ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಪಡಸಲನತ್ತ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

Last Updated 27 ಡಿಸೆಂಬರ್ 2020, 13:59 IST
ಅಕ್ಷರ ಗಾತ್ರ

ಹನೂರು: ತಮ್ಮ ಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಮಹದೇಶ್ವರ ಬೆಟ್ಟದ ಪಡಸಲನತ್ತ ಗ್ರಾಮದ ಜನರು ಭಾನುವಾರ ಮತದಾನ ಬಹಿಷ್ಕರಿಸಿದರು.

ಗ್ರಾಮದಲ್ಲಿ ಒಂದು ಸದಸ್ಯ ಸ್ಥಾನವಿದ್ದು, 274 ಮತದಾರರಿದ್ದಾರೆ.ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು.

ಗ್ರಾಮದ ನಿವಾಸಿ ಹಲಗತಂಬಡಿ ಎಂಬುವವರು ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಇದನ್ನು ಖಂಡಿಸಿದ್ದ ಗ್ರಾಮಸ್ಥರು ಮತದಾನದಿಂದ ದೂರ ಉಳಿದರು.

ಮತದಾನ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಹೇಳಿದ ತಕ್ಷಣ ಮತಗಟ್ಟೆ ಅಧಿಕಾರಿ ಹನೂರು ತಹಶೀಲ್ದಾರ್‌ ಅವರಿಗೆ ಪತ್ರ ಬರೆದು ತಿಳಿಸಿದ್ದರು.

ತಕ್ಷಣ ನೋಡೆಲ್ ಅಧಿಕಾರಿ ಪ್ರಭುಸ್ವಾಮಿ, ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರು. ಸಂಜೆ 6 ಗಂಟೆಯೊಳಗಾದರೂ ಮತದಾನ ಮಾಡುವಂತೆ ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

‘ಗ್ರಾಮದವರೊಬ್ಬರು ಶನಿವಾರ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಆದರೆ, ಯಾವ ಅಧಿಕಾರಿಗಳು ಬಂದು ನಮ್ಮ ಕಷ್ಟ ಕೇಳಲಿಲ್ಲ. ಇದಕ್ಕೆ ಬೇಸತ್ತು ನಾವು ಸಾಮೂಹಿಕವಾಗಿ ಮತದಾನ ಬಹಿಷ್ಕರಿಸಿದ್ದೇವೆ. ಪೊಲೀಸರು, ಚುನಾವಣಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ಮತದಾನ ಮಾಡುವಂತೆ ಮನವಿ ಮಾಡಿದರು. ಯಾವುದೇ ಕಾರಣಕ್ಕೂ ನಾವು ಮತದಾನ ಮಾಡುವುದಿಲ್ಲ ಎಂದು ಹೇಳಿದ್ದೇವೆ’ ಎಂದು ಗ್ರಾಮದ ನಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಇಂಡಿಗನತ್ತ, ತೇಕಾಣೆ, ತುಳಸಿಕೆರೆ ಹಾಗೂ ಪಡಸಲನತ್ತ ಗ್ರಾಮಗಳಿಗೆ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿ ಹೋಗಿದ್ದರು. ಆದರೆ ಇದುವರೆಗೂ ನಮಗೆ ರಸ್ತೆ ಆಗಿಲ್ಲ. ಅಲ್ಲದೇ, ನಮ್ಮ ಯಾವ ಸಮಸ್ಯೆಗಳಿಗೂ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಇದನ್ನು ಪ್ರತಿಭಟಿಸಿ ಮತದಾನ ಬಹಿಷ್ಕರಿಸಿದ್ದೇವೆ’ ಎಂದು ಅವರು ಹೇಳಿದರು.

ಈ ಬಗ್ಗೆ, ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ತಹಶೀಲ್ದಾರ್ ನಾಗರಾಜು ಅವರು, ‘ಮತದಾನ ಬಹಿಷ್ಕಾರ ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಪೊಲೀಸರು, ನೋಡೆಲ್ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ಹೋಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಗ್ರಾಮಸ್ಥರು ಒಪ್ಪಿಲ್ಲ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬೇರೊಂದು ದಿನ ಚುನಾವಣೆ ನಡೆಸಲು ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT