ಭಾನುವಾರ, ಜನವರಿ 19, 2020
20 °C

ಚಿಕ್ಕಲ್ಲೂರು: ಮಾಂಸಾಹಾರ ಅಡುಗೆ ಸಿದ್ಧಪಡಿಸಿ ಭಕ್ತರ ಸಹಭೋಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಸಮೀಪದ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಸೋಮವಾರ ಬಾಡೂಟದ ಪಂಕ್ತಿಸೇವೆ (ಸಿದ್ಧರ ಸೇವೆ) ಜಿಲ್ಲಾಡಳಿತ, ಪೊಲೀಸರ ಹದ್ದಿನ ಕಣ್ಣಿನ ನಡುವೆಯೇ ಯಾವುದೇ ಆತಂಕವಿಲ್ಲದೇ ಯಶಸ್ವಿಯಾಗಿ ನಡೆಯಿತು. 

ಹರಕೆ ಹೊತ್ತ ಭಕ್ತರು ಗದ್ದಿಗೆಗೆ ಹಾಗೂ ಕಂಡಾಯಗಳಿಗೆ ಮಾಂಸಹಾರದ ಎಡೆ ಹಾಕಿ ಸಹಪಂಕ್ತಿಬೋಜನ ಮಾಡಿದರು.

ಜಾತ್ರೆಯ ನಾಲ್ಕನೇ ದಿನದಂದು ಜರುಗಿದ ಪಂಕ್ತಿಸೇವೆಗೆ ಜಿಲ್ಲೆ ಸೇರಿದಂತೆ ಹೊರಜಿಲ್ಲೆಗಳಿಂದ ಟೆಂಪೊ, ಗೂಡ್ಸ್ ಆಟೊ, ಟ್ರ್ಯಾಕ್ಟರ್‌, ಲಾರಿ, ದ್ವಿಚಕ್ರ ವಾಹನ ಹಾಗೂ ಬಸ್‌ಗಳಲ್ಲಿ ಬಂದ ಭಕ್ತರು ದೇವಸ್ಥಾನದ ಹೊರಭಾಗದಲ್ಲಿ ಬಿಡಾರ ಹೂಡಿದ್ದರು.

ಸೋಮವಾರ ಬೆಳಿಗ್ಗೆ ಮೇಕೆ, ಕೋಳಿಗಳನ್ನು ಕೊಯ್ದು ಪ್ರತಿ ಬಿಡಾರದ ಮುಂದೆ ಪ್ರತಿಷ್ಠಾಪಿಸಿದ್ದ ಕಂಡಾಯಗಳಿಗೆ ಮಾಂಸಹಾರದ ಎಡೆ ಇಟ್ಟು ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು. ಕೆಲ ಭಕ್ತರು ಸಸ್ಯಹಾರದ ಅಡುಗೆ ಮಾಡಿ ಎಡೆ ಇಟ್ಟು ಜಾತ್ರೆಗೆ ಆಗಮಿಸಿದ್ದ ನೆಂಟರು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕವಾಗಿ ಬೋಜನ ಮಾಡಿದರು. ಜಾತ್ರೆಯಲ್ಲಿ ನೂತನವಾಗಿ ದೀಕ್ಷೆ ಪಡೆದ ನೀಲಗಾರರು ಪ್ರತಿ ಬಿಡಾರಗಳಿಗೂ ತೆರಳಿ ಭಿಕ್ಷಾಟನೆ ಮಾಡುವ ಪಂಕ್ತಿಸೇವೆಗೆ ಚಾಲನೆ ನೀಡಿದರು. 

ತಲೆ ತಲಾಂತರಗಳಿಂದಲೂ ನಡೆದು ಕೊಂಡು ಬಂದಿರುವ ಜಾತ್ರೆಯಲ್ಲಿ ಭಕ್ತರು ದೂಳನ್ನು ಲೆಕ್ಕಿಸದೆ, ನೀಲಗಾರ ವಿಧಾನಗಳೊಡನೆ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಾಲ್ಗೊಂಡರು. ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ನಿರಂತರವಾಗಿ ಆಗಮಿಸಿದ್ದರಿಂದ ಕೆಲವು ಕಡೆ ಸಂಚಾರ ದಟ್ಟಣೆ ಉಂಟಾಯಿತು. ದೇವರ ಪೂಜೆಗೆ ಸಹಸ್ರಾರು ಭಕ್ತರು ಏಕಾಏಕಿ ಮುಂದಾದ ಹಿನ್ನೆಲೆಯಲ್ಲಿ ಬಾರಿ ನೂಕುನುಗ್ಗಲು ಉಂಟಾಗಿ, ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು. 

ಪ್ರಾಣಿಬಲಿ ತಡೆಯುವ ಉದ್ದೇಶದಿಂದ  ಜಾತ್ರೆಯ ಸುತ್ತ ಎಂಟು ಕಡೆ ಚೆಕ್ ಪೋಸ್ಟ್ ನಿರ್ಮಿಸಿ ಕುರಿ, ಮೇಕೆ , ಕೋಳಿ ಹಾಗೂ ಮದ್ಯವನ್ನು ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ತಡೆಯಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಇವೆಲ್ಲದರ ನಡುವೆಯೂ ಸಿದ್ದಪ್ಪಾಜಿ ಜಾತ್ರೆಯ ಕೇಂದ್ರಬಿಂದುವಾದ ಪಂಕ್ತಿಸೇವೆ ಯಾವುದೇ ಅಡೆತಡೆಯಿಲ್ಲದೇ ಸಾಂಗವಾಗಿ ನಡೆಯಿತು.

ಕೆಲ ಭಕ್ತರು ಜಾತ್ರೆಯ ಹೊರಗಿನ ದೂರದ ಖಾಸಗಿ ಜಮೀನುಗಳಲ್ಲಿ ಸಿದ್ದಪ್ಪಾಜಿ ತೀರ್ಥ ತೆಗೆದುಕೊಂಡು ಹೋಗಿ ಮೇಕೆಗಳ ಮೇಲೆ ಹಾಕಿ ಅದನ್ನು ಕೊಯ್ದು ಆಹಾರ ತಯಾರಿ ಮಾಡಿ ಎಡೆ ಅರ್ಪಿಸಿದರೆ. ಇನ್ನು ಕೆಲ ಭಕ್ತರು ಮನೆಯಲ್ಲಿ ಮಾಂಸ ಕತ್ತರಿಸಿ ಜಾತ್ರೆಗೆ ತಂದು ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡಿದರು.

ಹೆಚ್ಚು ಭಕ್ತರು: ಪಂಕ್ತಿಸೇವೆಯಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. 

‘ಸಿದ್ದಪ್ಪಾಜಿ ನಮ್ಮ ಮನೆ ದೇವರು. ನಾವು 40 ವರ್ಷಗಳಿಂದಲೂ ಪಂಕ್ತಿಸೇವೆ ಮಾಡುತ್ತಾ ಬಂದಿದ್ದೇವೆ. ಯಾರೋ ಪ್ರಾಣಿಬಲಿ ನಡೆಯುತ್ತಿದೆ ಎಂದು ತಪ್ಪಾಗಿ ಹೇಳಿದ್ದಾರೆ. ಇದನ್ನೇ ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಕಾನೂನು ಪಾಲನೆ ಮಾಡುವ ನೆಪದಲ್ಲಿ ಭಕ್ತರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುವುದು ಸರಿಯಲ್ಲ’ ಎಂದು ಕನಕಪುರದ ಗುರುಮೂರ್ತಿ ಅವರು ಆಕ್ರೋಶ ವ್ಯಕ್ತಪಡಿಸಿದರು. 

ದೇವಾಲಯದಿಂದ ದೂರ

ಸಿದ್ದಪ್ಪಾಜಿ ದೇವಾಲಯದ ಸುತ್ತಮುತ್ತಲಿನ ಆವರಣದಲ್ಲಿ ಪಂಕ್ತಿಸೇವೆ ನಡೆಸುವುದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ತುಂಬಾ ದೂರದಲ್ಲಿ ಜಮೀನುಗಳಲ್ಲಿ ಡೇರೆ ಕಟ್ಟಿಕೊಂಡು ಪ್ರಾಣಿ ಕೊಯ್ದು ಮಾಂಸಾಹಾರ ಸಿದ್ಧಪಡಿಸಿ, ಭೋಜನ ಮಾಡಿದವರಿಗೆ ತೊಂದರೆಯನ್ನೂ ನೀಡಲಿಲ್ಲ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು