ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನಬೆಟ್ಟದ ಕಾಡಿನಲ್ಲಿ 6 ತಾಸು ಸಿಲುಕಿದ್ದ ಮೂವರ ರಕ್ಷಣೆ

Last Updated 23 ಸೆಪ್ಟೆಂಬರ್ 2020, 10:32 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿರಂಗನಬೆಟ್ಟದ ಅರಣ್ಯದ ದಾರಿಯಲ್ಲಿ ರಾತ್ರಿ ಹೊತ್ತು ಆರು ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಬೆಂಗಳೂರಿನ ಉದ್ಯಮಿ, ಅವರ ಮಗ ಹಾಗೂ ಕಾರು ಚಾಲಕನನ್ನು ನಗರದ ಅಪರಾಧ ವಿಭಾಗದ (ಡಿಸಿಐಬಿ) ಪೊಲೀಸ್‌ ಇನ್‌ಸ್ಪೆಕ್ಟರ್‌ ಮಹದೇವ ಶೆಟ್ಟಿ ಹಾಗೂ ತಂಡದವರು ರಕ್ಷಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಸೆ. 16ರಂದು ಈ ಘಟನೆ ನಡೆದಿದೆ. ಪೊಲೀಸರು ರಕ್ಷಿಸಿದ ಬೆಂಗಳೂರಿನ ಉದ್ಯಮಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರ ಥಾಮಸ್‌ ಅವರಿಗೆ ವೈಯಕ್ತಿಕ ಸಂದೇಶ ಕಳುಹಿಸಿ ಧನ್ಯವಾದ ಸಲ್ಲಿಸಿದ್ದಾರೆ. ದಿವ್ಯ ಅವರು ಇಲಾಖೆಯ ಫೇಸ್‌ಬುಕ್‌ ಪುಟದಲ್ಲಿ ಇದನ್ನು ಹಂಚಿಕೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಆರು ಗಂಟೆಯ ಜೀವಭಯ: ಉದ್ಯಮಿ ಎನ್‌.ರೂಪೇಶ್‌ ಕುಮಾರ್‌ ರೆಡ್ಡಿ ಅವರು ತಮ್ಮ ಮಗನೊಂದಿಗೆ ಇನ್ನೊವಾ ವಾಹನದಲ್ಲಿ ಸೆ.16ರಂದು ಸಂಜೆ ಕಾಡಿನ ವೀಕ್ಷಣೆಗಾಗಿ ಬಿಳಿಗಿರಿರಂಗನಬೆಟ್ಟದಿಂದ ಕೆ.ಗುಡಿ ಮಾರ್ಗವಾಗಿ ತೆರಳುತ್ತಿದ್ದರು. ದಾರಿ ಮಧ್ಯೆ (ಕನ್ನೇರಿ ಕಾಲೊನಿಗಿಂತ ಮುಂದೆ) ಹಳ್ಳವೊಂದರಲ್ಲಿ ಅವರ ವಾಹನ ಸಿಲುಕಿಕೊಂಡಿತು. ಸಂಜೆಯಾಗಿದ್ದರಿಂದ ಹಾಗೂ ಮೊಬೈಲ್‌ ನೆಟ್‌ವರ್ಕ್‌ ಇಲ್ಲದೇ ಇದ್ದುದರಿಂದ ಯಾರನ್ನೂ ಸಂಪರ್ಕಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಆನೆ, ಹುಲಿಗಳ ಭಯದಿಂದ ಉದ್ಯಮಿ, ಮಗ ಹಾಗೂ ಚಾಲಕ ಮೂವರೂ ಕಾರಲ್ಲೇ ಕುಳಿತಿದ್ದರು. ರಾತ್ರಿ ಎರಡು ಗಂಟೆಯವರೆಗೂ ಅವರು ಜೀವಭಯದಿಂದಲೇ ಸಮಯ ಕಳೆದಿದ್ದರು. ‌

ಗಾಂಜಾ ಸಾಗಣೆ ಪ್ರಕರಣಗಳು ವರದಿಯಾಗುತ್ತಿದ್ದುದರಿಂದ ಪೊಲೀಸರು ಗಸ್ತು ತಿರುಗುವುದನ್ನು ಹೆಚ್ಚು ಮಾಡಿದ್ದರು. ಡಿಸಿಐಬಿ ಇನ್‌ಸ್ಪೆಕ್ಟರ್‌ ಮಹದೇವಶೆಟ್ಟಿ ಹಾಗೂ ಅವರ ತಂಡ ಸೆ.16ರಂದು ಅದೇ ಮಾರ್ಗದಲ್ಲಿ ಗಸ್ತು ತಿರುಗುತ್ತಿತ್ತು.‌

ರಾತ್ರಿ ಎರಡು ಗಂಟೆ ಸುಮಾರಿಗೆ ಹಳ್ಳದಲ್ಲಿ ಸಿಲುಕಿಕೊಂಡಿದ್ದ ವಾಹನವನ್ನು ಕಂಡ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಪರಿಶೀಲಿಸಿದಾಗ ಒಳಗಡೆ ಮೂವರು ಇರುವುದು ಗೊತ್ತಾಯಿತು. ಅವರನ್ನು ರಕ್ಷಿಸಿ, ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ಅವರು ತಂಗಿದ್ದ ಹೋಟೆಲ್‌ಗೆ ಬಿಟ್ಟರು.

ಘಟನೆಯ ಬಗ್ಗೆ ‘ಪ್ರಜಾವಾಣಿ’ಗೆ ವಿವರ ನೀಡಿದ ಇನ್‌ಸ್ಪೆಕ್ಟರ್‌ ಮಹದೇವಶೆಟ್ಟಿ ಅವರು, ‘ಅರಣ್ಯ ವೀಕ್ಷಣೆಗಾಗಿ ಉದ್ಯಮಿ ಅವರು ಮಗನೊಂದಿಗೆ ಬಂದಿದ್ದರು. ದಾರಿಯಲ್ಲಿ ಹುಲಿಯನ್ನು ಕಂಡು ವಾಹನವನ್ನು ಹಿಂದಕ್ಕೆ ತೆಗೆದುಕೊಂಡಾಗ ಹಳ್ಳದಲ್ಲಿ ಸಿಲುಕಿಕೊಂಡಿತ್ತು. ಅಲ್ಲಿಂದ ವಾಹನವನ್ನು ತೆಗೆಯುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಆನೆ, ಹುಲಿಗಳು ದಾಳಿ ಮಾಡಬಹುದು ಎಂಬ ಭಯದಿಂದ ಗಾಡಿಯನ್ನು ಚಾಲೂ ಮಾಡಿರಲಿಲ್ಲ. ಎಸಿಯನ್ನೂ ಹಾಕದೇ ಕಾರಿನ ಒಳಗಡೆ ಇದ್ದರು. ಪ್ರಾಣಿಗಳು ಸಂಚರಿಸುವುದನ್ನು ಕಂಡು ಭಯಭೀತರಾಗಿದ್ದರು’ ಎಂದು ಮಾಹಿತಿ ನೀಡಿದರು. ‌

‘ಗಾಂಜಾ ಸಾಗಣೆ ನಡೆಯುತ್ತಿದೆ ಎಂಬ ಮಾಹಿತಿ ಇದ್ದುದರಿಂದ ನಾವು ಗಸ್ತು ತಿರುಗುತ್ತಿದ್ದೆವು. ಈ ಸಂದರ್ಭದಲ್ಲಿ ಕಾರನ್ನು ನೋಡಿದೆವು. ವಿಚಾರಿಸಿದಾಗ ಎಲ್ಲ ವಿಷಯವನ್ನು ತಿಳಿಸಿದರು. ತಮ್ಮನ್ನು ರಕ್ಷಿಸುವಂತೆ ಮನವಿಯನ್ನೂ ಮಾಡಿದರು. ಮನುಷ್ಯನಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಕರ್ತವ್ಯ. ಅದನ್ನು ನಾವು ಮಾಡಿದ್ದೇವೆ. ರೂಪೇಶ್‌ ಅವರು ಅದನ್ನು ಸ್ಮರಿಸಿಕೊಂಡು ಎಸ್‌ಪಿಯವರಿಗೆ ಸಂದೇಶ ಕಳುಹಿಸಿದ್ದಾರೆ’ ಎಂದು ವಿನೀತರಾಗಿ ನುಡಿದರು. ‌‌‌

ಎಸ್‌ಪಿ ಮೆಚ್ಚುಗೆ, ಅಭಿನಂದನೆ: ಎಸ್‌ಪಿ ದಿವ್ಯ ಸಾರಾ ಥಾಮಸ್‌ ಅವರು ಘಟನೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ರೂಪೇಶ್‌ ಅವರು ಕಳುಹಿಸುವ ಸಂದೇಶವನ್ನೂ ಪ್ರಕಟಿಸಿದ್ದಾರೆ. ಇನ್‌ಸ್ಪೆಕ್ಟರ್‌ ಮಹದೇವಶೆಟ್ಟಿ ಹಾಗೂ ಸಿಬ್ಬಂದಿಗೆ ಅಭಿನಂದನೆಯನ್ನೂ ಸಲ್ಲಿಸಿದ್ದಾರೆ. ‌

ಪೊಲೀಸರ ಮಾನವೀಯ ನಡವಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT