ಮಂಗಳವಾರ, ಜೂನ್ 28, 2022
20 °C
ಗಡಿ ಪ್ರದೇಶ ಹೊಗೆನಕಲ್‌, ಗಡಿಭಾಗ ತಾಳವಾಡಿಗೆ ಭೇಟಿ ನೀಡಿದ್ದ ಸಿದ್ದಲಿಂಗಯ್ಯ

ಗಡಿಯಲ್ಲಿ ಕನ್ನಡ ನೆಲ, ನುಡಿ ರಕ್ಷಣೆಗೆ ಧಾವಿಸಿದ ಕವಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಶುಕ್ರವಾರ ನಿಧನರಾದ ಕವಿ ಸಿದ್ದಲಿಂಗಯ್ಯ ಅವರು ಜಿಲ್ಲೆಗೂ ಹಲವು ಬಾರಿ ಭೇಟಿ ನೀಡಿದ್ದಾರೆ. ಗಡಿ ಭಾಗದಲ್ಲಿರುವ ಕನ್ನಡ ನೆಲ ಹಾಗೂ ಭಾಷೆಯ ರಕ್ಷಣೆಗಾಗಿ ಪ್ರಯತ್ನಿಸಿದ್ದಾರೆ. ಅವರೊಂದಿಗಿನ ಒಡನಾಟವನ್ನು ಜಿಲ್ಲೆಯ ಸಾಹಿತಿಗಳು, ಕಲಾವಿದರು ಸ್ಮರಿಸಿದ್ದಾರೆ. 

ದಲಿತ ಚಳವಳಿಯ ಸಂದರ್ಭದಲ್ಲಿ ಜಿಲ್ಲೆ ಬಂದಿದ್ದ ಸಿದ್ದಲಿಂಗಯ್ಯ ಅವರು, ನಂತರ ಹಲವಾರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಗಡಿ ಸಮಸ್ಯೆ ಪರಿಶೀಲನೆ ಹಾಗೂ ಗಡಿ ಭಾಗದ ಕನ್ನಡ ಶಾಲೆಗಳ ಅಧ್ಯಯನಕ್ಕಾಗಿ ಬಂದು, ಗಡಿ ಭಾಗದ ಕನ್ನಡಿಗರು, ಜಿಲ್ಲೆಯ ಜನರೊಂದಿಗೆ ಆತ್ಮೀಯವಾಗಿ ಬೆರೆತಿದ್ದರು.

ಇತ್ತೀಚೆಗೆ ಅಂದರೆ ಈ ವರ್ಷದ ಮಾರ್ಚ್‌ 17ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದಲ್ಲಿ ಅಖಿಲ ಕರ್ನಾಟಕ ಜಾನಪದ ಕಲಾವಿದ ಒಕ್ಕೂಟ, ಕರ್ನಾಟಕ ಜಾನಪದ ಪರಿಷತ್ತು ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ‘ಕತ್ತಲ ರಾಜ್ಯದ ಜ್ಯೋತಿಗಳು ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಸಂಸ್ಕೃತಿ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಡಿ ನೋವಿನಿಂದ ಬಳಲುತ್ತಿದ್ದ ಅವರು ಕುಳಿತುಕೊಂಡೇ ಭಾಷಣ ಮಾಡಿದ್ದರು. ಮಂಟೇಸ್ವಾಮಿ, ಮಹದೇಶ್ವರರನ್ನು ವರ್ಣ, ವರ್ಗರಹಿತ ಸಮಾಜ ಕಟ್ಟಿದ ಕ್ರಾಂತಿಕಾರರು ಎಂದು ಬಣ್ಣಿಸಿದ್ದರು. 

ಇದನ್ನೂ ಓದಿ: ಹಿರಿಯ ಕವಿ ಸಿದ್ದಲಿಂಗಯ್ಯ ನಿಧನ

1984ರಲ್ಲಿ ಮೊದಲ ಭೇಟಿ: ಸಿದ್ದಲಿಂಗಯ್ಯ ಅವರು 1984ರಲ್ಲಿ ಜಿಲ್ಲೆಗೆ ಮೊದಲ ಭೇಟಿ ನೀಡಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಸಾಹಿತಿ ಸೋಮಶೇಖರ ಬಿಸಿಲವಾಡಿ.

‘ದಲಿತ ಚಳವಳಿಯಲ್ಲಿ ಸಕ್ರಿಯರಾಗಿದ್ದ ಸಿದ್ದಲಿಂಗಯ್ಯ ಅವರು, ದಲಿತ ಸಮುದಾಯದವರಿಗೆ ತರಬೇತಿ ನೀಡಲು ಬಂದಿದ್ದರು. ಅಮಚವಾಡಿಯಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಬಸ್‌ಗಳು ಸರಿ ಇಲ್ಲದೇ ಇದ್ದುದರಿಂದ ಅವರು ನಗರದಿಂದ ಸೈಕಲ್‌ನಲ್ಲೇ ಅಮಚವಾಡಿಗೆ ತೆರಳಿದ್ದರು.  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಗಡಿಭಾಗ ತಾಳವಾಡಿಗೆ ಭೇಟಿ ನೀಡಿ ಕನ್ನಡ ಶಾಲೆಗಳ ಅಧ್ಯಯನ ಮಾಡಿದ್ದರು. ಅಲ್ಲಿನ 33 ಕನ್ನಡ ಶಾಲೆಗಳ ಗ್ರಂಥಾಲಯಗಳಿಗೆ ತಲಾ 250 ಪುಸ್ತಕಗಳನ್ನು ಉಚಿತವಾಗಿ ನೀಡಿದ್ದರು’ ಎಂದು ಅವರು ಸ್ಮರಿಸಿದರು. 

‘ಅವರೊಂದಿಗೆ 35 ವರ್ಷಗಳಿಂದ ಒಡನಾಟ ಇಟ್ಟುಕೊಂಡಿದ್ದೆ. ಅವರು ರಚಿಸಿದ ಹಾಡುಗಳನ್ನು ಅವರೇ ಹಾಡುತ್ತಿದ್ದರು. ನಾನು ಹಲವು ಬಾರಿ ತಮಟೆ ನುಡಿಸುತ್ತಿದ್ದೆ. 2014ರ ಅಕ್ಟೋಬರ್‌ 12 ಮತ್ತು 13ರಂದು ನಗರದಲ್ಲಿ ನಡೆದಿದ್ದ ದಲಿತ ಸಾಹಿತ್ಯ ಸಮಾವೇಶದ ಸಮಾರೋಪ ಭಾಷಣವನ್ನು ಅವರು ಮಾಡಿದ್ದರು’ ಎಂದು ಬಿಸಲವಾಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಗಡಿ ಪರಿಶೀಲನೆ: ಸಿದ್ದಲಿಂಗಯ್ಯ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ, 2008ರ ಮಾರ್ಚ್‌ 3ರಂದು ಹನೂರು ತಾಲ್ಲೂಕಿನ ಹೊಗೆನಕಲ್‌ ಜಲಪಾತ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗಡಿ ಭಾಗದ ಪರಿಶೀಲನೆ ನಡೆಸಿದ್ದರು.  

‘ಜಿಎಸ್‌ಎಸ್‌ ಬಗ್ಗೆ ವಿಶೇಷ ಗೌರವ’  

‘ಸಿದ್ದಲಿಂಗಯ್ಯ ಅವರ ಸಾವು ನಿಜಕ್ಕೂ ದುಃಖಕರ. ಇದು ಆಗಬಾರದಿತ್ತು. ನನ್ನ ಇತ್ತೀಚಿನ ‘ಸೋಲಿಗರ ಚಿತ್ರಗಳು’ ಕೃತಿಯನ್ನು ನಾನು ಅವರಿಗೆ ನೀಡುವುದಕ್ಕೂ ಮೊದಲು ಅವರೇ ಅಂಗಡಿಯಿಂದ ಖರೀದಿಸಿದ್ದರು. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರಿಂದ ಪುಸ್ತಕದ ಬಗ್ಗೆ ಅಭಿಪ್ರಾಯ ಪಡೆಯಲು ಸಾಧ್ಯವಾಗಿರಲಿಲ್ಲ. ನಮ್ಮ ಒಡನಾಟ ಹೆಚ್ಚಿಲ್ಲದಿದ್ದರೂ, ಆತ್ಮೀಯತೆ ಇತ್ತು. ದೀನಬಂಧು ಆಶ್ರಮಕ್ಕೆ ಬಂದು ಒಂದು ದಿನ ಉಳಿದುಕೊಂಡಿದ್ದರು’ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಯದೇವ ಅವರು ಹೇಳಿದರು. 

‘ಸಿದ್ದಲಿಂಗತ್ಯ ಅವರು ನನ್ನ ತಂದೆ ಜಿ.ಎಸ್‌.ಶಿವರುದ್ರಪ್ಪ ಅವರ ಶಿಷ್ಯರಾಗಿದ್ದರು. ಜಿಎಸ್‌ಎಸ್ ಬಗ್ಗೆ ಅವರಿಗೆ ಅಪಾರ ಗೌರವ ಇತ್ತು. ಯಾವಾಗಲೂ ಗಂಭೀರವಾಗಿರುತ್ತಿದ್ದ ಜಿಎಸ್ಎಸ್‌ ಬಗ್ಗೆ ತಮಾಷೆ ಮಾಡುತ್ತಿದ್ದರು. ಬೆಂಗಳೂರು ವಿವಿಯಲ್ಲಿ ಸಿದ್ದಲಿಂಗ‌ಯ್ಯ ಅವರು ಎಂಎ ಮುಗಿಸುತ್ತಿದ್ದಂತೆಯೇ, ‘ಇಲ್ಲಿಯೇ ಬಂದು ಕೆಲಸ ಮಾಡು’ ಎಂದು ಜಿಎಸ್‌ಎಸ್‌ ಅವರು ಪತ್ರ ಬರೆದು ಸಿದ್ದಲಿಂಗಯ್ಯ ಅವರಿಗೆ ತಲುಪಿಸಿದ್ದರು’ ಎಂದು ಅವರು ಸ್ಮರಿಸಿದರು.

* ಸಿದ್ದಲಿಂಗಯ್ಯ ಅವರ ಇತ್ತೀಚಿನ ರಾಜಕೀಯ ನಡೆಗಳು ಏನೇ ಇದ್ದರೂ ಅವರು ಅದ್ಭುತ ಕವಿ. ನಾನು ಇಂಗ್ಲಿಷ್‌ನಿಂದ ಭಾಷಾಂತರಿಸಿದ್ದ ಬಾಬು ಕುಟೀರ ಕೃತಿಯನ್ನು ಮೆಚ್ಚಿಕೊಂಡಿದ್ದರು.

–ಕೆ.ವೆಂಕಟರಾಜು, ರಂಗಕರ್ಮಿ

* ಜಾನ‍ಪದ ಸಾಹಿತ್ಯ, ಕಲೆ ಬಗ್ಗೆ ಸಿದ್ದಲಿಂಗಯ್ಯ ಅವರಿಗೆ ವಿಶೇಷ ಒಲವು ಇತ್ತು. ಜಿಲ್ಲೆಯ ಮಂಟೇಸ್ವಾಮಿ, ಮಹದೇಶ್ವರ ಕಾವ್ಯ, ಪವಾಡ ಪುರುಷರ ಬಗ್ಗೆ ಇತ್ತೀಚೆಗೆ ಹೆಚ್ಚು ಆಸಕ್ತಿ ಹೊಂದಿದ್ದರು.

–ಸಿ.ಎಂ.ನರಸಿಂಹಮೂರ್ತಿ, ಜಾನಪದ ಅಕಾಡೆಮಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು