ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿಗೆ ಅಂಬೇಡ್ಕರ್‌ ಹೆಸರು: ಹೆಚ್ಚಿದ ಕೂಗು

ವಿವಿ ಸ್ಥಾಪನೆ ಆದೇಶದಲ್ಲಿ ಸಂವಿಧಾನ ಶಿಲ್ಪಿ ಹೆಸರು ಕೈಬಿಟ್ಟಿರುವುದಕ್ಕೆ ಆಕ್ಷೇಪ
Last Updated 30 ಮಾರ್ಚ್ 2023, 5:04 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಹೊರವಲಯದ ಯಡಪುರದಲ್ಲಿ ಉದ್ಘಾಟನೆಗೊಂಡಿರುವ ಜಿಲ್ಲೆಯ ಹೊಸ ವಿಶ್ವವಿದ್ಯಾಲಯಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹೆಸರು ಇಡಬೇಕು ಎಂಬ ಕೂಗು ಕೇಳಿ ಬಂದಿದೆ.

ಮೈಸೂರು ವಿವಿಯ ಅಧೀನದಲ್ಲಿದ್ದ ಸ್ನಾತಕೋತ್ತರ ಕೇಂದ್ರಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ಹೆಸರು ಇಡಲಾಗಿತ್ತು. ಅದೇ ಹೆಸರನ್ನು ಹೊಸ ವಿವಿಗೂ ಇಡಬೇಕಿತ್ತು. ಉನ್ನತ ಶಿಕ್ಷಣ ಇಲಾಖೆ ಹೊಸ ವಿವಿ ಸ್ಥಾಪನೆ ಮಾಡುವಾಗ ಹೊರಡಿಸಿದ ಆದೇಶದಲ್ಲಿ ಅಂಬೇಡ್ಕರ್‌ ಹೆಸರು ಉಳಿಸದೇ ಇದ್ದುದಕ್ಕೆ ಸಾಹಿತಿಗಳು, ದಲಿತ ಸಮುದಾದಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಆಗಿರುವ ತಪ್ಪನ್ನು ತಿದ್ದಿ, ವಿವಿಗೆ ಡಾ.ಬಿ.ಆರ್.ಅಂಬೇಡ್ಕರ್‌ ಹೆಸರನ್ನು ಇಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ‌.

ಜಿಲ್ಲೆಯ ಮಕ್ಕಳಿಗೆ ಇಲ್ಲಿಯೇ ಸ್ನಾತಕೋತ್ತರ ಪದವಿ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 2010ರಲ್ಲಿ ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರವನ್ನು ನಗರದಲ್ಲಿ ಸ್ಥಾಪಿಸಲಾಗಿತ್ತು.

ರೇಷ್ಮೆ ಇಲಾಖೆಯ ಕಟ್ಟಡದಲ್ಲಿ ಮೂರು ಕೋರ್ಸ್‌ಗಳು ಹಾಗೂ 90 ಮಕ್ಕಳೊಂದಿಗೆ ಕೇಂದ್ರ ಆರಂಭವಾಗಿತ್ತು. ನಂತರ ₹20 ಕೋಟಿ ವೆಚ್ಚದಲ್ಲಿ ಯಡಪುರದಲ್ಲಿ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿತ್ತು. 2017ರ ಡಿಸೆಂಬರ್‌ 30ರಂದು ಉದ್ಘಾಟಿಸಲಾಗಿತ್ತು.

ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾದಾಗಲೇ, ಅದಕ್ಕೆ ಅಂಬೇಡ್ಕರ್‌ ಅವರ ಹೆಸರು ಇಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಜನ ಪ್ರತಿನಿಧಿತಿಗಳು, ಪ್ರಗತಿಪರ ಸಂಘಟನೆಗಳು ಅಂಬೇಡ್ಕರ್‌ ಹೆಸರು ಇಡುವುದಕ್ಕೆ ಪರವಾಗಿದ್ದರು.

2015ರ ಮೈಸೂರು ಸಿಂಡಿಕೇಟ್‌ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆಗ ಪ್ರೊ.ರಂಗಪ್ಪ ಕುಲಪತಿ ಆಗಿದ್ದರು. ಆ ತೀರ್ಮಾನದಂತೆ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ ಎಂದು ಹೆಸರಿಡಲಾಗಿತ್ತು.

‘ಹೊಸ ವಿವಿ ಘೋಷಣೆ ಮಾಡುವಾಗ ಸರ್ಕಾರ ಅಂಬೇಡ್ಕರ್‌ ಹೆಸರನ್ನು ಉಳಿಸಿಕೊಳ್ಳಬೇಕಿತ್ತು. ಆದರೆ, ಅದನ್ನು ಕೈಬಿಟ್ಟು ಸುವರ್ಣಗಂಗೋತ್ರಿ ಎಂಬುದನ್ನು ಉಳಿಸಿಕೊಂಡಿದೆ. ಎರಡು ದಿನಗಳ ಹಿಂದೆ ಅನಾವರಣಗೊಂಡ ಶಿಲಾಫಲಕದಲ್ಲಿ ಸುವರ್ಣ ಗಂಗೋತ್ರಿ ಎಂಬ ಉಲ್ಲೇಖ ಇದೆ. ಅದು ಅಧಿಕೃತವಾಗಿ ಇಟ್ಟ ಹೆಸರಲ್ಲ’ ಎಂದು ಸಾಹಿತಿ ಸೋಮಶೇಖರ ಬಿಸಲವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇರೆ ಬೇರೆ ಜಿಲ್ಲೆಗಳಲ್ಲಿ ವಿವಿ ಸ್ಥಾಪನೆ ಮಾಡುವಾಗ ಆ ಜಿಲ್ಲೆಯ ಹೆಸರನ್ನೇ ಸರ್ಕಾರ ಉಲ್ಲೇಖಿಸಿದೆ. ಹಿಂದೆ ಇದ್ದ ಹೆಸರುಗಳನ್ನು ಗಮನಿಸಿಲ್ಲ ಎಂದು ಕಾಣುತ್ತದೆ. ಅದರ ಬಗ್ಗೆ ಗಮನ ಹರಿಸಬೇಕಿತ್ತು. ಆಗಿರುವ ತಪ್ಪನ್ನು ಸರಿಪಡಿಸಿಕೊಂಡು, ನಮ್ಮ ಹೊಸ ವಿವಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ವಿವಿ ಎಂದು ಹೆಸರು ಇಡಬೇಕು’ ಎಂದು ಅವರು ಒತ್ತಾಯಿಸಿದರು.

‘ಸರ್ಕಾರದ ತೀರ್ಮಾನ ಅಗತ್ಯ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿವಿ ಕುಲಪತಿ ಡಾ.ಎಂ.ಆರ್‌.ಗಂಗಾಧರ್‌, ‘ಅಂಬೇಡ್ಕರ್‌ ಹೆಸರು ಇಡಬೇಕು ಎಂಬ ಒತ್ತಾಯದ ಬಗ್ಗೆ ಗಮನಕ್ಕೆ ಬಂದಿದೆ. ಜಿಲ್ಲಾವಾರು ವಿವಿ ಸ್ಥಾಪಿಸುವಾಗ ಆಯಾ ಜಿಲ್ಲೆಯ ಹೆಸರಿನಿಂದ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಮರುನಾಮಕಣ ಮಾಡುವುದಕ್ಕೆ ಅವಕಾಶ ಇದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ’ ಎಂದರು.

ಹೋರಾಟದ ಎಚ್ಚರಿಕೆ

ಈ ಸಂಬಂಧ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿರುವ ಸೋಮಶೇಖರ ಬಿಸಲವಾಡಿ ಅವರು, ‘ಈಗಾಗಲೇ ಬಹಳಷ್ಟು ವಿಶ್ವವಿದ್ಯಾಲಯಗಳು ಮಹಾನ್ ವ್ಯಕ್ತಿಗಳು ಮತ್ತು ಸಾಧಕರ ಹೆಸರಿನಲ್ಲಿ ಸ್ಥಾಪನೆಯಾಗಿವೆ. ಅದರಂತೆ ಚಾಮರಾಜನಗರ ವಿಶ್ವವಿದ್ಯಾನಿಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರು ನಾಮಕರಣ ಮಾಡಬೇಕು. ಉನ್ನತ ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಬೇಕು. ಸತತ ಏಳು ವರ್ಷಗಳಿಂದಲೂ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಎಂದೇ ಎಲ್ಲ ದಾಖಲೆಗಳಲ್ಲಿಯೂ ನಮೂದಾಗಿದೆ’ ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ, ‘ಚುನಾವಣೆ ವೇಳೆಯಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಮಾಡುವುದು ಬೇಡ. ನಾವು ನ್ಯಾಯಯುತವಾಗಿ ಸರ್ಕಾರದಲ್ಲಿ ಮನವಿ ಮಾಡುತ್ತೇವೆ. ನೂತನ ವಿವಿಗೆ ಅಂಬೇಡ್ಕರ್ ಹೆಸರನ್ನು ಇಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದರು.

ಜನ ಹಿತಾಶಕ್ತಿ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಜಿಲ್ಲಾ ಗೌರವಾಧ್ಯಕ್ಷ ಈಶ್ವರ, ಮುಖಂಡರಾದ ಕುದೇರು ರೇವಣ್ಣ, ಬಂಗಾರಸ್ವಾಮಿ ಇದ್ದರು.

ಅಂಬೇಡ್ಕರ್‌ ಅವರ ಹೆಸರು ಇಟ್ಟರೆ ನಮಗೂ ಖುಷಿ. ಈ ಸಂಬಂಧ ಜನಪ್ರತಿನಿಧಿಗಳು, ಸಂಘಟನೆಗಳ ಸಹಕಾರ ಪಡೆದು ಕ್ರಮವಹಿಸಲಾಗುವುದು
- ಡಾ.ಎಂ.ಆರ್‌.ಗಂಗಾಧರ್‌, ವಿವಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT