ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯದಲ್ಲಿ ವಾಹನ ನಿಲ್ಲಿಸಿ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿರುವ ಜನ

ಅರಣ್ಯದಲ್ಲಿ ವಾಹನ ನಿಲ್ಲಿಸಬಾರದು ಎಂದರೂ ಕೇಳದ ಜನ, ಕೂದಲೆಳೆ ಅಂತರದಲ್ಲಿ ವ್ಯಕ್ತಿ ‌ಪಾರು
Last Updated 19 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರು ನಿಯಮ ಉಲ್ಲಂಘಿಸಿ ವಾಹನಗಳಿಂದ ಇಳಿಯುತ್ತಿರುವುದರಿಂದ ಕಾಡು ಪ್ರಾಣಿಗಳ ದಾಳಿಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಮದ್ದೂರು ವಲಯದಲ್ಲಿ ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಇಂತಹ ಪ್ರಕರಣಗಳ ಪಟ್ಟಿಗೆ ಹೊಸ ಸೇರ್ಪಡೆ.

ಪಟ್ಟಣದಿಂದ ಊಟಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಕೇರಳದ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 766 ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುತ್ತವೆ.

ಅರಣ್ಯ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಬಾರದು, ವಾಹನದಿಂದ ಕೆಳಕ್ಕೆ ಇಳಿಯಬಾರದು. ಪ್ರಾಣಿಗಳ ಫೋಟೊ ತೆಗೆಯಬಾರದು, ಆಹಾರ ವಸ್ತುಗಳನ್ನು ನೀಡಬಾರದು, ಪ್ಲಾಸ್ಟಿಕ್‌ ಇನ್ನಿತರ ತ್ಯಾಜ್ಯ ಎಸೆಯಬಾರದು ಎಂದೆಲ್ಲ ನಿಯಮಗಳು ಇವೆ. ಅರಣ್ಯ ಇಲಾಖೆ ಅಲ್ಲಲ್ಲಿ ಫಲಕಗಳನ್ನೂ ಅಳವಡಿಸಿದೆ. ಹಾಗಿದ್ದರೂ ವಾಹನ ಸವಾರರು ಕಾಡಿನ ಮಧ್ಯೆ ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸುವುದು ಪೋಟೊ ತೆಗೆಯುವುದು, ಪ್ರಾಣಿಗಳನ್ನು ಕಂಡಾಗ ಕೂಗಾಡುವುದು, ಅವುಗಳಿಗೆ ಆಹಾರ ಕೊಡುವುದು ಎಲ್ಲವನ್ನೂ ಮಾಡುತ್ತಾರೆ. ಹೀಗಾಗಿ ಆನೆ ಸೇರಿದಂತೆ ಪ್ರಾಣಿಗಳು ದಾಳಿಗೆ ಯತ್ನಿಸುವ ಪ್ರಕರಣಗಳು ನಡೆಯುತ್ತಿರುತ್ತವೆ.

‘ಪ್ರಾಣಿಗಳನ್ನು ಕಂಡಾಗ ಬೆಳಕು ಮಾಡಿ ಪೋಟೊ ತೆಗೆಯುವುದು, ತಿಂಡಿಗಳನ್ನು ನೀಡುವುದು, ಅವುಗಳನ್ನು ರೇಗಿಸುವುದು, ಹತ್ತಿರ ಹೋಗುವುದನ್ನು ಮಾಡುತ್ತಾರೆ. ಇದರಿಂದಾಗಿ ಆನೆ ಕಾಡೆಮ್ಮೆಯಂತಹ ಪ್ರಾಣಿಗಳು ದಾಳಿಗೆ ಯತ್ನಿಸುತ್ತವೆ. ಕೆಲವೊಂದು ಸ್ಥಳದಲ್ಲಿ ಉದಾಹರಣೆಗೆ ಹಿಂದೆ ಮರಿ ಸತ್ತಿದ್ದರೆ ಅಥವಾ ಮನುಷ್ಯರಿಂದ ಕಿರಿಕಿರಿ ಆಗಿದ್ದರೆ ಅಂತಹ ಸ್ಥಳದಲ್ಲಿ ಆನೆಗಳು ಮನುಷ್ಯರನ್ನು ಕಂಡಾಗ ದಾಳಿ ಮಾಡಲು ಮುಂದಾಗುತ್ತವೆ. ಎಲ್ಲ ಕಡೆಯೂ ಒಂದೇ ರೀತಿಯಲ್ಲಿ ಅವು ವರ್ತಿಸುವುದಿಲ್ಲ. ಕಾಡಿನ ಮಧ್ಯ ಮೇಯುತ್ತಿರುವಾಗ ಪೋಟೊ ತೆಗೆದರೆ ಅವು ಸುಮ್ಮನಿರುತ್ತವೆ. ಆದರೆ, ಇದಕ್ಕೂ ಮೊದಲು ರಸ್ತೆಯಲ್ಲಿ ಪ್ರಯಾಣಿಕರು ತೊಂದರೆ ಮಾಡಿದ್ದರೆ, ಅಂತಹ ಸ್ಥಳದಲ್ಲಿ ಆನೆ ಇದ್ದು, ಜನರು ಬಂದಾಗ ಇಂತಹ ಘಟನೆಗಳು ನಡೆಯುತ್ತದೆ’ ಎಂದು ವನ್ಯಜೀವಿ ಛಾಯಾಗ್ರಹಕ ಕೃಪಾಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಆನೆ ಸುಮಾರು 400ರಿಂದ 600 ಚದರ ಕಿ.ಮೀ ಸಂಚರಿಸುತ್ತದೆ. ಆ ಸಂದರ್ಭದಲ್ಲಿ ಕೆಲ ಆನೆಗಳು ರಸ್ತೆ, ಜಮೀನು, ಕಾಡಂಚಿನ ಗ್ರಾಮಗಳಿಗೆ ಬಂದು ಘಾಸಿಗೊಂಡಿರುತ್ತವೆ. ಅವುಗಳು ಮನುಷ್ಯರನ್ನು ಕಂಡಾಗ ದಾಳಿಗೆ ಮುಂದಾಗುತ್ತವೆ’ ಎಂದು ಅವರು ವಿವರಿಸಿದರು.

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಕಳೆದ ವರ್ಷ ಹುಲಿಯೊಂದು ಬೈಕ್ ಸವಾರರರ ಮೇಲೆ ದಾಳಿಗೆ ಯತ್ನಿಸಿತ್ತು. ಈ ವಿಡಿಯೊ ಕೂಡ ವೈರಲ್‌ ಆಗಿತ್ತು.

ಪಾಠ ಕಲಿಯುತ್ತಿಲ್ಲ

‘ಅರಣ್ಯ ಇಲಾಖೆಯವರು ಹೆದ್ದಾರಿಯುದ್ದಕ್ಕೂ, ವಾಹನ ನಿಲ್ಲಿಸಬಾರದು, ಪ್ರಾಣಿಗಳ ಪೋಟೊ ತೆಗೆಯಬಾರದು, ತಿಂಡಿಗಳನ್ನು ನೀಡಬೇಡಿ ಮುಂತಾದ ನಾಮಫಲಕಗಳನ್ನು ಹಾಕಿದ್ದಾರೆ. ಹಾಗಿದ್ದರೂ, ಜನರು ಪಾಠ ಕಲಿತಿಲ್ಲ’ ಎಂದು ಎಂದು ವನ್ಯ ಛಾಯಾಗ್ರಹಕ ವಿಷ್ಣು ಅವರು ಬೇಸರ ವ್ಯಕ್ತಪಡಿಸಿದರು.

‘ಮಾರ್ಚ್‌ನಿಂದ ಜೂನ್‌ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚಿರುತ್ತವೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹೆಚ್ಚು ಗಸ್ತು ತಿರುಗಿ ವಾಹನ ನಿಲ್ಲಿಸುವುದನ್ನು ತಡೆದು ದಂಡ ವಿಧಿಸಬೇಕು’ ಎಂಬುದು ಪರಿಸರ ಪ್ರೇಮುಗಳ ಒತ್ತಾಯ.

‘ಜನರು ಚೆಕ್‌ಪೋಸ್ಟ್‌ ಪ್ರವೇಶಿಸುವ ಸಂದರ್ಭದಲ್ಲೇ, ಕಾಡಿನಲ್ಲಿ ವಾಹನ ನಿಲ್ಲಿಸಬೇಡಿ ಎಂದು ಹೇಳುತ್ತೇವೆ. ಎಷ್ಟು ಹೇಳಿದರೂ ಕೆಲವರು ಕೇಳುವುದಿಲ್ಲ. ಜನ ಬದಲಾಗದೆ ಏನು ಮಾಡಲು ಸಾಧ್ಯವಿಲ್ಲ’ ಎಂದು ಬಂಡೀಪುರದ ಎಸಿಎಫ್ ಕೆ.ಪರಮೇಶ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT