ಬುಧವಾರ, ಜೂನ್ 16, 2021
23 °C
ಪರಿಶೀಲಿಸುವ ಭರವಸೆ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ

ಚಾಮರಾಜನಗರ | ಕೋವಿಡ್‌ ಕೇರ್‌ ಕೇಂದ್ರದ ಆಹಾರದ ಬಗ್ಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಹೊರ ವಲಯದ ಯಡಪುರದಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತೆರೆಯಲಾಗಿರುವ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಪೂರೈಸಲಾಗುತ್ತಿರುವ ಆಹಾರದ ಗುಣಮಟ್ಟ ಉತ್ತಮವಾಗಿಲ್ಲ ಎಂದು ಕೆಲವು ಸೋಂಕಿತರು ದೂರಿದ್ದಾರೆ. 

ಕೇಂದ್ರದಲ್ಲಿ ಉಳಿದ ಎಲ್ಲ ವ್ಯವಸ್ಥೆ ಚೆನ್ನಾಗಿದ್ದರೂ, ಒದಗಿಸುತ್ತಿರುವ ಆಹಾರ ಚೆನ್ನಾಗಿಲ್ಲ. ಹೊಟ್ಟೆಗೆ ಸೇರುತ್ತಿಲ್ಲ, ಚಪಾತಿ ಒಣಗಿರುತ್ತದೆ ಎಂಬುದು ಅವರ ದೂರು. ಮಧುಮೇಹ ರೋಗಿಗಳು ಕೂಡ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೂ ಎಲ್ಲರಂತೆ ಸಿಹಿಯಾದ ಗಂಜಿ, ಹಾಲು ಒದಗಿಸಲಾಗುತ್ತಿದೆ ಎಂದೂ ದೂರಿದ್ದಾರೆ. 

ಅನ್ನ, ಸಾಂಬಾರು, ಪಲ್ಯ, ಮಜ್ಜಿಗೆ ಎಲ್ಲವನ್ನೂ ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿ ನೀಡಲಾಗುತ್ತಿದೆ. ಜಿಲ್ಲಾಡಳಿತವೇ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಿದೆ. ಹಾಗಿರುವಾಗ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಆಹಾರ ನೀಡುವುದು ಎಷ್ಟು ಸರಿ? ಪರಿಸರ ಸ್ನೇಹಿ ವಸ್ತುಗಳು ಲಭ್ಯವಿರುವಾಗ, ಅದರಲ್ಲಿ ಆಹಾರ ಕೊಟ್ಟರೆ ಅನುಕೂಲ ಎಂದು ಸೋಂಕಿತರೊಬ್ಬರು ಹೇಳಿದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಗುಣಮಟ್ಟದ ಆಹಾರವನ್ನೇ ಪೂರೈಸಲು ಆದ್ಯತೆ ನೀಡಲಾಗುತ್ತಿದೆ. ಕಳಪೆ ಆಹಾರದ ಬಗ್ಗೆ ದೂರು ಬಂದಿಲ್ಲ. ತಕ್ಷಣ ಪರಿಶೀಲಿಸುತ್ತೇವೆ. ಪ್ಲಾಸ್ಟಿಕ್‌ ಕವರ್‌ನಲ್ಲಿ ಆಹಾರ ಕೊಡಬಾರದು ಎಂದು ಸೂಚನೆ ನೀಡಲಾಗಿದೆ. ಪ್ಲೇಟ್‌ನಲ್ಲಿ ಎಲ್ಲ ಆಹಾರವನ್ನು ಹಾಕಿ ಕೊಡಬೇಕು ಅಥವಾ ನೇರವಾಗಿ ಬಡಿಸಬೇಕು ಎಂದು ಸೂಚಿಸಿದ್ದೇವೆ’ ಎಂದು ಹೇಳಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು