ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಧಪೂಜೆ; ಮಾರುಕಟ್ಟೆಯಲ್ಲಿ ಜನ ಜಂಗುಳಿ

ಹೂವುಗಳ ಬೆಲೆ ಗಗನಕ್ಕೆ, ಕುಂಬಳಕಾಯಿ, ನಿಂಬೆ ಹಣ್ಣಿಗೆ ಬೇಡಿಕೆ, ಹಬ್ಬದ ಖರೀದಿ ಜೋರು
Last Updated 4 ಅಕ್ಟೋಬರ್ 2022, 6:16 IST
ಅಕ್ಷರ ಗಾತ್ರ

ಚಾಮರಾಜನಗರ: ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ಆಚರಿಸಲು ಜಿಲ್ಲೆಯಾದ್ಯಂತ ಜನರು ಸಜ್ಜುಗೊಂಡಿದ್ದು, ಪೂಜೆಗೆ ಬೇಕಾದ ಸುವಸ್ತುಗಳ ಖರೀದಿಯಲ್ಲಿ ಸೋಮವಾರ ತೊಡಗಿದ್ದರು.

ನಗರ, ಪಟ್ಟಣ ಪ್ರದೇಶಗಳ ಜನರು ಮಾತ್ರವಲ್ಲದೆ, ಗ್ರಾಮೀಣ ಭಾಗದ ಜನರು ಕೂಡ ತಾಲ್ಲೂಕು ಕೇಂದ್ರಗಳು ಹಾಗೂ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ ಹಬ್ಬದ ಆಚರಣೆಗೆ ಬೇಕಾದ ಹೂವು, ಹಣ್ಣು, ಬಾಳೆ ಕಂದು, ತರಕಾರಿಗಳು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿ ಬಿದ್ದರು.

ಆಯುಧ ಪೂಜೆಯಂದು ಆಯುಧಗಳಿಗೆ ಮಾತ್ರವಲ್ಲದೇ ವಾಹನಗಳು, ಯಂತ್ರೋಪಕರಣಗಳಿಗೆ, ಕೃಷಿ ಉಪಕರಣಗಳಿಗೂ ಪೂಜೆ ಸಲ್ಲಿಸುವ ಸಂಪ್ರದಾಯ ಇರುವುದರಿಂದ ಜನರು ಹೆಚ್ಚು ಹೂವುಗಳ ಖರೀದಿಯಲ್ಲಿ ತೊಡಗಿದರು. ನಿಂಬೆಹಣ್ಣು, ಬೂದು ಕುಂಬಳಕಾಯಿ, ಬಾಳೆ ಕಂದುಗಳಿಗೂ ಬೇಡಿಕೆ ಹೆಚ್ಚಿತ್ತು.

ಹೂವು ದುಬಾರಿ: ಆಯುಧ, ವಿಜಯ ದಶಮಿ ದಿನಗಳಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚು. ಹಾಗಾಗಿ, ಬೆಲೆಯೂ ಗಗನಕ್ಕೇರಿದೆ.

ನಗರಕ್ಕೆ ಸಮೀಪದ ಚೆನ್ನೀಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲೇ ಹೂವು ದುಬಾರಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಅದಕ್ಕಿಂತಲೂ ಹೆಚ್ಚಿನ ಬೆಲೆ ಇದೆ.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರಕ್ಕೆ ಕೆಜಿಗೆ ₹800ರಿಂದ ₹1,200ರವರೆಗೆ ಇತ್ತು. ಹೊರಗಡೆ ₹2,000 ಹೇಳುತ್ತಿದ್ದರು.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಾಕಡ, ಮಲ್ಲಿಗೆ ಮೊಗ್ಗಿಗೆ ಕೆಜಿಗೆ ₹600 ಇತ್ತು. ಸೇವಂತಿಗೆಗೆ ₹300 ಇತ್ತು. ಚೆಂಡು ಹೂವನ್ನು ಕೆಜಿಎಗೆ ‌₹50ರಿಂದ ₹100ರವರೆಗೆ ಮಾರುತ್ತಿದ್ದರು. ಸುಗಂಧರಾಜ ಹೂವಿಗೆ ₹400 ಇತ್ತು.

ಹೊರಗಡೆ ಚೆಂಡು ಹೂವಿನ ಮಾಲೆ ಒಂದು ಮಾರಿಗೆ ₹100ರಿಂದ ₹200ರವರೆಗೂ ಹೇಳುತ್ತಿದ್ದರು. ಸೇವಂತಿಗೆಗೂ ಅಷ್ಟೇ ಬೆಲೆ ಇದೆ.

ನಿಂಬೆಹಣ್ಣಿನ ಬೆಲೆ ಗಾತ್ರಕ್ಕೆ ತಕ್ಕಂತೆ ₹5ರಿಂದ ₹8ರವರೆಗೆ ಇದೆ. ಬಾಳೆ ಕಂದು, ಮಾವಿನಸೊಪ್ಪು, ಕಬ್ಬಿನ ಸೋಗೆ ಕಟ್ಟು ₹20ರಿಂದ ₹30ಕ್ಕೆ ಸಿಗುತ್ತಿದೆ.ಆಯುಧಪೂಜೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬೂದು ಕುಂಬಳಕಾಯಿ ಕೆಜಿಗೆ ₹30 ಇದೆ. ಗಾತ್ರದಲ್ಲಿ ಚಿಕ್ಕದಿರುವ ಕುಂಬಳಕಾಯಿಯನ್ನು ₹20–₹30ಕ್ಕೆ ವ್ಯಾಪಾರಿಗಳು ಕೊಡುತ್ತಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಹಾಪ್‌ಕಾಮ್ಸ್‌ನಲ್ಲಿ ಮೂಸಂಬಿ ₹60, ಕಿತ್ತಳೆ ₹60, ಸೇಬು ₹100, ಏಲಕ್ಕಿ ಬಾಳೆ ₹60–₹70, ಪಚ್ಚೆ ಬಾಳೆ ಕೆಜಿಗೆ ₹30 ಇದೆ.

ತರಕಾರಿಗಳ ಪೈಕಿ ಟೊಮೆಟೊ ಕೆಜಿಗೆ ₹40 ಆಗಿದೆ. ಬೀನ್ಸ್‌ ಬೆಲೆ ಕುಸಿದಿದ್ದು ₹60ಕ್ಕೆ ತಲುಪಿದೆ. ಕ್ಯಾರೆಟ್‌ ಬೆಲೆಯೂ ಸ್ಥಿರವಾಗಿದೆ.

ಪ್ಲಾಸ್ಟಿಕ್‌ ಹಾರಗಳ ಭರಾಟೆ: ಪ್ಲಾಸ್ಟಿಕ್‌ ಹೂವಿನ ಹಾರಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಅಲ್ಲಲ್ಲಿ ಕಂಡು ಬಂದರು. ವಾಹನಗಳನ್ನು ಅಲಂಕರಿಸುವುದಕ್ಕಾಗಿ ಜನರು ಪ್ಲಾಸ್ಟಿಕ್‌ ಹೂವುಗಳ ಹಾರಗಳಿಗೆ ಮೊರೆ ಹೋದರು.

ಜನ ಸಂದಣಿ, ಸಂಚಾರ ದಟ್ಟಣೆ

ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದರಿಂದ ಜಿಲ್ಲಾ ಕೇಂದ್ರದಲ್ಲಿ ಸೋಮವಾರ ಜನರ ಓಡಾಟ ಹೆಚ್ಚಿತ್ತು.

ಅದರಲ್ಲೂ ದೊಡ್ಡಂಗಡಿ, ಚಿಕ್ಕಂಗಡಿ ಬೀದಿಗಳು, ರಥದ ಬೀದಿ, ಹಳೆ ಮಾರುಕಟ್ಟೆ ರಸ್ತೆ, ಮಾರಿಗುಡಿ ರಸ್ತೆಗಳಲ್ಲಿ ಜನರ, ವಾಹನಗಳ ಸಂಚಾರ ಹೆಚ್ಚಿತ್ತು.

ವ್ಯಾಪಾರಿಗಳು ರಸ್ತೆಗಳ ಬದಿಯಲ್ಲೇ ಬೂದುಕುಂಬಳಕಾಯಿ, ನಿಂಬೆ ಹಣ್ಣು, ಬಾಳೆಕಂದು, ಹೂವು ಸೇರಿದಂತೆ ಇ‌ನ್ನಿತರ ವಸ್ತುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ತಳ್ಳುಗಾಡಿ ವ್ಯಾಪಾರಿಗಳು ಕೂಡ ಬಾಳೆ ಹಣ್ಣು, ಬೂದು ಕುಂಬಳಕಾಯಿ, ಬಾಳೆ ಹಣ್ಣು, ನಿಂಬೆ ಹಣ್ಣುಗಳನ್ನು ಗಾಡಿಯಲ್ಲಿಟ್ಟು ವ್ಯಾಪಾರದಲ್ಲಿ ತೊಡಗಿದ್ದರು.

ಇದರಿಂದಾಗಿ ಈ ರಸ್ತೆಗಳಲ್ಲಿ ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಮನೆ ಸ್ವಚ್ಛ, ಪೂಜೆಗೆ ಸಿದ್ಧತೆ

ಆಯುಧ ಪೂಜೆಗಾಗಿ ಜನರು ಸೋಮವಾರ ತಮ್ಮ ಮನೆ, ವಾಹನಗಳು, ಯಂತ್ರೋಪಕರಣಗಳ ಸ್ವಚ್ಛತೆಯಲ್ಲಿ ತೊಡಗಿದ್ದರು.

ಜಿಲ್ಲಾಡಳಿತ ಭವನದಲ್ಲಿ ಎಲ್ಲ ಇಲಾಖೆಗಳ ಸಿಬ್ಬಂದಿ ತಮ್ಮ ಕಚೇರಿಗಳನ್ನು ಬಾಳೆಕಂದು ಹೂವಿನಿಂದ ಅಲಂಕರಿಸಿದ್ದರು. ಮಂಗಳವಾರ ರಜಾ ದಿನವಾಗಿರುವುದರಿಂದ ಸೋಮವಾರವೇ ಆಯುಧ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT