ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಪರವಾಗಿ ಕಾನೂನು ಹೋರಾಟ: ಕಾಂಗ್ರೆಸ್‌

ಆಮ್ಲಜನಕ ದುರಂತ: ಸರ್ಕಾರದ ವಿರುದ್ಧ ಮುಖಂಡರ ಆಕ್ರೋಶ
Last Updated 29 ಜೂನ್ 2021, 15:50 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2ರಂದು ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಕೊಡಿಸುವುದಕ್ಕಾಗಿ ಪಕ್ಷವು ಅವರ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲಿದೆ ಎಂದು ಕಾಂಗ್ರೆಸ್‌ ಮುಖಂಡ ಎಸ್‌.ಬಾಲರಾಜ್‌ ಅವರು ಮಂಗಳವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಆಮ್ಲಜನಕ‌ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸ್ಥಿತಿ ಗತಿ ಅಧ್ಯಯನ ಮಾಡುವುದಕ್ಕಾಗಿ ಕೆಪಿಸಿಸಿಯು ಜೂನ್‌ 21ರಂದು ನನ್ನ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯ ಸದಸ್ಯರೆಲ್ಲರೂ ಮೂರು ದಿನಗಳ ಕಾಲ ದುರಂತದಲ್ಲಿ ಮೃತಪಟ್ಟ 36 ಮಂದಿಯ ಮನೆಗಳಿಗೆ ಭೇಟಿ ನೀಡಿ, ಎಲ್ಲ ಮಾಹಿತಿಗಳನ್ನು ಕಲೆ ಹಾಕಿ, ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ವರದಿ ನೀಡಿದ್ದೆವು. ಕೆಪಿಸಿಸಿ ವತಿಯಿಂದ ಮೃತರ ಕುಟಂಬಗಳಿಗೆ ಪರಿಹಾರ ನೀಡಬೇಕು ಎಂದು ಕಾರ್ಯಾಧ್ಯಕ್ಷ ಆರ್‌.‌ಧ್ರುವನಾರಾಯಣ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿ ಅವರು ಪಕ್ಷದ ವತಿಯಿಂದ ₹1 ಲಕ್ಷ ಪರಿಹಾರ ನೀಡಿದ್ದಾರೆ’ ಎಂದರು.

‘ರಾಜ್ಯ ಸರ್ಕಾರವು, ಹೈಕೋರ್ಟ್‌ ಸೂಚನೆ ನೀಡಿದ ಬಳಿಕ ಕೇವಲ 24 ಜನರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ನೀಡಿದೆ. ಈ ದುರಂತದಲ್ಲಿ ಇನ್ನೂ ಹಲವರು ಮೃತಪಟ್ಟಿದ್ದಾರೆ. ಅವರನ್ನು ಸಂತ್ರಸ್ತರ ಪಟ್ಟಿಯಲ್ಲಿ ಸರ್ಕಾರ ಸೇರಿಸಿಲ್ಲ. ಅವರಿಗೆ ಮರಣಪ್ರಮಾಣಪತ್ರವನ್ನೂ ಅಧಿಕಾರಿಗಳು ನೀಡಿಲ್ಲ’ ಎಂದು ದೂರಿದರು.

‘ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಕೆಪಿಸಿಸಿಯ ಕಾನೂನು ವಿಭಾಗದ ಮುಖ್ಯಸ್ಥ, ವಕೀಲರಾದ ಪೊನ್ನಣ್ಣ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅನ್ಯಾಯಕ್ಕೆ ಒಳಗಾದ ಸಂತ್ರಸ್ತರ ಪರವಾಗಿ ಕಾನೂನು ಹೋರಾಟ ಮಾಡಲು ಪಕ್ಷ ನಿರ್ಧರಿಸಿದೆ. ಇದಕ್ಕಾಗಿ ಒಂದು ವೇದಿಕೆಯನ್ನು ಸೃಷ್ಟಿಸಿದ್ದೇವೆ. ಪರಿಹಾರ ದೊರಕದ, ಸರ್ಕಾರದಿಂದ ಸ್ಪಂದನೆ ಸಿಗದವರನ್ನು ಈ ವೇದಿಕೆಯಲ್ಲಿ ಒಟ್ಟು ಸೇರಿಸಿಕೊಂಡು ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತದೆ. ಮೇ2 ದುರ್ಘಟನೆಯಲ್ಲಿ ಅನ್ಯಾಯವಾದರವೆಲ್ಲರೂ ನಮ್ಮನ್ನು ಸಂಪರ್ಕಿಸಬಹುದು’ ಎಂದು ಬಾಲರಾಜ್‌ ಅವರು ಹೇಳಿದರು.

‘ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಒಬ್ಬರು ಸದಸ್ಯರಿಗೆ ಸರ್ಕಾರಿ ನೌಕರಿಯನ್ನೂ ಕೊಡಬೇಕು. ಆ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಮಾತನಾಡಿ, ‘ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ. ಕುಟುಂಬಗಳ ಸಂಕಷ್ಟವನ್ನು ಕಂಡು ಪಕ್ಷವು ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಸಮಿತಿ ವಕ್ತಾರ ಕೆರೆಹಳ್ಳಿ ನವೀನ್‌, ಮಾಧ್ಯಮ ಕಾರ್ಯದರ್ಶಿ ಅರುಣ್‌ಕುಮಾರ್‌, ಮುಖಂಡರಾದ ಜವಾದ್‌, ಸೈಯದ್‌ ಮುಸೀಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT