ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಯ ಮೃತದೇಹ ಪತ್ತೆ ಪ್ರಕರಣ: ವಿದ್ಯುತ್‌ ಆಘಾತದಿಂದ ಸಾವು, ಆರೋಪಿ ಬಂಧನ

ಬಂಡೀಪುರ: ಕೆರೆಯಲ್ಲಿ ಹುಲಿಯ ಮೃತದೇಹ ಪತ್ತೆ ಪ್ರಕರಣ, ಐವರು ನಾಪತ್ತೆ
Last Updated 24 ಫೆಬ್ರುವರಿ 2023, 14:01 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಕೆಬ್ಬೇಪುರ ಗ್ರಾಮದ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಇದೇ 7ರಂದು ಗಂಡು ಹುಲಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಹುಲಿಯು ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್‌ ತಂತಿ ಬೇಲಿ ಸ್ಪರ್ಶಿಸಿ ಮೃತಪಟ್ಟಿರುವುದು ಖಚಿತವಾಗಿದ್ದು, ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್‌ ಹರಿಸಿರುವುದು ತನಿಖೆಯಿಂದ ಗೊತ್ತಾಗಿದೆ. ವಿದ್ಯುತ್‌ ತಂತಿ ಸ್ಪರ್ಶಿಸಿ ಹುಲಿ ಸತ್ತಿರುವ ಸಂಗತಿಯನ್ನು ಮುಚ್ಚಿ ಹಾಕುವುದಕ್ಕಾಗಿ ಆರು ಮಂದಿ ಒಟ್ಟಾಗಿ ಹುಲಿಯ ಮೃತದೇಹವನ್ನು ಕೆರೆಗೆ ಎಸೆದಿರುವುದು ತನಿಖೆಯಿಂದ ಗೊತ್ತಾಗಿದೆ.

ಕೆಬ್ಬೇಪುರ ಗ್ರಾಮದ ರೇಚಪ್ಪ (34) ಬಂಧಿತ ಆರೋಪಿ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನು ಐದು ಮಂದಿ ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಅರಣ್ಯ ಇಲಾಖೆಯು ಎರಡು ವಿಶೇಷ ತಂಡಗಳನ್ನು ರಚಿಸಿದೆ.

ಅಂದಾಜು ಐದು ವರ್ಷ ವಯಸ್ಸಿನ ಗಂಡು ಹುಲಿಯ ಮೃತದೇಹ ಫೆ.7ರಂದು ಕೆರೆಯಲ್ಲಿ ಪತ್ತೆಯಾಗಿತ್ತು.

ಹುಲಿಯ ಕಾಲುಗಳು ಹಾಗೂ ಕುತ್ತಿಗೆಗೆ ತಂತಿಯಿಂದ ಕಟ್ಟಿ, ಅದಕ್ಕೆ ಭಾರವಾದ ಕಲ್ಲು ಕಟ್ಟಿ ಕೆರೆಗೆ ಹಾಕಲಾಗಿತ್ತು. ಹಾಗಾಗಿ ಹುಲಿಯ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಹುಲಿಯ ಕಳೇಬರವನ್ನು ಬೇರೆ ಕಡೆಯಿಂದ ತಂದು ಕೆರೆಗೆ ಹಾಕಲಾಗಿದೆ ಎಂದು ಹೇಳಿದ್ದ ಅಧಿಕಾರಿಗಳು, ವಿದ್ಯುತ್‌ ಆಘಾತದಿಂದ ಮೃತಪಟ್ಟಿಲ್ಲ ಎಂದೂ ಹೇಳಿದ್ದರು. ‌

ಆದರೆ, ತನಿಖೆ ವೇಳೆ ಹುಲಿಯ ಸಾವಿಗೆ ವಿದ್ಯುತ್‌ ಆಘಾತವೇ ಕಾರಣ ಎಂದು ಗೊತ್ತಾಗಿದೆ.

ಹುಲಿ ಕೂದಲಿನ ಜಾಡು ಹಿಡಿದು ತನಿಖೆ

‘ಕಬ್ಬೇಪುರ ಗ್ರಾಮದ ಶಿವಬಸಪ್ಪ ಎಂಬ ರೈತರಿಗೆ ಸೇರಿದ ಸರ್ವೆ ನಂಬರ್‌ 262ರಲ್ಲಿ ಬೆಳೆ ರಕ್ಷಣೆಗಾಗಿ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿತ್ತು. ಜಮೀನಿನತ್ತ ಬಂದಿದ್ದ ಹುಲಿ ವಿದ್ಯುತ್‌ ತಂತಿ ತಗುಲಿ ಮೃತಪಟ್ಟಿತ್ತು. ಜಮೀನಿನ ಬಳಿಯೇ ಹುಲಿ ಕಳೇಬರ ಸಿಕ್ಕಿದರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಶಿವಬಸಪ್ಪ ಅವರ ಮಗ ರೇಚಪ್ಪ ಹಾಗೂ ಇತರ ಐವರಿದ್ದ ತಂಡ ಹುಲಿಯ ಕುತ್ತಿಗೆ ಮತ್ತು ಕಾಲುಗಳಿಗೆ ಕಲ್ಲುಗಳನ್ನು ಕಟ್ಟಿ ಕೆರೆಗೆ ಎಸೆದಿದ್ದಾರೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘15 ದಿನಗಳಿಂದ ತೀವ್ರ ತನಿಖೆ ನಡೆಸುತ್ತಿದ್ದೆವು. ಸರ್ವೆ ನಂಬರ್‌ 262ರಲ್ಲಿರುವ ಜಮೀನಿನಲ್ಲಿ ಹುಲಿಯ ಕೂದಲುಗಳು ಕಂಡು ಬಂದಿದ್ದವು. ಇದರ ಆಧಾರದಲ್ಲಿ ನಮಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಗುರುವಾರ ರೇಚಪ್ಪ ಅವರನ್ನು ಕರೆಸಿ ವಿಚಾರಣೆ ಮಾಡಿದಾಗ, ನಿಜಾಂಶ ಒಪ್ಪಿಕೊಂಡರು. ಆರು ಮಂದಿ ಸೇರಿ ಈ ಕೃತ್ಯ ನಡೆಸಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ. ಉಳಿದ ಐವರನ್ನು ಶೀಘ್ರ ಬಂಧಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT