ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕಾಲದಲ್ಲಿ ಪೊಲೀಸರ ಸೇವೆ ಶ್ಲಾಘನೀಯ

ಪೊಲೀಸ್‌ ಹುತಾತ್ಮರ ದಿನಾಚರಣೆ, ಸ್ಮಾರಕಕ್ಕೆ ಪುಷ್ಪ ನಮನ, ಜಿಲ್ಲಾ ನ್ಯಾಯಾಧೀಶರ ಬಣ್ಣನೆ
Last Updated 21 ಅಕ್ಟೋಬರ್ 2020, 15:13 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಕಾಲದಲ್ಲಿ ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೋಂಕು ತಡೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಬುಧವಾರ ಶ್ಲಾಘಿಸಿದರು.

ಜಿಲ್ಲಾ ಪೊಲೀಸ್‌ ಇಲಾಖೆಯು ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘2020ರಲ್ಲಿ ದೇಶ, ರಾಜ್ಯದಲ್ಲಿ ಪೊಲೀಸರು ಮಾಡುತ್ತಿರುವ ಸೇವೆ ಅತ್ಯಂತ ಮಹತ್ವದ್ದು. ಕೊರೊನಾ ಕಾಲದಲ್ಲಿ ಅವರು ಸೋಂಕು ಹರಡದಂತೆ ತಡೆಯಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದಾರೆ. ಈ ಕರ್ತವ್ಯದಲ್ಲಿ ಕೆಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ’ ಎಂದರು.

‘ದೇಶದ ರಕ್ಷಣೆಯಲ್ಲಿ ಪೊಲೀಸರು ಗುರುತರ ಪಾತ್ರವನ್ನು ನಿರ್ವಹಿಸುತ್ತಾರೆ. ಸೈನಿಕರು ಹೊರಗಿನ ಶತ್ರುಗಳ ವಿರುದ್ಧ ಹೋರಾಡಿದರೆ, ಪೊಲೀಸರು ದೇಶದ ಒಳಗಿನ ಶತ್ರುಗಳೊಂದಿಗೆ ಹೋರಾಡುತ್ತಾ, ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ’ ಎಂದು ಮೆಚ್ಚುಗೆ ಸೂಚಿಸಿದರು.

‘ನೀವು ನಿಮ್ಮ ಕೆಲಸವನ್ನು ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡಿದರೆ, ಎಲ್ಲರೂ ನಿಮಗೆ ಸೆಲ್ಯೂಟ್‌ ಹೊಡೆಯುತ್ತಾರೆ. ಅದೇ ಭ್ರಷ್ಟಾಚಾರ, ವಂಚನೆ ಎಲ್ಲ ಮಾಡಿದರೆ ನೀವೇ ಬೇರೆಯವರಿಗೆ ಸೆಲ್ಯೂಟ್‌ ಹೊಡೆಯುತ್ತಾರೆ’ ಎಂದು ನ್ಯಾಯಾಧೀಶರು ಹೇಳಿದರು.

‘ಪೊಲೀಸರ ಬೂಟಿನ ಸದ್ದು ಕೇಳಿದರೆ ಅಪರಾಧಿಗಳು, ಸಮಾಜ ಘಾತುಕರು ಭಯ ಬೀಳುತ್ತಾರೆ. ಪೊಲೀಸರಿಗೆ ಅಷ್ಟೊಂದು ಶಕ್ತಿಯಿದೆ. ಪೊಲೀಸ್‌ ಸಿಬ್ಬಂದಿ ಪ್ರಾಮಾಣಿಕತೆ, ನಿಷ್ಠೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಪೊಲೀಸರು ಇಲ್ಲದೇ ಇದ್ದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ಐದು ನಿಮಿಷ ತಮ್ಮ ಸ್ಥಳದಲ್ಲಿ ಇಲ್ಲದಿದ್ದರೆ, ವಾಹನಗಳ ದಟ್ಟಣೆ ಉಂಟಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ’ ಎಂದು ನ್ಯಾಯಾಧೀಶರು ವಿವರಿಸಿದರು.

ಶ್ರದ್ಧಾಂಜಲಿ ಅರ್ಪಣೆ: ಇದಕ್ಕೂ ಮೊದಲು ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ಕುಮಾರ್‌ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕೋವಿಡ್‌ನಿಂದಾಗಿ ಮೃತಪಟ್ಟ ಮೂವರು ಪೊಲೀಸ್‌ ಸಿಬ್ಬಂದಿ ಕೂಡ ಕಾರ್ಯಕ್ರಮದಲ್ಲಿ ಹಾಜರಾಗಿ, ಸ್ಮಾರಕಕ್ಕೆ ನಮನ ಸಲ್ಲಿಸಿದರು. ಮೃಪಟ್ಟಿದ್ದ ರವಿಕುಮಾರ್‌ ಅವರ ಕುಟುಂಬದ ಸದಸ್ಯರು ಸ್ಮಾರಕದ ಮುಂದೆ ರೋದಿಸಿದರು.

ಪೊಲೀಸ್‌ ಹುತಾತ್ಮರ ದಿನಾಚರಣೆಯ ಮಹತ್ವವನ್ನು ತಿಳಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು, ಹುತಾತ್ಮರಾದ ಪೊಲೀಸ್‌ ಸಿಬ್ಬಂದಿಯ ಹೆಸರನ್ನು ಓದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT