ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ; ಪಿಡಿಒ ಪತ್ನಿ ಸಾವು–ಕೊಲೆ ಶಂಕೆ

ಕೊಳ್ಳೇಗಾಲ: ವರದಕ್ಷಿಣೆ ಕಿರುಕುಳ– ತಂದೆಯಿಂದ ಪೊಲೀಸರಿಗೆ ದೂರು, ಪಿಡಿಒ ಬಂಧನ
Last Updated 15 ಮಾರ್ಚ್ 2022, 16:09 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿಯ ಅಭಿವೃದ್ಧಿಅಧಿಕಾರಿ (ಪಿಡಿಒ) ಆನಂದ ಶ್ಯಾಮ ಕಾಂಬ್ಳೆ ಅವರ ಪತ್ನಿ ವಿದ್ಯಾಶ್ರೀ ಎಂಬುವವರ ಮೃತದೇಹವು ದಂಪತಿ ವಾಸವಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಕಂಡು ಬಂದಿದೆ.

’ಆನಂದ ಅವರು ಮಗಳನ್ನು ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆ‘ ಎಂದು ವಿದ್ಯಾಶ್ರೀ ತಂದೆ ಚಿದಾನಂದ ವಿಠಲ ಕಾಂಬ್ಳೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಪಿಡಿಒ ಆನಂದ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆನಂದ ಶ್ಯಾಮ ಕಾಂಬ್ಳೆ ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ತೀರ್ಥ ಗ್ರಾಮದವರು. ಇವರ ಪತ್ನಿ ವಿದ್ಯಾಶ್ರೀ (23) ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಬಾಳ ಗ್ರಾಮದವರು. ನಗರದ ಬಸ್ತೀಪುರ ಬಡಾವಣೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. 2019ರಲ್ಲಿ ಮದುವೆಯಾಗಿದ್ದ ಈ ದಂಪತಿಗೆ ಒಂಬತ್ತು ತಿಂಗಳ ಹೆಣ್ಣು ಮಗು ಇದೆ.

ವರದಕ್ಷಿಣೆ ಕಿರುಕುಳ, ಶೀಲದ ಬಗ್ಗೆ ಶಂಕೆ: ಆನಂದ ಶ್ಯಾಮ ಕಾಂಬ್ಳೆ ಅವರು ಮದ್ಯಪಾನ ಮಾಡಿ ವಿದ್ಯಶ್ರೀ ಅವರೊಂದಿಗೆ ಜಗಳವಾಡುತ್ತಿದ್ದರು. ತವರು ಮನೆಯಿಂದ ವರದಕ್ಷಿಣೆ ತರುವಂತೆಯೂ ಪೀಡಿಸುತ್ತಿದ್ದರು. ವಿದ್ಯಾಶ್ರೀ ಅವರ ಶೀಲದ ಬಗ್ಗೆ ಶಂಕೆಯನ್ನೂ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ.

‘ಮಂಗಳವಾರ ಮುಂಜಾವು 3 ಗಂಟೆ ಸುಮಾರಿಗೆ ಆನಂದ ಅವರು ವಿದ್ಯಾಶ್ರೀ ತಂದೆ ಚಿದಾನಂದ ಅವರಿಗೆ ಕರೆ ಮಾಡಿ, ‘ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶವವನ್ನು ಗ್ರಾಮಕ್ಕೆ ತರುತ್ತೇನೆ’ ಎಂದು ಹೇಳಿದ್ದರು. ಆಗ ತಂದೆ ಬೇಡ, ತಾವೇ ಅಲ್ಲಿಗೆ ಬರುವುದಾಗಿ ಹೇಳಿ ಊರಿನಿಂದ ಹೊರಟಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚಿದಾನಂದ ಅವರು ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್‌ ಸಿಬ್ಬಂದಿ ಮನೆಗೆ ಭೇಟಿ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ನೇಣು ಬಿಗಿದ ರೀತಿಯಲ್ಲಿ ಶವ ಇತ್ತು. ಮಧ್ಯಾಹ್ನ 12 ಗಂಟೆಗೆ ಚಿದಾನಂದ ಅವರು ನಗರಕ್ಕೆ ತಲುಪಿದ ನಂತರ ಮೃತದೇಹವನ್ನು ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

‘ಮಹಿಳೆಯ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆನಂದ ಶ್ಯಾಮ ಕಾಂಬ್ಳೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‘ ಪಟ್ಟಣ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಚೇತನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳಕ್ಕೆ ಡಿವೈಎಸ್‌ಪಿ ನಾಗರಾಜು, ತಹಶೀಲ್ದಾರ್ ಮಂಜುಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT