ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಬೀಗ ಜಡಿದಿದ್ದ ಮನೆಯ ಬಾಗಿಲು ತೆರೆದ ಪೊಲೀಸರು

ಹೊಸ ಮನೆ ಪ್ರವೇಶಿಸಿದ ಸಂತ್ರಸ್ತ ಮಹಿಳೆ ಕೆಂಪಮ್ಮ
Last Updated 26 ಸೆಪ್ಟೆಂಬರ್ 2020, 13:34 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಬೆಟ್ಟದ ಊರುಬಸಪ್ಪನ ಒಡ್ಡಿನಲ್ಲಿ, ಕೆಂಪಮ್ಮ ಎಂಬ ಮಹಿಳೆಗೆ ಜನಾಶ್ರಯ ಟ್ರಸ್ಟ್‌ ನಿರ್ಮಿಸಿದ್ದ ಮನೆಗೆ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಕಿದ್ದ ಬೀಗವನ್ನು ಶುಕ್ರವಾರ ತಡರಾತ್ರಿ ಪೊಲೀಸರು ತೆಗೆದು, ಮಹಿಳೆಯ ವಾಸಕ್ಕೆ ಅವಕಾಶ ಮಾಡಿಕೊಟ್ಟರು.

ಪ್ರಾಧಿಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಲಾಗಿದೆ ಎಂಬ ಕಾರಣದಿಂದ ಪ್ರಾಧಿಕಾರದ ಅಧಿಕಾರಿಗಳು ಗೃಹಪ್ರವೇಶವನ್ನು ತಡೆದಿದ್ದರು. ಮನೆಗೆ ಬೀಗವನ್ನೂ ಹಾಕಿದ್ದರು. ಇದನ್ನು ಪ್ರತಿಭಟಿಸಿ ಕೆಂಪಮ್ಮ ಅವರು ಮನೆಯ ಎದುರು ಆಹಾರ ಬಿಟ್ಟು ಪ್ರತಿಭಟನೆ ನಡೆಸಿದ್ದರು. ಮನೆಯಲ್ಲಿ ವಾಸಿಸಲು ಅವಕಾಶ ನೀಡದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದರು. ಪೊಲೀಸರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಮನವೊಲಿಸಲು ಯತ್ನಿಸಿದರೂ ಪಟ್ಟು ಸಡಿಸಲಿಲ್ಲ.

ಶುಕ್ರವಾರ ರಾತ್ರಿ 12.20ರ ಸುಮಾರಿಗೆ ಬೆಟ್ಟದ ಠಾಣೆಯ ಇನ್‌ಸ್ಪೆಕ್ಟರ್‌ ರಮೇಶ್‌ ಅವರು ಮನೆಗೆ ಭೇಟಿ ನೀಡಿ ಬೀಗವನ್ನು ತೆಗೆದು ಮಹಿಳೆಯನ್ನು ಮನೆಯ ಒಳಗೆ ಕಳುಹಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಇನ್‌ಸ್ಪೆಕ್ಟರ್‌ ರಮೇಶ್‌ ಅವರು, ‘ಮಹಿಳೆ ಏಕಾಂಗಿಯಾಗಿ ಊಟವನ್ನೂ ಮಾಡದೇ ಮನೆ ಎದುರು ಕುಳಿತಿದ್ದರು. ಮಾನವೀಯ ನೆಲೆಯಲ್ಲಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮನೆಗೆ ಹಾಕಿದ್ದ ಬೀಗವನ್ನು ತೆಗೆಯಲಾಗಿದೆ’ ಎಂದು ಹೇಳಿದರು.

ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಪ್ರತಿಕ್ರಿಯಿಸಿ, ‘ಪ್ರಾಧಿಕಾರದ ಜಾಗದಲ್ಲಿ ಮನೆಕಟ್ಟಿದ್ದರಿಂದ ಪ್ರವೇಶಿಸಲು ಅವಕಾಶ ಕೊಟ್ಟಿರಲಿಲ್ಲ. ಆ ಮಹಿಳೆಯನ್ನು ಮನವೊಲಿಸುವ ಪ್ರಯತ್ನವನ್ನು ಮಾಡಿದ್ದೆವು. ವಾಸಕ್ಕೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದ್ದೆವು. ಅದಕ್ಕೆ ಅವರು ಒಪ್ಪಲಿಲ್ಲ. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಬಾಗಿಲು ತೆಗೆದಿದ್ದಾರೆ. ಈ ಬಗ್ಗೆ ಅವರು ವರದಿ ನೀಡಲಿದ್ದಾರೆ. ಅದನ್ನು ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಪ್ರಾಧಿಕಾರದ ಜಮೀನನ್ನು ಒತ್ತುವರಿ ಮಾಡಿಕೊಳ್ಳುವುದು ಅಪರಾಧ. ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಕ್ಕೆ ಅವಕಾಶ ಇದೆ. ಪ್ರಾಧಿಕಾರಕ್ಕೆ ಸೇರಿದ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಥಳೀಯರು ಸಹಕಾರ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT