ಭಾನುವಾರ, ಸೆಪ್ಟೆಂಬರ್ 27, 2020
27 °C
800ರ ಸನಿಹ ಕೋವಿಡ್‌ ಪ್ರಕರಣಗಳು, 500 ದಾಟಿದ ಗುಣಮುಖರಾದವರ ಸಂಖ್ಯೆ

ಚಾಮರಾಜನಗರ: 52 ಮಂದಿಗೆ ಸೋಂಕು, ಒಂದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ನಿಂದಾಗಿ ‌ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದ ಪ್ರಾಣಕಳೆದುಕೊಂಡವರ ಸಂಖ್ಯೆ 11ಕ್ಕೆ ಏರಿದೆ. 

ಭಾನುವಾರ ಇಬ್ಬರು ಮೃತಪಟ್ಟಿದ್ದರೂ, ಜಿಲ್ಲಾಡಳಿತ ವರದಿಯಲ್ಲಿ ಒಬ್ಬರ ಸಾವನ್ನು ಉಲ್ಲೇಖಿಸಿತ್ತು. ಇನ್ನೊಬ್ಬರ ಸಾವನ್ನು ಸೋಮವಾರದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಇವರು ಕೊಳ್ಳೇಗಾಲದ 57 ವರ್ಷದ ಮಹಿಳೆಯಾಗಿದ್ದು (ರೋಗಿ ಸಂಖ್ಯೆ 1,42,674), ಶನಿವಾರ ತೀವ್ರ ಉಸಿರಾಟದ ತೊಂದರೆಯ ಕಾರಣಕ್ಕೆ ಕೊಳ್ಳೇಗಾಲ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ನಂತರ ಕೋವಿಡ್ ಪರೀಕ್ಷೆ ನಡೆಸುವಾಗ ಸೋಂಕು ಇರುವುದು ಪತ್ತೆಯಾಗಿದೆ ಎಂದು ವರದಿ ಹೇಳಿದೆ. 

ಆಗಸ್ಟ್‌ 1ರಂದು ಮೃತಪಟ್ಟ ನಂತರ ಸೋಂಕು ದೃಢಪಟ್ಟ ಯಳಂದೂರು ನಿವಾಸಿಯ (ರೋಗಿ ಸಂಖ್ಯೆ 1,34,876) ಸಾವನ್ನು, ಕೋವಿಡ್‌ಯೇತರ ಸಾವು ಉಲ್ಲೇಖಿಸಲಾಗಿದೆ. ಈ ಹಿಂದೆಯೂ ಒಬ್ಬರು ಕೋವಿಡ್‌ಯೇತರ ಅನಾರೋಗ್ಯದಿಂದ ಮೃತ‍‍‍ಪಟ್ಟಿದ್ದರು.

ಸೋಮವಾರವೂ ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ವರದಿಯಲ್ಲಿ ಒಬ್ಬರನ್ನು ಮಾತ್ರ ಉಲ್ಲೇಖಿಸಲಾಗಿದೆ. ಚಾಮರಾಜನಗರದ 65 ವರ್ಷದ ವ್ಯಕ್ತಿಯೊಬ್ಬರು (ರೋಗಿ ಸಂಖ್ಯೆ 1,40,674) ಆಗಸ್ಟ್‌ 1ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಸರ್ಕಾರದ ಶಿಷ್ಟಾಚಾರದಂತೆ ಪಿಎಫ್‌ಐ ಕಾರ್ಯಕರ್ತರು ನಗರದ ಮುಸ್ಲಿಮರ ಸ್ಮಶಾನದಲ್ಲಿ ನೆರವೇರಿಸಿದ್ದಾರೆ.

ಒಂದೇ ದಿನ ಅರ್ಧಶತಕ

ಭಾನುವಾರ 52 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಇಷ್ಟು ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಇದೇ ಮೊದಲು. ಈ ಹಿಂದೆ 48 ಪ್ರಕರಣ ವರದಿಯಾಗಿದ್ದು ಒಂದು ದಿನದ ಗರಿಷ್ಠ ಲೆಕ್ಕವಾಗಿತ್ತು. 23 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 

ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 797ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 519ಕ್ಕೆ ತಲುಪಿದೆ. 265 ಸಕ್ರಿಯ ಪ್ರಕರಣಗಳಿವೆ. 12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ 366 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. 184 ಆರ್‌ಟಿಪಿಸಿಆರ್‌, 182 ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ 34 ಪ್ರರಕಣಗಳು ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ 18 ಪ್ರಕರಣಗಳು ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ದೃಢಪಟ್ಟಿವೆ. 314 ವರದಿಗಳು ನೆಗೆಟಿವ್‌ ಬಂ‌ದಿವೆ.

ಜಿಲ್ಲೆಯಲ್ಲಿ ಈವರೆಗೆ 23,881 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. 23,071 ವರದಿಗಳು ನೆಗೆಟಿವ್‌ ಬಂದಿದೆ. 

14,981 ಮಂದಿ ಮೇಲೆ ನಿಗಾ

ಸೋಂಕಿತರ 7,049 ಪ್ರಾಥಮಿಕ ಸಂಪರ್ಕಿತರು ಹಾಗೂ 7,932 ದ್ವಿತೀಯ ಸಂಪರ್ಕಿತರನ್ನು ಮನೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ. 

52 ಮಂದಿ ಸೋಂಕಿತರಲ್ಲಿ ಚಾಮರಾಜನಗರ ತಾಲ್ಲೂಕಿನ 14, ಕೊಳ್ಳೆಗಾಲ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ತಲಾ 13, ಯಳಂದೂರು ತಾಲ್ಲೂಕಿನ ಒಂಬತ್ತು ಹಾಗೂ ಹನೂರು ತಾಲ್ಲೂಕಿನ ಮೂವರು ಇದ್ದಾರೆ. 

ಗುಣಮುಖರಾದ 23 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 11, ಕೊಳ್ಳೇಗಾಲ ತಾಲ್ಲೂಕಿನ ಐವರು, ಯಳಂದೂರು ತಾಲ್ಲೂಕಿನ ನಾಲ್ವರು, ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳ ತಲಾ ಒಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು