ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋ‌ಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ: ಐಜಿಪಿ ಕಿವಿಮಾತು

ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ತೆರೆ; ಚಾಂಪಿಯನ್‌, ವಿಜೇತರಿಗೆ ಬಹುಮಾನ ಪ್ರದಾನ
Last Updated 9 ಮಾರ್ಚ್ 2021, 12:54 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಪೊಲೀಸ್‌ ಇಲಾಖೆಯ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟಕ್ಕೆ ಸೋಮವಾರ ತೆರೆ ಬಿತ್ತು. 5ರಂದು ಆರಂಭಗೊಂಡಿದ್ದ ಕ್ರೀಡಾಕೂಟ ಭಾನುವಾರ ಮುಕ್ತಾಯವಾಗಬೇಕಿತ್ತು. ಆದರೆ, ಸೋಮವಾರಕ್ಕೆ ಅದನ್ನು ಮುಂದೂಡಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ದಕ್ಷಿಣ ವಲಯ ಐಜಿಪಿ ಪ್ರವೀಣ್‌ ಮಧುಕರ್‌ ಅವರು, ‘ಆರೋಗ್ಯ ಕಾಪಾಡಲು ಕ್ರೀಡೆಗಳು ಸಹಕಾರಿ. ಆಟೋಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ’ ಎಂದು ಹೇಳಿದರು.

‘ವರ್ಷಪೂರ್ತಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ನಿರತರಾಗಿರುವ ಪೊಲೀಸರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಕೆಲಸದ ಒತ್ತಡದಲ್ಲಿರುವ ಪೊಲೀಸ್‌ ಸಿಬ್ಬಂದಿಗೆ ಇಂತಹ ಕ್ರೀಡಾ ಕೂಟಗಳು ಚೈತನ್ಯ ತುಂಬುತ್ತವೆ. ಆರೋಗ್ಯ ಉತ್ತಮವಾಗಿದ್ದರೆ ಉತ್ಸಾಹದಿಂದ ಇರಲು ಸಾಧ್ಯ. ಪ್ರತಿಯೊಬ್ಬರೂ ದಿನನಿತ್ಯ ಯೋಗ, ವ್ಯಾಯಾಮ ಮಾಡಬೇಕು. ನಿರಂತರ ವ್ಯಾಯಾಮದಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ’ ಎಂದು ಹೇಳಿದರು.

‘ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ ಇಲಾಖೆಯ ಮೂವರು ಮೃತಪಟ್ಟಿದ್ದರು. ಇವರ ಕುಟುಂಬಗಳಿಗೆ ಈಗಾಗಲೇ ತಲಾ ₹30 ಲಕ್ಷ ಪರಿಹಾರ ನೀಡಲಾಗಿದೆ. ಈ ಕುಟುಂಬಗಳ ಒಬ್ಬರಿಗೆ ಕೆಲಸ ಕೊಡಿಸುವ ನಿಟ್ಟಿನಲ್ಲಿ ಕೇಂದ್ರ ಕಚೇರಿಗೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ’ ಎಂದು ಐಜಿಪಿ ಅವರು ಹೇಳಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಅವರು ಮಾತನಾಡಿ, ‘ಒತ್ತಡವು ಅಧಿಕಾರಿಗಳ ಜೀವ ತೆಗೆದುಕೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಒತ್ತಡ ಕಡಿಮೆ ಮಾಡಿಕೊಳ್ಳಲು ಕ್ರೀಡೆಗಳು ಅತ್ಯುತ್ತಮ ಸಾಧನ. ಪ್ರತಿದಿನ ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. 40 ವರ್ಷದ ನಂತರ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಪ್ರತಿನಿತ್ಯ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಕೊಳ್ಳುವ ಮೂಲಕ ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸತೀಶ್‌, ಭಾಗ್ಯ ಚಾಂಪಿಯನ್‌: ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಡಿಎಆರ್‌ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್‌ ಅವರು ವೈಯಕ್ತಿಕ ಚಾಂಪಿಯನ್‌ ಆದರು.

ಮಹಿಳಾ ವಿಭಾಗದಲ್ಲಿ ಕೊಳ್ಳೇಗಾಲ ಪಟ್ಟಣದ ಭಾಗ್ಯ ಅವರು ವೈಯಕ್ತಿಕ ಚಾಂಪಿಯನ್‌ಶಿಪ್‌ ಅನ್ನು ತಮ್ಮದಾಗಿಸಿಕೊಂಡರು. ಕೃಷ್ಣಯ್ಯ ಅವರು ಬ್ರಿಗೇಡಿಯರ್‌ ಮಲ್ಲಮ್ಮ ಪ್ರಶಸ್ತಿಯನ್ನು ಗೆದ್ದುಕೊಂಡರು.

ಚಾಂಪಿಯನ್‌ಗಳಿಗೆ, ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌. ನಟೇಶ್, ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕ ಡಾ.ಜಿ.ಸಂತೋಷ್ ಕುಮಾರ್, ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್ ವಿ.ಏಡುಕುಂಡಲು, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್ ಇದ್ದರು.

‘ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ'

‘ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರನ್ನು ಸ್ನೇಹಿತರಂತೆ ನೋಡಬೇಕು. ಆಗ ಮಾತ್ರ ಪೊಲೀಸರ ಮೇಲೆ ಸಾರ್ವಜನಿಕರಿಗೆ ಅಭಿಮಾನ, ಗೌರವ ಹೆಚ್ಚಾಗುತ್ತದೆ. ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಕಾನೂನನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲ ನೀಡಬಾರದು. ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದ್ದು ದಾಳಿ ಮಾಡುವ ಮೂಲಕ ತಡೆಗಟ್ಟಬೇಕು. ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ಅಪರಾಧಗಳನ್ನು ತಡೆಗಟ್ಟಲು ಇಲಾಖೆಯ ಸಿಬ್ಬಂದಿ ಮುಂದಾಗಬೇಕು’ ಎಂದು ಐಜಿಪಿ ‌ಪ್ರವೀಣ್ ಮಧುಕರ್‌ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT