ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಕಾರ್ಡ್‌ ತಿದ್ದುಪಡಿಗೆ ಹರಸಾಹಸ

ತಾಲ್ಲೂಕು ಕಚೇರಿ, ಬ್ಯಾಂಕ್‌ಗಳ ಮುಂದೆ ಬೆಳಿಗ್ಗೆಯಿಂದಲೇ ಸರತಿ ಸಾಲು
Last Updated 27 ಜುಲೈ 2021, 16:23 IST
ಅಕ್ಷರ ಗಾತ್ರ

ಚಾಮರಾಜನಗರ: ಹೊಸ ಆಧಾರ್‌ ಕಾರ್ಡ್‌ ಮಾಡಿಸುವುದು ಹಾಗೂ ಅದರಲ್ಲಿರುವ ವಿವರಗಳ ತಿದ್ದುಪಡಿಗಾಗಿ ಜಿಲ್ಲೆಯಲ್ಲಿ ಜನ ಸಾಮಾನ್ಯರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಧಾರ್‌ ಸೇವೆ ನೀಡುವ (ಹೊಸ ಕಾರ್ಡ್‌ ಮಾಡಿಸುವ, ತಿದ್ದುಪಡಿ ಮಾಡುವ) ಕೇಂದ್ರಗಳ ಮುಂದೆ ಜನರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬರುತ್ತಿದೆ. ಲಾಕ್‌ಡೌನ್‌ ನಿರ್ಬಂಧಗಳನ್ನು ಪೂರ್ಣವಾಗಿ ಸಡಿಲಿಕೆ ಮಾಡಿದ ನಂತರ ಜನರು ಆಧಾರ್‌ ಕೇಂದ್ರಗಳತ್ತ ದಾಂಗುಡಿ ಇಡುತ್ತಿದ್ದಾರೆ.

ನಾಡ ಕಚೇರಿ, ತಾಲ್ಲೂಕು ಕಚೇರಿ, ಕೆಲವು ಬ್ಯಾಂಕುಗಳು, ಅಂಚೆ ಕಚೇರಿಗಳಲ್ಲಿ ಆಧಾರ್‌ ತಿದ್ದುಪಡಿ ಮಾಡಲಾಗುತ್ತಿದೆ. ಜನರು ಬೆಳಿಗ್ಗೆ ಆರು ಗಂಟೆಯ ಹೊತ್ತಿಗೇ ಈ ಕೇಂದ್ರಗಳ ಮುಂದೆ ದಾಖಲೆಗಳನ್ನು ಹಿಡಿದುಕೊಂಡು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ನಾಡ ಕಚೇರಿಗಳಲ್ಲಿ ಸರಿಯಾಗಿ ಸೇವೆ ಸಿಗುತ್ತಿಲ್ಲವಾದ್ದರಿಂದ ಗ್ರಾಮೀಣ ಭಾಗದ ಜನರು ತಾಲ್ಲೂಕು ಕಚೇರಿಗೆ ಬರುತ್ತಿದ್ದಾರೆ. ಇವರಲ್ಲಿ ಹೊಸ ಆಧಾರ್‌ ಕಾರ್ಡ್‌ ಮಾಡಿಸುವವರ ಸಂಖ್ಯೆ ಕಡಿಮೆ ಇದೆ. ಹೆಚ್ಚಿನವರೆಲ್ಲರೂ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್‌ ಸಂಖ್ಯೆಗಳ ತಿದ್ದುಪಡಿಗಾಗಿ ಬರುತ್ತಿದ್ದಾರೆ.

ಸರ್ಕಾರದ ನೇರ ವರ್ಗಾವಣೆ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ಆಧಾರ್‌ ಸಂಖ್ಯೆ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ದೂರವಾಣಿ ಸಂಖ್ಯೆ, ಹೆಸರಿನಲ್ಲಿ ಸಣ್ಣ ತಪ್ಪು ಇದ್ದರೂ ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಹಾಗಾಗಿ, ಆಧಾರ್‌ನಲ್ಲಿ ತಪ್ಪಾಗಿರುವ ವಿವರಗಳನ್ನು ತಿದ್ದುಪಡಿ ಮಾಡುವುದು ಅವರಿಗೆ ಅನಿವಾರ್ಯವಾಗಿದೆ.

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಪ್ರತಿ ದಿನ ಬೆಳಿಗ್ಗೆ 5.30ಕ್ಕೆ ಜನರು ಬಂದು ಕಾದು ಕುಳಿತಿರುತ್ತಾರೆ. ಏಳು ಗಂಟೆಯ ಹೊತ್ತಿಗೆ ಸರತಿ ಸಾಲು ದೊಡ್ಡದಾಗಿರುತ್ತದೆ. ದಿನಕ್ಕೆ 40ರಿಂದ 50 ಜನರಿಗೆ ಮಾತ್ರ ಸೇವೆ ಒದಗಿಸಲಾಗುತ್ತಿದೆ. ಹಾಗಾಗಿ, ಕಚೇರಿ ಸಿಬ್ಬಂದಿ ಮೊದಲು ಬಂದವರಿಗೆ ಟೋಕನ್‌ ನೀಡುತ್ತಿದ್ದಾರೆ. ಉಳಿದವರನ್ನು ಮರು ದಿನ ಬರುವಂತೆ ಸೂಚಿಸುತ್ತಿದ್ದಾರೆ.

‘ಆಧಾರ್ ತಿದ್ದುಪಡಿ ಮಾಡಿಸಬೇಕಾಗಿತ್ತು, ಎರಡು ದಿನಗಳಿಂದ ಬರುತ್ತಿದ್ದೇನೆ. ಇಲ್ಲಿ ಜನ ಜಾಸ್ತಿರುವುದರಿಂದ ಒಂದೇ ದಿನದಲ್ಲಿ ಕೆಲಸ ಆಗುತ್ತಿಲ್ಲ’ ಎಂದು ತಾಲ್ಲೂಕಿನ ಮಲ್ಲೇದೇವರಹಳ್ಳಿಯಿಂದ ಬಂದಿದ್ದ ಮಹದೇವಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‌‘ಆಧಾರ್‌ಗೆ ದೂರವಾಣಿ ಸಂಖ್ಯೆ ಜೋಡಿಸಬೇಕಾಗಿತ್ತು. ಅದಕ್ಕಾಗಿ ಬೆಳಿಗ್ಗೆ ಆರು ಗಂಟೆಗೆ ಬಂದು ಕಾಯುತ್ತಿದ್ದೇನೆ’ ಎಂದು ಕಾಗಲವಾಡಿಯಿಂದ ಬಂದಿದ್ದ ವೃದ್ಧೆ ಗುರುಮಲ್ಲಮ್ಮ ಅವರು ತಿಳಿಸಿದರು.

ಸಿಬ್ಬಂದಿ ಎಡವಟ್ಟು, ಜನರಿಗೆ ಸಂಕಟ: ಬಹುತೇಕ ಸಂದರ್ಭಗಳಲ್ಲಿ ಆಧಾರ್‌ ಸೇವೆ ನೀಡುವ ಸಿಬ್ಬಂದಿ ಮಾಡುವ ಯಡವಟ್ಟಿನಿಂದ ಜನರಿಗೆ ತೊಂದರೆಯಾಗುತ್ತಿದೆ. ಆರಂಭದಲ್ಲಿ ಆಧಾರ್‌ಗೆ ಅರ್ಜಿ ಸಲ್ಲಿಸುವಾಗ ಕಂಪ್ಯೂಟರ್‌ ಆಪರೇಟರ್‌ಗಳು ತರಾತುರಿಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ತಪ್ಪಾಗಿ ನಮೂದಿಸಿಸುತ್ತಾರೆ. ಆಗಿರುವ ತಪ್ಪನ್ನು ಸರಿಪಡಿಸಲು ಜನರು ಮತ್ತೆ ಅಲೆದಾಡಬೇಕಾಗಿದೆ. ಗ್ರಾಮೀಣ ಭಾಗಗಳ ಆಧಾರ್‌ ಕಾರ್ಡ್‌ದಾರರಲ್ಲಿ ಬಹುತೇಕರು ಇದೇ ಕಾರಣಕ್ಕೆ ತಿದ್ದುಪಡಿಗಾಗಿ ಆಧಾರ್‌ ಸೇವಾ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.

‘ಗ್ರಾ.ಪಂ.ಗಳಲ್ಲೂ ಶೀಘ್ರ ಆಧಾರ್‌ ಸೇವೆ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ ಅವರು, ‘ನಾಡ ಕಚೇರಿ, ತಾಲ್ಲೂಕು ಕಚೇರಿ, ಬ್ಯಾಂಕುಗಳಲ್ಲಿ, ಅಂಚೆ ಕಚೇರಿಗಳಲ್ಲಿ ಆಧಾರ್‌ ಸೇವೆ ಒದಗಿಸಲಾಗುತ್ತಿದೆ. ಅನ್‌ಲಾಕ್‌ ಆದಾಗಿನಿಂದ ಆಧಾರ್‌ ಮಾಡಿಸಲು ಹಾಗೂ ತಿದ್ದುಪಡಿ ಮಾಡಲು ಬರುವವರ ಸಂಖ್ಯೆ ಹೆಚ್ಚಾಗಿದೆ. ತಾಲ್ಲೂಕು ಕಚೇರಿಯಲ್ಲಿ ನಾವು ಟೋಕನ್‌ ವ್ಯವಸ್ಥೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲೂ ಆಧಾರ್‌ ಸೇವೆ ಶೀಘ್ರದಲ್ಲಿ ಆರಂಭವಾಗಲಿದೆ. ಪಂಚಾಯಿತಿ ಮಟ್ಟದಲ್ಲೂ ಆಧಾರ್‌ ಕೇಂದ್ರಗಳು ಆರಂಭವಾದರೆ ಜನರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT