ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಸ್‌ ಇಲ್ಲದೇ ರೋಗಿಗಳು, ಜನರ ಪ್ರಯಾಸ

ಯಡಬೆಟ್ಟದ ಹೊಸ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ, ಬಾಡಿಗೆ ವಾಹನಗಳ ಮೊರೆ ಹೋದ ಜನ
Last Updated 25 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಹೊರ ವಲಯ ಯಡಬೆಟ್ಟದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ 450 ಹಾಸಿಗೆ ಸಾಮರ್ಥ್ಯದ ಬೋಧನಾ ಆಸ್ಪತ್ರೆಯಲ್ಲಿ ಸೋಮವಾರದಿಂದ ಆರೋಗ್ಯ ಸೇವೆಗಳು ಆರಂಭವಾಗಿದ್ದು, ಸೂಕ್ತ ಸಾರಿಗೆ ಸೌಲಭ್ಯ ಇಲ್ಲದೆ ರೋಗಿಗಳು ಹಾಗೂ ಸಾರ್ವಜನಿಕರು ಪರದಾಡಬೇಕಾಯಿತು.

ಹೊಸ ಆಸ್ಪತ್ರೆಯು ನಗರದಿಂದ ಏಳು ಕಿ.ಮೀ ದೂರದಲ್ಲಿದೆ. ಗುಂಡ್ಗುಪೇಟೆಗೆ ಹೋಗುವ ರಾಜ್ಯ ಹೆದ್ದಾರಿಯ ಯಡಪುರ ಕ್ರಾಸ್‌ನಿಂದ ಆಸ್ಪತ್ರೆಗೆ ಮತ್ತೆ ಎರಡು ಕಿ.ಮೀ ಸಾಗಬೇಕು.

ಸೋಮವಾರ ಮೊದಲ ದಿನವಾಗಿದ್ದರಿಂದ ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಗೆ ಬಂದ ಹೊರರೋಗಿಗಳನ್ನು ವೈದ್ಯರು ಹಾಗೂ ಸಿಬ್ಬಂದಿ ಹೊಸ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು. ಬಸ್‌ ಸೌಲಭ್ಯ ಇಲ್ಲದೇ ಇದ್ದುದರಿಂದ ಜನರು ಆಟೊ ಬಾಡಿಗೆ ಮಾಡಿಕೊಂಡು ಯಡಬೆಟ್ಟಕ್ಕೆ ತೆರಳಿದರು. ಆಟೊಗೆ ಹೆಚ್ಚು ಹಣ ಕೊಡಬೇಕು ಎಂಬ ಕಾರಣಕ್ಕೆ ಇನ್ನೂ ಕೆಲವರು ಯಡಪುರ ಕ್ರಾಸ್‌ವರೆಗೆ ಗುಂಡ್ಲುಪೇಟೆಗೆ ಹೋಗುವ ಬಸ್‌ನಲ್ಲಿ ತೆರಳಿ ಅಲ್ಲಿಂದ ಆಟೊದಲ್ಲಿ ಇಲ್ಲವೇ ನಡೆದುಕೊಂಡು ಆಸ್ಪತ್ರೆಗೆ ಹೋದರು.

ಬಿಸಿಲು ಪ್ರಖರವಾಗಿದ್ದುದರಿಂದ ಹಿರಿಯರು ಹಾಗೂ ಮಹಿಳೆಯರು ನಡೆದಾಡಲು ಸಾಧ್ಯವಾಗದೆ, ಆಟೊಗಳ ಮೊರೆ ಹೋದರು.

ಬಸ್‌ ವ್ಯವಸ್ಥೆ ಕಲ್ಪಿಸಿ:‘ಮಗಳ ಮೂಗಿನಲ್ಲಿ ನೋವು ಇತ್ತು. ವೈದ್ಯರಿಗೆ ತೋರಿಸಬೇಕಾಗಿತ್ತು. ಜಿಲ್ಲಾಸ್ಪತ್ರೆಯ ವೈದ್ಯರು ಇಲ್ಲಿದ್ದಾರೆ ಎಂದು ಗೊತ್ತಾಯಿತು. ಬಸ್‌ ಇರಲಿಲ್ಲ. ಹಾಗಾಗಿ, ಬಾಡಿಗೆ ರಿಕ್ಷಾದಲ್ಲಿ ಬಂದೆ. ₹150 ಬಾಡಿಗೆ ಹೇಳಿದರು. ಚರ್ಚೆ ಮಾಡಿ ಕೊನೆಗೆ ₹100 ಕೊಟ್ಟೆ’ ಎಂದು ಯಳಂದೂರು ತಾಲ್ಲೂಕಿನ ಕೊಮಾರನಪುರದ ನಾರಾಯಣ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ಆಸ್ಪತ್ರೆ ಚೆನ್ನಾಗಿದೆ. ಆದರೆ, ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಇಲ್ಲಿಗೆ ಬಂದು ಹೋಗುವುದೇ ಕಷ್ಟ. ಇವತ್ತು ನಗರದಿಂದ ಬರುವುದಕ್ಕೆ ₹100 ಖರ್ಚಾಯಿತು. ವಾಪಸ್‌ ನಗರಕ್ಕೆ ಹೋಗಬೇಕು. ಬಸ್‌ ಇಲ್ಲ. ಆಟೊದಲ್ಲೇ ಹೋಗಬೇಕು. ಇಲ್ಲಿಂದ ಅಲ್ಲಿವರೆಗೆ ನಡೆದುಕೊಂಡು ಹೋಗುವುದಕ್ಕೂ ಕಷ್ಟ. ಹಾಗಾಗಿ, ಶೀಘ್ರದಲ್ಲಿ ಬಸ್‌ ಸೇವೆ ಕಲ್ಪಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಡಿ.ಎಂ.ಸಂಜೀವ್‌ ಹಾಗೂ ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ಅವರು, ‘ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಜನರಿಗೆ ಅನನುಕೂಲವಾಗುವುದು ನಿಜ. ನಾವು ಈಗಾಗಲೇ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರನಾಧಿಕಾರಿ ಅವರಿಗೆ ಬಸ್‌ಗಳನ್ನು ಹಾಕುವಂತೆ ಲಿಖಿತವಾಗಿ ಮನವಿ ಮಾಡಿದ್ದೇವೆ. ಶೀಘ್ರದಲ್ಲಿ ಅವರು ಬಸ್‌ ಹಾಕಲಿದ್ದಾರೆ’ ಎಂದರು.

ಆಟೊಗಳಿಗೆ ಸುಗ್ಗಿ: ಬಸ್‌ಗಳು ಇಲ್ಲದಿರುವುದರಿಂದ ಬಾಡಿಗೆ ಆಟೊ ರಿಕ್ಷಾಗಳ ಮಾಲೀಕರು ಹಾಗೂ ಚಾಲಕರಿಗೆ ಉತ್ತಮ ಸಂಪಾದನೆಯಾಯಿತು. ಆಸ್ಪತ್ರೆ ಎದುರುಗಡೆ ಆಸ್ಪತ್ರೆ ಉದ್ಘಾಟನೆಗೂ ಮುನ್ನವೇ ಆಟೊ ನಿಲ್ದಾಣ ಎಂಬ ಫಲಕ ಬಿದ್ದಿತ್ತು. ಸೋಮವಾರ 10ಕ್ಕೂ ಹೆಚ್ಚು ಆಟೊಗಳು ಸಾಲಾಗಿ ನಿಂತಿದ್ದವು.

ಗಂಭೀರ ಆರೋಗ್ಯ ಕಾಯಿಲೆ ಹೊಂದಿರುವವರು ನಗರದಿಂದ ಆಟೊ ಮಾಡಿಕೊಂಡು ಆಸ್ಪತ್ರೆಗೆ ಬಂದರೆ, ಉಳಿದವರು ಯಡಪುರ ಕ್ರಾಸ್‌ವರೆಗೂ ಬಸ್‌ನಲ್ಲಿ ಬಂದು, ಅಲ್ಲಿಂದ ಆಟೊದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದುದು ಕಂಡು ಬಂತು. ಚಾಲಕರು ನಗರದಿಂದ ₹100ರಿಂದ ₹150ರವರೆಗೂ ಬಾಡಿಗೆ ಹೇಳುತ್ತಿದ್ದರು. ಯಡಪುರ ಕ್ರಾಸ್‌ನಿಂದ ₹25ರಿಂದ ₹40ರವರೆಗೂ ಬಾಡಿಗೆ ಹೇಳುತ್ತಿದ್ದರು.

ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೂ ಕಷ್ಟ

ಸಾರ್ವಜನಿಕರು ಮಾತ್ರವಲ್ಲದೇ ಆಸ್ಪತ್ರೆಯ ಸಿಬ್ಬಂದಿ, ಅದರಲ್ಲೂ ಮಹಿಳಾ ಸಿಬ್ಬಂದಿಗೂ ಬಸ್‌ ಸೌಲಭ್ಯ ಇಲ್ಲದಿದ್ದರೆ ಹೊಸ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗುವುದು ಕಷ್ಟವಾಗಲಿದೆ.

ಈಗ ಜಿಲ್ಲಾಸ್ಪತ್ರೆಯಲ್ಲಿ 280 ನರ್ಸ್‌ಗಳು, 200ರಷ್ಟು ಡಿ ಗ್ರೂಪ್, ಭದ್ರತಾ ಸಿಬ್ಬಂದಿ ಇದ್ದಾರೆ. ಈ ಪೈಕಿ 150 ನರ್ಸ್‌ಗಳು, 100ಕ್ಕೂ ಹೆಚ್ಚು ಡಿ ಗ್ರೂಪ್‌ ಹಾಗೂ ಭದ್ರತಾ ಸಿಬ್ಬಂದಿ ಹೊಸ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಬೆಳಿಗ್ಗೆ 8ರಿಂದ ಕರ್ತವ್ಯದ ಅವಧಿ ಆರಂಭವಾಗುತ್ತದೆ. ರಾತ್ರಿ ಪಾಳಿಯಲ್ಲೂ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಪುರುಷ ಸಿಬ್ಬಂದಿ ದ್ವಿಚಕ್ರ ವಾಹನ ಹೊಂದಿದ್ದು, ಆಸ್ಪತ್ರೆಗೆ ಹೋಗುವುದಕ್ಕೆ ಸಾರಿಗೆ ವ್ಯವಸ್ಥೆ ಅವಲಂಬಿಸಬೇಕಿಲ್ಲ. ಆದರೆ, ಮಹಿಳಾಸಿಬ್ಬಂದಿ ಸಾರಿಗೆ ವ್ಯವಸ್ಥೆಯನ್ನೇಅವಲಂಬಿಸಬೇಕಿದೆ.

‘ಬೆಳಿಗ್ಗೆ 7 ಗಂಟೆಯಿಂದಲೇ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ರಾತ್ರಿ ತೆರಳುವುದಕ್ಕೂ ಬಸ್‌ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಸಿಬ್ಬಂದಿ.

‘ಎರಡು ದಿನದಲ್ಲಿ ಬಸ್‌ ಸೌಲಭ್ಯ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ., ‘ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯಿಂದ ನಮಗೆ ಮನವಿ ಬಂದಿದೆ. ಎರಡ್ಮೂರು ದಿನಗಳಲ್ಲಿ ಬಸ್‌ ಸೇವೆ ಒದಗಿಸುತ್ತೇವೆ. ಅದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಂಡಿದ್ದೇವೆ. ನಗರದಿಂದ ‌ಪ್ರತಿ ಗಂಟೆಗೆ ಒಂದರಂತೆ ನಗರ ಸಾರಿಗೆ ಬಸ್‌ಗಳನ್ನು ಹಾಕುತ್ತೇವೆ’ ಎಂದು ಹೇಳಿದರು.

‘ನಮ್ಮಲ್ಲಿ ಐದು ನಗರ ಸಾರಿಗೆ ಬಸ್‌ಗಳಿವೆ. ಅವುಗಳು ಯಡಪುರಕ್ಕೆ ಸಂಚರಿಸಲಿವೆ. ಟಿಕೆಟ್‌ ದರವನ್ನು ಇನ್ನೂ ನಿಗದಿ ಪಡಿಸಿಲ್ಲ. ಒಂದೆರಡು ದಿನಗಳಲ್ಲಿ ನಿಗದಿ ಪಡಿಸಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಸ್‌ ವ್ಯವಸ್ಥೆಗೆ ಕ್ರಮ: ಸಚಿವ

ಯಡಬೆಟ್ಟದಲ್ಲಿ ನಿರ್ಮಾಣಗೊಂಡಿರುವ 450 ಹಾಸಿಗೆ ಸಾಮರ್ಥ್ಯದ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಗೆ, ನಗರದಿಂದ ಜನರು ಹೋಗಿ ಬರಲು ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ‘ಆಸ್ಪತ್ರೆಗೆ ತುರ್ತಾಗಿ ಬಸ್‌ಗಳ ಸೇವೆ ಕಲ್ಪಿಸುವಂತೆ ಸಾರಿಗೆ ಸಚಿವರೊಂದಿಗೆ ಮಾತನಾಡಲಾಗಿದೆ. ಪತ್ರ ಕೂಡ ಬರೆಯಲಾಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT