ಗುರುವಾರ , ಮೇ 6, 2021
24 °C
ವರ್ತಕರ ಆಕ್ರೋಶ, ಸರ್ಕಾರದ ಆದೇಶದಂತೆ ಕ್ರಮ–ಎಸ್‌ಪಿ ಸ್ಪಷ್ಟನೆ

ಚಾಮರಾಜನಗರ: ಅಂಗಡಿ ಮುಂಗಟ್ಟು ಮುಚ್ಚಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಪೊಲೀಸರು ಗುರುವಾರ ಮಧ್ಯಾಹ್ನ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಬಿಟ್ಟು ಇತರ ಮಳಿಗೆಗಳನ್ನು ಮುಚ್ಚಿಸಿದರು. ಪೊಲೀಸರ ಈ ಕ್ರಮಕ್ಕೆ ವರ್ತಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. 

ಜಿಲ್ಲಾ ಕೇಂದ್ರ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಜವಳಿ, ಆಭರಣ, ಗಿರವಿ, ಪಾತ್ರೆ, ಹಾರ್ಡ್‌ವೇರ್‌, ಫ್ಯಾನ್ಸಿ ಸ್ಟೋರ್‌, ಪಾದರಕ್ಷೆ ಅಂಗಡಿಗಳನ್ನು ಪೊಲೀಸ್‌ ಸಿಬ್ಬಂದಿ ಬಂದ್‌ ಮಾಡಿಸಿದರು.  

ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರದ ಆದೇಶದಂತೆ ಅಂಗಡಿಗಳನ್ನು ಮುಚ್ಚಬೇಕು ಎಂದು ಪೊಲೀಸರು ಅಂಗಡಿಗಳ ಮಾಲೀಕರಿಗೆ ಮನವರಿಕೆ ಮಾಡಲು ಯತ್ನಿಸಿದರು. 

ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗಿನ ಹಾಗೂ ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಮಾತ್ರ ಅಂಗಡಿಗಳನ್ನು ತೆರೆಯದಿದ್ದರೆ ಸಾಕು ಎಂದುಕೊಂಡಿದ್ದ ಮಾಲೀಕರು ಗುರುವಾರ ಬೆಳಿಗ್ಗೆ ಎಂದಿನಂತೆ ಅಂಗಡಿಗಳನ್ನು ತೆರೆದಿದ್ದರು.

ಮಧ್ಯಾಹ್ನ 12 ಗಂಟೆಯ ನಂತರ ಕಾರ್ಯಾಚರಣೆಗೆ ಇಳಿದ ಪೊಲೀಸರು, ಧ್ವನಿವರ್ಧಕದದ ಮೂಲಕ ಅಂಗಡಿ ಮುಚ್ಚುವಂತೆ ಸೂಚಿಸಿದರು. ರಥದ ಬೀದಿ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿಗಳು ಸೇರಿದಂತೆ ಎಲ್ಲ ರಸ್ತೆಗಳಲ್ಲಿ ಪ್ರತಿ ಅಂಗಡಿಗೆ ತೆರಳಿ ಮುಚ್ಚುವಂತೆ ತಾಕೀತು ಮಾಡಿದರು. ಬೀದಿ ಬದಿ ವ್ಯಾಪಾರಿಗಳಿಗೂ ವ್ಯಾಪಾರ ನಿಲ್ಲಿಸುವಂತೆ ಹೇಳಿದರು. 

ಪೊಲೀಸರು ಹೇಳದೆ ಕೇಳದೆ ಅಂಗಡಿಗಳನ್ನು ಬಂದ್‌ ಮಾಡಿಸುತ್ತಿದ್ದಾರೆ ಎಂದು ಕೆಲವು ವ್ಯಾಪಾರಿಗಳು ಆರೋಪಿಸಿದರು. 

ಮೆಡಿಕಲ್‌ಗಳು, ದಿನಸಿ ಅಂಗಡಿಗಳು, ಬೇಕರಿ, ಕೃಷಿಗೆ ಸಂಬಂಧಿಸಿದ ವಸ್ತುಗಳ ಮಾರಾಟ ಮಳಿಗೆಗಳು, ಹೋಟೆಲ್‌, ಬಾರ್‌, ಹೋಟೆಲ್‌, ಹಾಲಿನ ಕೇಂದ್ರಗಳು ಸೇರಿದಂತೆ ಸರ್ಕಾರ ಆದೇಶದಲ್ಲಿ ಪಟ್ಟಿ ಮಾಡಿರುವ ಮಳಿಗೆಗಳನ್ನು ಬಿಟ್ಟು ಎಲ್ಲದಕ್ಕೂ ಬಾಗಿಲು ಹಾಕಿಸಿದರು.  

ಅಂಗಡಿಗಳು ಬಂದ್‌ ಆದ ನಂತರ ಜನರ ಓಡಾಟ ಕಡಿಮೆಯಾಯಿತು. ಬಟ್ಟೆ ಹಾಗೂ ಇತರ ವಸ್ತುಗಳ ಖರೀದಿಗೆ ಬಂದಿದ್ದ ಗ್ರಾಹಕರು ನಿರಾಸೆಯಿಂದ ವಾಪಸ್‌ ತೆರಳಬೇಕಾಯಿತು. 

ಆದೇಶ ಸ್ಪಷ್ಟವಾಗಿದೆ: ಎಸ್‌ಪಿ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು, ‘ಯಾವೆಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇದೆ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ವ್ಯಾಪಾರಿಗಳು ಹಾಗೂ ವರ್ತಕರು ಆದೇಶವನ್ನು ಸರಿಯಾಗಿ ಓದದೆ ಗೊಂದಲ ಮಾಡಿಕೊಂಡಿದ್ದಾರೆ. ನಮ್ಮಲ್ಲಿ ಮಾತ್ರ ಅಲ್ಲ, ಇಡೀ ರಾಜ್ಯದಲ್ಲಿ ಆದೇಶದ ಅನುಸಾರ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ’ ಎಂದು ಹೇಳಿದರು. 

‘ಹೋಟೆಲ್, ರೆಸ್ಟೋರೆಂಟ್, ವೈನ್‌ ಸ್ಟೋರ್, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಬಹುದು. ಆದರೆ, ಪಾರ್ಸೆಲ್‌ಗೆ ಮಾತ್ರ ಅವಕಾಶ. ದಿನಸಿ ಅಂಗಡಿಗಳು, ಹಣ್ಣು, ತರಕಾರಿ, ಮೀನು, ಮಾಂಸ ಅಂಗಡಿ, ಡೇರಿ, ಹಾಲಿನ ಕೇಂದ್ರ ಮತ್ತು ಪ್ರಾಣಿಗಳ ಮೇವು ಸರಬರಾಜು ಅಂಗಡಿ, ಆಹಾರ ತಯಾರಿಕಾ ಘಟಕಗಳು, ಪೂರಕ ಕೈಗಾರಿಕಾ ಚಟುವಟಿಕೆಗಳು, ಬ್ಯಾಂಕ್, ಇನ್ಸೂರೆನ್ಸ್ ಸಂಸ್ಥೆ, ಎಟಿಎಂ, ಮುದ್ರಣ ಮತ್ತು ಮಾಧ್ಯಮ, ಖಾಸಗಿ ಭದ್ರತಾ ಸಂಸ್ಥೆಗಳು, ಉಗ್ರಾಣ ಮತ್ತು ಶೀತಲ ಘಟಕಗಳು, ಪೆಟ್ರೋಲ್, ಡೀಸಲ್ ಗ್ಯಾಸ್ ಬಂಕ್‌ಗಳು, ಇ–ಕಾಮರ್ಸ್‌ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಉಳಿದ ಮಳಿಗೆಗಳನ್ನು ತೆರೆಯಲು ಅನುಮತಿ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. 

‘ರಾತ್ರಿ ಹಾಗೂ ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ, ಔಷಧ ಅಂಗಡಿಗಳನ್ನು ಬಿಟ್ಟು ಉಳಿದ ಮಳಿಗೆಗಳನ್ನು ತೆರೆಯಲೂ ಅನುಮತಿ ಇಲ್ಲ. ವಾರಾಂತ್ಯದಲ್ಲಿ, ದಿನಸಿ, ತರಕಾರಿ, ಹಣ್ಣು, ಹಾಲಿನ ಕೇಂದ್ರಗಳನ್ನು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಬಹುದು’ ಎಂದು ದಿವ್ಯಾ ಅವರು ಮಾಹಿತಿ ನೀಡಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು