಅಕ್ಷರ ಗಾತ್ರ

ಚಾಮರಾಜನಗರ: ವಿಜಯ ದಶಮಿ ದಿನವಾದ ಬುಧವಾರ ತಾಲ್ಲೂಕಿನ ಸಿದ್ದಯ್ಯನಪುರದಲ್ಲಿಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಹಾಗೂ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಭಾವಚಿತ್ರಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಸಿದ್ದಯ್ಯನಪುರ ಗ್ರಾಮವನ್ನು ನಿರ್ಮಾಣ ಮಾಡುವುದಕ್ಕಾಗಿ ಜಯಚಾಮರಾಜೇಂದ್ರ ಒಡೆಯರ್‌ ಅವರು 1000 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡಿದ್ದರು.

1957ರಲ್ಲಿ ಅರಣ್ಯ ಸಚಿವರಾಗಿದ್ದ ಬಿ.ರಾಚಯ್ಯ ಅವರು ಸಿದ್ದಯ್ಯನಪುರ ಸೇರಿದಂತೆ 16 ಕಾಲೊನಿಗಳನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ವಹಿಸಿದ್ದರು. ಈ ಭಾಗದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಬಡವರು ಭೂಮಾಲೀಕರಾಗಿ ಕೃಷಿಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ. ಮಾಜಿ ಶಾಸಕರಾದ ಮಾದಯ್ಯ ಹಾಗೂ ರಾಮಸಮುದ್ರ ಬಸವಣ್ಣ ಅವರ ಕೊಡುಗೆಯೂ ಇದರಲ್ಲಿದೆ.

ಪ್ರತಿ ವರ್ಷ ವಿಜಯ ದಶಮಿಯಂದು ಮೈಸೂರು ಒಡೆಯರ್‌, ಬಿ.ರಾಚಯ್ಯ ಅವರ ಕೊಡುಗೆಗಳನ್ನು ಸ್ಮರಿಸಿ ಇಬ್ಬರ ಭಾವಚಿತ್ರಗಳ ಮೆರವಣಿಗೆಯನ್ನು ಗ್ರಾಮಸ್ಥರು ಮಾಡುತ್ತಾ ಬಂದಿದ್ದಾರೆ.

ಬುಧವಾರ ಅಲಂಕೃತ ಟ್ರಾಕ್ಟರ್‌ನಲ್ಲಿ ಜಯಚಾಮರಾಜೇಂದ್ರ ಒಡೆಯರ್‌, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಬಿ. ರಾಚಯ್ಯ, ಮಾದಯ್ಯ ಅವರ ಭಾವಚಿತ್ರವಿಟ್ಟು ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ, ಬ್ಯಾಂಡ್ ಸೆಟ್‌ನೊಂದಿಗೆ ಮೆರವಣಿಗೆ ಮಾಡಿದರು.

ಗ್ರಾಮದ ಯಜಮಾನ ಕೆಂಪರಾಜು ಮಾತನಾಡಿ, ‘ಪ್ರತಿ ವರ್ಷ ನಮ್ಮ ಗ್ರಾಮದಲ್ಲಿ ಹಿರಿಯರು ವಿಜಯದಶಮಿ ದಿನದಂದು ಗ್ರಾಮ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾದವರನ್ನು ನೆನಪು ಮಾಡಿಕೊಂಡು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಜಯಚಾಮರಾಜೇಂದ್ರ ಒಡೆಯರ್‌ ಅವರು ನಮ್ಮೆಗೆಲ್ಲ ವ್ಯವಸಾಯ ಮಾಡಲು ಭೂಮಿಯನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಮಾಜಿ ರಾಜ್ಯಪಾಲ ದಿವಂಗತ ಬಿ.ರಾಚಯ್ಯ ಅವರು ನಮ್ಮ ಗ್ರಾಮಗಳ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರು. ಸಿದ್ದಯ್ಯನಪುರ ಗ್ರಾಮ ಇಂದು ಇಷ್ಟೊಂದು ಅಭಿವೃದ್ದಿ ಹೊಂದಲುಮಾಜಿ ಶಾಸಕ ಮಾದಯ್ಯ, ರಾಮಸಮುದ್ರ ಬಸವಣ್ಣ ಅವರು ಶ್ರಮ ವಹಿಸಿದ್ದಾರೆ. ಇದನ್ನು ನೆನಪು ಮಾಡಿಕೊಳ್ಳುವುದರ ಜೊತೆಗೆ ನಮ್ಮ ಯುವ ಪೀಳಿಗೆಗೆ ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷದ ಮೆರವಣಿಗೆ ಮಾಡಲಾಗುತ್ತಿದೆ’ ಎಂದರು.

ಯಜಮಾನರಾದ ಕೆಂಪರಾಜು, ನಾರಾಯಣಸ್ವಾಮಿ, ಶೇಖರ್, ಗ್ದಾಮ ಪಂಚಾಯಿತಿ ಸದಸ್ಯರಾದ ಸೋಮಣ್ಣ, ಬಸವಣ್ಣ, ಮಂಜು, ರೇಖಾ ಮಹದೇವಸ್ವಾಮಿ, ಮಹದೇವಮ್ಮ ಸಿದ್ದಯ್ಯ, ಮುಖಂಡರಾದಶೈಲಜಾ ಗೋವಿಂದರಾಜು, ಚನ್ನಂಜಯ್ಯ, ಗುಂಡಯ್ಯ, ಡಿ.ಎಸ್. ಚೆನ್ನಂಜಯ್ಯ, ಪರ್ವತರಾಜು, ಸುನೀಲ್, ಕುಮಾರ್, ಹುನುಮಂತು, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಸಂಘಗಳ ಪ್ರತಿನಿಧಿಗಳು ಹಾಗೂ ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT