ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ | ಪ್ರಚಾರಕ್ಕೆ ಮೈಕ್‌ ಹಿಡಿದ ಅಧಿಕಾರಿಗಳು

ಗ್ರಾಮೀಣ ಪ್ರದೇಶದಲ್ಲಿ ‘ಪರೀಕ್ಷಾವಾಣಿ’ ಬಗ್ಗೆ ಧ್ವನಿವರ್ಧಕದ ಮೂಲಕ ಜಾಗೃತಿ
Last Updated 16 ಮೇ 2020, 18:06 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಮಕ್ಕಳು ಸಿದ್ಧರಾಗಲು ಶಿಕ್ಷಣ ಇಲಾಖೆ ದೂರದರ್ಶನದ ಚಂದನ ವಾಹಿನಿ ಪ್ರಸಾರ ಮಾಡುತ್ತಿರುವ ಪುನರ್‌ಮನನ ಕಾರ್ಯಕ್ರಮ ‘ಪರೀಕ್ಷಾ ವಾಣಿ’ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ಗ್ರಾಮ ಗ್ರಾಮಗಳಿಗೂ ತೆರಳಿ ಪ್ರಚಾರ ಮಾಡುತ್ತಿದ್ದಾರೆ.

ಇಲಾಖೆಯ ವಾಹನಕ್ಕೆ ಧ್ವನಿವರ್ಧಕ ಅಳವಡಿಸಿ, ಗ್ರಾಮೀಣ ಪ್ರದೇಶಗಳಲ್ಲಿ ‘ಪರೀಕ್ಷಾ ವಾಣಿ’ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದ ಜನರಿಗೆ ಈ ಕಾರ್ಯಕ್ರಮದ ಬಗ್ಗೆ ಹಾಗೂ ಪ್ರಸಾರವಾಗುವ ಸಮಯದ ಬಗ್ಗೆ ಅರಿವು ಇಲ್ಲದೇ ಇರುವ ಸಾಧ್ಯತೆ ಇರುತ್ತದೆ. ಅಂತಹವರಿಗೆ ಮಾಹಿತಿ ನೀಡುವ ಪ್ರಯತ್ನವಾಗಿ ಈ ಪ್ರಚಾರ ನಡೆಸಲಾಗುತ್ತಿದೆ.

ತಾಲ್ಲೂಕಿನ ಹಂಗಳ, ಬೇಗೂರು, ತೆರಕಣಾಂಬಿ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ‌ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಅವರ ನೇತೃತ್ವದ ಇಲಾಖೆಯ ತಂಡವು ಈಗಾಗಲೇ ವಾಹನಗಳ ಮೂಲಕ ಪ್ರಚಾರ ನಡೆಸಿದೆ.

ಪಠ್ಯವಾರು ವಿಷಯಗಳ ಪುನರ್‌ಮನನಕ್ಕಾಗಿ ದೂರದರ್ಶನ ಚಂದನ ವಾಹಿನಿಯಲ್ಲಿ ಕನ್ನಡ, ಇಂಗ್ಲಿಷ್‌, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳ ಸಿದ್ಧ ಪಾಠಗಳನ್ನು ಏಪ್ರಿಲ್‌ 29ರಿಂದ ಆರಂಭಿಸಲಾಗಿದ್ದು, ಇದೇ 28ರವರೆಗೂ ಪ್ರಸಾರವಾಗಲಿದೆ.ಪ್ರತಿದಿನ ಮಧ್ಯಾಹ್ನ 3ರಿಂದ 4.30ರವರೆಗೆ ಕನ್ನಡ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದೇ ಪಾಠಗಳನ್ನು ಮರುದಿನ ಬೆಳಿಗ್ಗೆ 6ರಿಂದ 7.30ರವರೆಗೆ ಮರುಪ್ರಸಾರ ಮಾಡಲಾಗುತ್ತಿದೆ.

ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೂ ಮೇ 9ರಿಂದ ಪುನರ್‌ಮನನ ತರಗತಿಗಳು ಆರಂಭವಾಗಿದ್ದು, ಜೂನ್‌ 7ರವರೆಗೆ ಪ್ರಸಾರವಾಗಲಿವೆ.ಪ್ರತಿದಿನ ಬೆಳಿಗ್ಗೆ 9:30ರಿಂದ 11 ಗಂಟೆವರೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಿಂದಿ (ತೃತೀಯ ಭಾಷೆ), ಸಂಸ್ಕೃತ (ಪ್ರಥಮ ಭಾಷೆ), ಉರ್ದು (ಪ್ರಥಮ ಭಾಷೆ) ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ.

‘ಈ ಕಾರ್ಯಕ್ರಮವನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪ್ರತಿದಿನ ವೀಕ್ಷಿಸಿ, ಪಾಠಗಳನ್ನು ಪುನರ್‌ಮನನ ಮಾಡಿಕೊಂಡು ಪರೀಕ್ಷೆಗೆ ಸಿದ್ದರಾಗಬೇಕಿದೆ. ಪ್ರತಿದಿನ ಪಠ್ಯ ವಿಷಯಗಳ ಬಹುಮುಖ್ಯ ಅಂಶಗಳನ್ನು ಬರೆದು ಅಭ್ಯಾಸ ಮಾಡಿಕೊಳ್ಳಬೇಕು. ಪಠ್ಯ ವಿಷಯಗಳಲ್ಲಿ ಸಂದೇಹಗಳಿದ್ದರೆ ತಮ್ಮ ಶಾಲಾ ಶಿಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು’ ಎಂದು ಹೇಳುತ್ತಾರೆ ಅಧಿಕಾರಿಗಳು.

‘ಓದು, ಬರವಣಿಗೆಗೆ ಒತ್ತು ನೀಡಿ’
‘ನಮ್ಮ ಕಚೇರಿ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸ್ನೇಹ ಸಹಾಯವಾಣಿ ಕಾರ್ಯಕ್ರಮದ ಮೂಲಕ ವಿಷಯವಾರು ಆಯ್ದ ನುರಿತ ಶಿಕ್ಷಕರ ಮೊಬೈಲ್ ಸಂಖ್ಯೆಯನ್ನು ಶಾಲಾ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಓದು ಮತ್ತು ಬರವಣಿಗೆ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ಪೋಷಕರು ಕೂಡ ತಮ್ಮ ಮಕ್ಕಳು ಅಧ್ಯಯನ ಮಾಡುವಂತೆ ತಿಳಿ ಹೇಳಬೇಕು. ಇದರಿಂದ ಮಾತ್ರ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT