ಮಂಗಳವಾರ, ನವೆಂಬರ್ 19, 2019
29 °C
ಗುಂಡ್ಲುಪೇಟೆ: ಟೊಮೆಟೊ ಬೆಲೆ ಭಾರಿ ಕುಸಿತ, ಕೆಜಿಗೆ ₹4–₹6, ಈರುಳ್ಳಿ ₹40–₹50

ಕಣ್ಣೀರು ತ‌ರಿಸುತ್ತಿದೆ ಈರುಳ್ಳಿ

Published:
Updated:
Prajavani

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ಇದರ ನಡುವೆಯೇ ಈರುಳ್ಳಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ. ಕೆಜಿಗೆ ₹40ರಿಂದ ₹50ರವರೆಗೂ ಮಾರಾಟವಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂ‌ದಾಗಿ ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಕಂಡಿದೆ. ತಾಲ್ಲೂಕು ಮಾತ್ರವಲ್ಲ ಇಡೀ ಜಿಲ್ಲೆಯಲ್ಲಿ ಈರುಳ್ಳಿ ಗ್ರಾಹಕರ ಜೇಬನ್ನು ಸು‌ಡಲು ಆರಂಭಿಸಿದೆ. 

ತಾಲೂಕಿನಲ್ಲಿ ಮತ್ತು ರಾಜ್ಯದ ಕೆಲವು ಜಿಲ್ಲೆಯಲ್ಲಿ ಹೆಚ್ಚಿನ ರೈತರು ಭಾರಿ ಪ್ರಮಾಣದಲ್ಲಿ ಟೊಮೆಟೊ ಬೆಳೆದಿರುವುದರಿಂದ ಆವಕ ಹೆಚ್ಚಾಗಿರುವುದರಿಂದ ಬೆಲೆ ಕುಸಿತ ಕಂಡಿದೆ.

ತಾಲ್ಲೂಕಿನಲ್ಲಿ ಎರಡು ಎಪಿಎಂಸಿ ಮಾರುಕಟ್ಟೆಗಳಿದ್ದು, ಇಲ್ಲಿಗೆ ಟೊಮೆಟೊ ಹೆಚ್ಚು ಹಾಗೂ ಈರುಳ್ಳಿ ಕಡಿಮೆ ಪ್ರಮಾಣದಲ್ಲಿ ಆವಕವಾಗುತ್ತಿದೆ.

ತಾಲ್ಲೂಕಿನ ತರಕಾರಿ ಬೆಳೆಗಾರರು ತಮಿಳುನಾಡು ಮತ್ತು ಕೇರಳದ ವ್ಯಾಪಾರಿಗಳನ್ನು ಹೆಚ್ಚು ಅವಲಂಬಿತರಾಗಿದ್ದಾರೆ. ಈ ಎರಡು ರಾಜ್ಯದ ವ್ಯಾಪಾರಿಗಳಿಂದ ಈರುಳ್ಳಿಗೆ ಹೆಚ್ಚು ಬೇಡಿಕೆ ಇದೆ. 20 ದಿನಗಳ ಹಿಂದೆ ಈರುಳ್ಳಿ ಕೆಜಿಗೆ ₹15ರಿಂದ ₹20ವರೆಗೆ ಇತ್ತು. ಈಗ ಅದು ₹40ರಿಂದ ₹50ರವರೆಗೆ ಹೆಚ್ಚಿದೆ. ಮಾರುಕಟ್ಟೆ ಬರುವ ಈರುಳ್ಳಿ ಪ್ರಮಾಣ ಕಡಿಮೆಯಾದಷ್ಟೂ ಬೆಲೆ ಹೆಚ್ಚಾಗುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಗುಣಮಟ್ಟಕ್ಕೆ ಅನುಗಣವಾಗಿ ದರ: ತಾಲ್ಲೂಕಿನಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಕೆಜಿಗೆ ₹40ರಿಂದ ₹45ಕ್ಕೆ ಮಾರಾಟವಾದರೆ, ದೊಡ್ಡ ಗಾತ್ರದ ಹಾಗೂ ಹೆಚ್ಚು ಗುಣಮಟ್ಟದ ಈರುಳ್ಳಿ ಬೆಲೆ ₹50ರಿಂದ ₹60ರವರೆಗೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಅಷ್ಟೇನು ಉತ್ತಮ ಗುಣಮಟ್ಟವಿರದ ಈರುಳ್ಳಿ  ₹30ರಿಂದ ₹40ಕ್ಕೆ ಬಿಕರಿಯಾಗುತ್ತಿದೆ.

ಮಹಾರಾಷ್ಟ್ರದ ಭಾಗಗಳಿಂದ ಇಲ್ಲಿನ ಮಾರುಕಟ್ಟೆಗೆ ನೇರವಾಗಿ ಈರುಳ್ಳಿ ಬರುತ್ತದೆ. ತಮಿಳುನಾಡು ಮತ್ತು ಕೇರಳದ ವ್ಯಾಪಾರಿಗಳು ಹೆಚ್ಚಿನ ಬೆಲೆ ಇದ್ದರೂ ಕೊಳ್ಳುವುದಕ್ಕೆ ಆಸಕ್ತಿ ತೋರುತ್ತಿರುವುದರಿಂದ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಇದರಿಂದಾಗಿ ತಾಲ್ಲೂಕಿನ ಗ್ರಾಹಕರಿಗೆ ಹೊಡೆತನೀಡಿದೆ ಎಂದು ವ್ಯಾಪಾರಿಗಳು ಹೇಳಿದರು. 

ಟೊಮೆಟೊ ಯಾರಿಗೂ ಬೇಡ

ಕಳೆದ ತಿಂಗಳು ತಾಲ್ಲೂಕಿನಲ್ಲಿ ಕೆಜಿ ಟೊಮೆಟೊ ಬೆಲೆ ₹15ರಿಂದ ₹20ರವರಗೆ ಇತ್ತು. ಇದೀಗ ₹4ರಿಂದ ₹6ಕ್ಕೆ ಮಾರಾಟವಾಗುತ್ತಿದೆ. ಅದು ಕೂಡ ಉತ್ತಮ ಗುಣಮಟ್ಟದ ಗಾತ್ರದಲ್ಲಿ ದೊಡ್ಡದಾಗಿರುವ ಟೊಮೆಟೊಗಳಿಗೆ ಮಾತ್ರ ಬೇಡಿಕೆ ಇದೆ.

ಬೆಲೆ ಕುಸಿದಿರುವುದರಿಂದ ಅನೇಕ ಟೊಮೆಟೊ ಬೆಳೆಗಾರರು ಕಟಾವು ಮಾಡುವುದನ್ನೇ ನಿಲ್ಲಿಸಿದ್ದಾರೆ.

ಕೊಯ್ದರೆ, ವಾಹನದ ಬಾಡಿಗೆ, ಕೂಲಿ ಸೇರಿದಂತೆ ಅಸಲೂ ಸಿಗುವುದಿಲ್ಲ. ಆದ್ದರಿಂದ ಜಮೀನಿನಲ್ಲೇ ಕೊಳೆಯಲಿ ಎಂಬ ನಿರ್ಧಾರಕ್ಕೆ ಬಹುತೇಕ ರೈತರು ಬಂದಿದ್ದಾರೆ. 

ಕಳೆದ ವಾರ ಹಂಗಳ ಭಾಗದ ಕೆಲ ರೈತರು ಬೆಳೆದಿದ್ದ ಟೊಮೆಟೊ ಬೆಳೆಗಳನ್ನು ಜಾನುವಾರುಗಳನ್ನು ಬಿಟ್ಟು ಮೇಯಿಸಿದ್ದಾರೆ. ಕೆಲವರು ಉಳುಮೆ ಮಾಡಿದ್ದಾರೆ. ಕೆಲವು ರೈತರು ಸಣ್ಣ ಗಾತ್ರದ ಬೇಡಿಕೆ ಇಲ್ಲದ ಟೊಮೆಟೊಗಳನ್ನು ಮಾರುಕಟ್ಟೆಯಲೇ ಎಸೆಯುತ್ತಿದ್ದಾರೆ. 

‘ಕೋಲಾರ ಹಾಗು ಚಿಕ್ಕಬಳ್ಳಾಪುರ ಭಾಗದಿಂದಲೂ ತಾಲ್ಲೂಕಿನ ಮಾರುಕಟ್ಟೆಗಳಿಗೆ ಹೆಚ್ಚಿನ ಟೊಮೆಟೊ ಸರಬರಾಜಾಗುತ್ತಿದೆ. ಜೊತೆಗೆ ನಮ್ಮಲ್ಲೂ ಹೆಚ್ಚಿನವರು ಟೊಮೆಟೊ ಬೆಳೆದಿದ್ದಾರೆ’ ಎಂದು ಹಂಗಳದ ರೈತ ಮಹದೇವಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರತಿಕ್ರಿಯಿಸಿ (+)