ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಐತಿಹಾಸಿಕ ದೇಗುಲಗಳಲ್ಲಿ ಮೂಲಸೌಕರ್ಯಗಳ ಕೊರತೆ

ಪುರಾತನ ದೇವಾಲಯಗಳಿಗೆ ಬೇಕಿದೆ ರಕ್ಷಣೆ
Last Updated 25 ಸೆಪ್ಟೆಂಬರ್ 2021, 16:48 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯಲ್ಲೇ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ತಾಲ್ಲೂಕು ಎಂದರೆ ಅದು ಗುಂಡ್ಲುಪೇಟೆ.

ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಸುಡುವ ಬೇಸಿಗೆಯಲ್ಲೂ ಮಂಜು ಕವಿಯುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಪುರಾತತ್ವ ಇಲಾಖೆ ನಿರ್ವಹಿಸುತ್ತಿರುವ ತೆರಕಣಾಂಬಿಯ ತ್ರಯಂಬಕೇಶ್ವರ ದೇವಾಲಯ, ಹುಲುಗನಮುರಡಿಯ ವೆಂಕಟರಣಮಣಸ್ವಾಮಿ ದೇವಾಲಯ, ಪಾರ್ವತಿ ಬೆಟ್ಟ ಲಕ್ಷ್ಮಿ ವರದರಾಜಸ್ವಾಮಿ ದೇವಸ್ಥಾನ, ಗುಂಡ್ಲುಪೇಟೆಯ ಪರವಾಸು ದೇವಾಲಯ, ಅದರ ಸುತ್ತಮುತ್ತಲಿನ ಇತರ ದೇವಾಲಯಗಳು... ಹೀಗೆ ಹಲವು ಧಾರ್ಮಿಕ ಹಾಗೂ ಪರಿಸರ ಪ್ರವಾಸಿ ತಾಣಗಳು ಇಲ್ಲಿವೆ.

ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರತಿ ದಿನ ನೂರಾರು ಪ್ರವಾಸಿಗರು ಬರುವುದರಿಂದ ಅಲ್ಲಿ ಪ್ರವಾಸಿಗರಿಗೆ ಬೇಕಾದ ತಕ್ಕಮಟ್ಟಿನ ವ್ಯವಸ್ಥೆಗಳಿವೆ. ಆದರೆ, ತಾಲ್ಲೂಕಿನ ವಿವಿಧ ಭಾಗಗಗಳಲ್ಲಿರುವ ಪುರಾತನ ದೇವಾಲಯಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಭಕ್ತರ ಪಾಲಿಗೆ ದೂರವಾಗಿವೆ.

ಇದಕ್ಕೊಂದು ತಾಜಾ ಉದಾಹರಣೆ ಪಟ್ಟಣಕ್ಕೆ ಹೊಂದಿಕೊಂಡಿರುವ ಪರವಾಸು ದೇವಾಲಯ. ಅಂದಾಜು 350 ವರ್ಷಗಳ ಇತಿಹಾಸವಿರುವ ಈ ದೇವಾಲಯ ಶಿಥಿಲಾವಸ್ಥೆ ತಲುಪಿತ್ತು. ಪುರಾತತ್ವ ಇಲಾಖೆಯ ಮೇಲ್ವಿಚಾರಣೆಯಲ್ಲಿ ₹1 ಕೋಟಿ ವೆಚ್ಚದಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿತ್ತು. 2016–17ರಲ್ಲಿ ನವೀಕರಣ ಕೆಲಸ ಪೂರ್ಣಗೊಂಡಿತ್ತು. ಜೀರ್ಣೋದ್ಧಾರದ ಬಳಿಕವೂ ದೇವಾಲಯ ಭಕ್ತರಿಗೆ ಮುಕ್ತವಾಗದೇ ಹಾಗೆಯೇ ಉಳಿದಿದೆ. ಈಗ ಗಿಡ ಗಂಟಿಗಳು ಬೆಳೆದು ದೇವಾಲಯದ ಆವರಣ ಕುಡುಕರು, ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ದೇವಾಲಯದ ಮೂಲ ವಿಗ್ರಹವೂ ಇಲ್ಲಿಲ್ಲ. ಪಟ್ಟಣದ ವಿಜಯನಾರಾಯಣಸ್ವಾಮಿ ದೇವಾಲಯದಲ್ಲಿ ಇರಿಸಲಾಗಿದೆ.

ಈ ದೇವಾಲಯದ ಪಕ್ಕದಲ್ಲಿ ದೊಡ್ಡ ಕಲ್ಯಾಣಿ ಇದ್ದು, ನಿರ್ವಹಣೆಯ ಕೊರತೆಯಿಂದ ಅದು ಕೂಡ ಕಸ, ಹೂಳಿನ ಗುಂಡಿಯಾಗಿ ಬದಲಾಗಿದೆ.

‘ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣ ಖರ್ಚು ಮಾಡಿ ಜೀರ್ಣೋದ್ಧಾರ ಮಾಡಿರುವ ದೇವಾಲಯಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಪರವಾಸು ದೇವಾಲಯದ ಪಕ್ಕದಲ್ಲೇ ಕಲ್ಯಾಣಿ ಇದ್ದು, ಅದರಲ್ಲಿ ಕಸ ತುಂಬಿಕೊಂಡಿದೆ’ ಎಂದು ಪುರಸಭಾ ಸದಸ್ಯ ಎಚ್.ಆರ್.ರಾಜಗೋಪಾಲ್ ಅವರು ಹೇಳಿದರು.

ಚಾಮರಾಜನಗರ ಕಡೆಯಿಂದ ಗುಂಡ್ಲುಪೇಟೆ ಪ್ರವೇಶಿಸುವಾಗ ಎಡಗಡೆಯೇ ಈ ದೇವಾಲಯ ಇದ್ದು, ತಲಕಾಡಿನ ವೈದ್ಯನಾಥೇಶ್ವರ ದೇವಾಲಯದ ವಾಸ್ತು ಶಿಲ್ಪವನ್ನು ಹೋಲುತ್ತದೆ. ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೂಡ ಈ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಭಿವೃದ್ಧಿ ಕಾರ್ಯಕ್ಕೆ ಸೂಚಿಸಿದ್ದರು.

ಮೂಲ ಸೌಕರ್ಯಗಳ ಕೊರತೆ

ಪಾರ್ವತಿ ಬೆಟ್ಟದಲ್ಲಿರುವ ಪಾರ್ವತಾಂಬ ದೇವಸ್ಥಾನ ತಾಲ್ಲೂಕು ಸೇರಿದಂತೆ ‌ಸುತ್ತಮುತ್ತಲಿನ ಜಿಲ್ಲೆಗಳಿಗೂ ಚಿರ ಪರಿಚಯವಾದ ದೇವಸ್ಥಾನ. ಇಲ್ಲಿ ಜಾತ್ರೆ ಮತ್ತು ಮದುವೆ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತದೆ.

‘ಈ ದೇವಸ್ಥಾನಕ್ಕೆ ಪಟ್ಟಣದಿಂದ ಬಸ್ ವ್ಯವಸ್ಥೆ ಇದೆ. ನೀರಿನ ಸೌಲಭ್ಯ ಉತ್ತಮವಾಗಿದೆ. ಆದರೆ ಶೌಚಾಲಯ ವ್ಯವಸ್ಥೆ ಇಲ್ಲ. ತಾಲ್ಲೂಕು ಆಡಳಿತ ಸಾರ್ವಜನಿಕರ ಹಿತದೃಷ್ಟಿಯಿಂದ ಶೌಚಾಲಯ ನಿರ್ಮಿಸಿದರೆ ಉಪಯೋಗವಾಗುತ್ತದೆ’ ಎಂದು ಶಿಂಡನಪುರ ಗ್ರಾಮದ ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಂಗಳ ಗ್ರಾಮದಲ್ಲಿ ಇರುವ ವರದರಾಜಸ್ವಾಮಿ ದೇವಸ್ತಾನವು 12ನೇ ಶತಮಾನದಾಗಿದ್ದು, ನಿರ್ವಹಣೆ ಕೊರತೆಯಿಂದ ನಶಿಸುವ ಹಂತ ತಲುಪಿದೆ. ತಾಲ್ಲೂಕು ಆಡಳಿತವಾಗಲಿ, ಗ್ರಾಮ ಪಂಚಾಯಿತಿಯಾಗಲಿ ದೇವಾಲಯದ ರಕ್ಷಣೆಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಗುಂಡ್ಲುಪೇಟೆಗೆ ಸಮೀಪದಲ್ಲಿರುವ ಪರವಾಸು ದೇವಸ್ಥಾನದ ನಿರ್ವಹಣೆ ಬಗ್ಗೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ. ಪ್ರತಿಕ್ರಿಯೆ ಬಂದ ನಂತರ ಕ್ರಮ ವಹಿಸಲಾಗುತ್ತದೆ.
- ಜೆ.ರವಿಶಂಕರ್, ತಹಶಿಲ್ದಾರ್

ತಾಲ್ಲೂಕಿನಲ್ಲಿ ಅನೇಕ ಕಡೆ ಪುರಾತನ ದೇವಸ್ಥಾನ, ಕಲ್ಯಾಣಿಗಳು ಇದೆ. ಇವುಗಳು ಸಂಸ್ಕೃತಿಯ ಪ್ರತಿಬಿಂಬಗಳು. ಆಡಳಿತ, ಜನಪ್ರತಿನಿಧಿಗಳು ಜೀರ್ಣೋದ್ಧಾರ ಮಾಡಬೇಕು
- ರವಿಕುಮಾರ್, ಗುಂಡ್ಲುಪೇಟೆ

ದೇವಸ್ಥಾನದ ಸುತ್ತಲೂ ಅಭಿವೃದ್ಧಿ ಮಾಡಿ ಉದ್ಯಾನನ ಮಾಡಿದರೆ ಇದೊಂದು ಅದ್ಭುತ ಪ್ರವಾಸಿ ತಾಣವಾಗುತ್ತದೆ. ಇಂತಹ ಸ್ಮಾರಕಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.
- ಆರ್.ಕೆ.ಮಧು, ಛಾಯಾಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT