ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಬಯಲು ಶೌಚಕ್ಕಿಲ್ಲ ಮುಕ್ತಿ

ದಾಖಲೆಗಷ್ಟೇ ಸೀಮಿತವಾದ ಘೋಷಣೆ: ಹಳ್ಳಿಗಳಲ್ಲಿ ರಸ್ತೆ, ಬಯಲಲ್ಲೇ ಮಲ ವಿಸರ್ಜನೆ
Last Updated 25 ಅಕ್ಟೋಬರ್ 2021, 3:50 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಬಯಲು ಶೌಚಾಲಯ ಮುಕ್ತ ತಾಲ್ಲೂಕು ಎಂಬ ಘೋಷಣೆ ಸರ್ಕಾರಿ ದಾಖಲೆಗಳಿಗಷ್ಟೇ ಸೀಮಿತವಾಗಿದ್ದು, ತಾಲ್ಲೂಕಿನಾದ್ಯಂತ ಅನೇಕ ಹಳ್ಳಿಗಳಲ್ಲಿ ಜನರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ.

ಕೆಲವರು ಮನೆಗಳಲ್ಲಿ ಶೌಚಾಲಯಗಳಿದ್ದರೂ, ಮಲ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಿದ್ದಾರೆ. ತಾಲ್ಲೂಕು ಪಂಚಾಯಿತಿಯು ಸಹ ಜನ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದರೂ ಯಶಸ್ಸು ಸಿಗುತ್ತಿಲ್ಲ.

ನಗರಸಭೆಯ ವ್ಯಾಪ್ತಿಯಲ್ಲೂ ಈ ಸಮಸ್ಯೆ ಇದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಹೆದ್ದಾರಿ, ಗ್ರಾಮಗಳ ಮುಖ್ಯ ರಸ್ತೆ, ಕೃಷಿ ಜಮೀನು, ಪಾಳು ಬಿದ್ದ ಜಮೀನುಗಳೆಲ್ಲ ಜನರಿಗೆ ಬಯಲು ಶೌಚಾಲಯಗಳಾಗಿವೆ.

ಸ್ವಚ್ಛಭಾರತ ಅಭಿಯಾನದ ಅಡಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲು ತಾಲ್ಲೂಕು ಪಂಚಾಯಿತಿ ಆರ್ಥಿಕ ನೆರವು ನೀಡುತ್ತದೆ. ಹಾಗಿದ್ದರೂ, ಕೆಲವು ಕುಟುಂಬಗಳು ಶೌಚಾಲಯ ನಿರ್ಮಿಸಲು ಮುಂದಾಗುತ್ತಿಲ್ಲ.

ಕೆಲವು ಕುಟುಂಬಗಳಿಗೆ ಜಾಗದ ಸಮಸ್ಯೆ ಇದೆ. ಇನ್ನೂ ಕೆಲವರಿಗೆ ಶೌಚಾಲಯ ಅಗತ್ಯವಿಲ್ಲ ಎಂಬ ಮನೋಧೋರಣೆ. ಜಾಗದ ಸಮಸ್ಯೆಗಳಿರುವ ಕುಟುಂಬಗಳಿಗೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿದ್ದರೂ, ಅದನ್ನೂ ಜನರು ಬಳಸುತ್ತಿಲ್ಲ. ಕೆಲವು ಕುಟುಂಬಗಳು ಶೌಚಾಲಯ ನಿರ್ಮಿಸಿದ್ದರೂ, ಅದನ್ನು ಬಳಸುತ್ತಿಲ್ಲ. ಬೇಡದ ವಸ್ತುಗಳನ್ನು ಹಾಕುವ ಕೊಠಡಿಗಳನ್ನಾಗಿ ಪರಿವರ್ತಿಸಿದ್ದಾರೆ.

ಮಹಿಳೆಯರಿಗೆ ಮುಜುಗರ: ‘ಅನೇಕ ಹಳ್ಳಿಗಳಲ್ಲಿ ಜನರು ಅದರಲ್ಲೂ ಮಹಿಳೆಯರು, ಯುವತಿಯರು ಕತ್ತಲಾಗುವುದನ್ನೇ ಕಾಯಬೇಕಾದ ಸ್ಥಿತಿ ಇದೆ. ರಸ್ತೆ ಬದಿಯಲ್ಲಿ, ದೂರದ ಹೊಲಗಳನ್ನು ಅವಲಂಬಿಸಿದ್ದಾರೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ನಮ್ಮ ಗ್ರಾಮ ಬಯಲು ಶೌಚ ಮುಕ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದು ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಶೌಚಾಲಯ ನಿರ್ಮಿಸಿಕೊಂಡವರು, ಬಳಸುವ ಅಭ್ಯಾಸ ಮಾಡಿಕೊಂಡಿಲ್ಲ. ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು. ಅವರ ಮನೋಭಾವ ಬದಲಾಯಿಸಬೇಕು’ ಎಂದು ಯುವತಿ ರಶ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಗ ಇಲ್ಲ, ಶೌಚಾಲಯವೂ ಇಲ್ಲ: ‘ಜಾಗದ ಕೊರತೆಯಿಂದಾಗಿ ಬಹಳಷ್ಟು ಮಂದಿ ಶೌಚಾಲಯ ಕಟ್ಟಿಸಿಕೊಂಡಿಲ್ಲ. ಕಟ್ಟಿಕೊಂಡವರಿಗೆ ನೀರಿನ ವ್ಯವಸ್ಥೆ ಇರುವುದಿಲ್ಲ. ಪರಿಣಾಮ, ಬಳಕೆಯಾಗುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಸಾಮೂಹಿಕ ಅಥವಾ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಅವು ಬಳಸಲಾಗದ ಸ್ಥಿತಿಯಲ್ಲಿವೆ. ಪ್ರತಿಯೊಂದು ಗ್ರಾಮದಲ್ಲೂ ಸಹ ಪಂಚಾಯಿತಿ ವತಿಯಿಂದ ಉಚಿತವಾಗಿ ಶೌಚಾಲಯ ನಿರ್ಮಾಣ ಮಾಡುತ್ತಾರೆ. ನಿತ್ಯ ಮುಂಜಾನೆ ಹಾಗೂ ರಾತ್ರಿ ಹಳ್ಳಿಗಳ ಕಡೆಗೆ ಮುಖ ಮಾಡಿದರೆ ಡಬ್ಬಿ ಹಿಡಿದು ಹೊರಟಿರುವ ಪುರುಷರು, ಮಹಿಳೆಯರು, ಮಕ್ಕಳು ಕಾಣಸಿಗುತ್ತಾರೆ. ಬೆಳಕು ಕಂಡರೆ ವಾಹನಕ್ಕೆ ಎದ್ದು ನಿಂತು ಗೌರವ ಕೊಡುವ ಪದ್ಧತಿ ಮುಂದುವರೆದಿದೆ’ ಸರಗೂರು ಗ್ರಾಮದ ನಾಗರತ್ನ ಹಳ್ಳಿಗಳ ಪರಿಸ್ಥಿತಿ ಬಗ್ಗೆ ವಿವರಿಸಿದರು.

ಅರಿವು ಮೂಡಿಸಲಾಗುತ್ತಿದೆ: ಇಒ

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್‌, ‘ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲೂ ಶೇ 80ರಷ್ಟು ಶೌಚಾಲಯ ನಿರ್ಮಿಸಲಾಗಿದೆ. ಈ ವರ್ಷ 749 ಶೌಚಾಲಯ ನಿರ್ಮಿಸಲು ಸೂಚನೆ ಬಂದಿದೆ. ಕೆಲವರು ಶೌಚಾಲಯವಿದ್ದರೂ ಸಹ ಬಯಲನ್ನೇ ಅವಲಂಬಿಸುತ್ತಾರೆ. ಕೆಲವರ ಮನೆಯಲ್ಲಿ ನಾವೇ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಆದರೂ ಉಪಯೋಗಿಸುತ್ತಿರಲಿಲ್ಲ. ಆ ಕುಟುಂಬಗಳ ಸದಸ್ಯರಿಗೆ ಶೌಚಾಲಯದ ಬಳಕೆ ಬಗ್ಗೆ ಅರಿವು ಮೂಡಿಸಿದೆವು. ನಂತರ ಶೌಚಾಲಯ ಉಪಯೋಗಿಸಲು ಆರಂಭಿಸಿದರು. ನಾವು ಪ್ರತಿಯೊಂದು ಹಳ್ಳಿಗಳಲ್ಲೂ ಮತ್ತೆ ಜಾಗೃತಿ ಮೂಡಿಸುತ್ತೇವೆ’ ಎಂದರು.

--

ನಮ್ಮ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ನಾವು ಕಾವೇರಿ ನದಿಯ ತೀರವನ್ನೇ ಅವಲಂಬಿಸಿದ್ದೇವೆ. ಜಾಗವಿದ್ದರೂ ನಮಗೆ ಸರ್ಕಾರದಿಂದ ನೆರವು ಸಿಕ್ಕಿಲ್ಲ
ಪ್ರಕಾಶ್, ಸರಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT