ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಮಹೇಶ್‌: ಯಾರಿಗೆ ಹೆಚ್ಚು ಲಾಭ?

ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ ಬೆಳವಣಿಗೆ
Last Updated 3 ಆಗಸ್ಟ್ 2021, 3:11 IST
ಅಕ್ಷರ ಗಾತ್ರ

ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಬಿಜೆಪಿಗೆ ಸೇರ್ಪಡೆಯಾಗಲು ದಿನ ನಿಗದಿಯಾಗುತ್ತಲೇ, ಈ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಯಾರಿಗೆ ಲಾಭವಾಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಒಂದು ಕಾಲದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕಟು ಟೀಕಾಕಾರರಾಗಿದ್ದ ಎನ್‌.ಮಹೇಶ್‌ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಮಲ ಪಾಳಯ ಸೇರುತ್ತಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎನ್‌.ಮಹೇಶ್‌ ಅವರು ಬಿಜೆಪಿ ಬಗ್ಗೆ ಮೃದು ಧೋರಣೆ ತೋರುತ್ತಾ ಬಂದಿದ್ದಾರೆ. ಆವಾಗಿನಿಂದಲೇ ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ನಿರಾಕರಿಸುತ್ತಲೇ ಬಂದಿದ್ದರು. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರ ಮಹೇಶ್‌ ಅವರು ಬಿಜೆಪಿಗೆ ಸೇರ್ಪಡೆಯಾಗುವ ಪ್ರಕ್ರಿಯೆಗೆ ವೇಗ ದೊರೆತಿದ್ದು, ಇದೇ 5ರಿಂದ ಅವರು ಅಧಿಕೃತವಾಗಿ ಕಮಲ ‍ಪಕ್ಷದ ಭಾಗವಾಗಲಿದ್ದಾರೆ.

ಹೆಚ್ಚು ಅನುಕೂಲ ಯಾರಿಗೆ?: ಬಿಎಸ್‌ಪಿಯಿಂದ ಮಹೇಶ್‌ ಅವರನ್ನು ಉಚ್ಚಾಟನೆ ಮಾಡಿದ ಬಳಿಕ ಜಿಲ್ಲೆಯಲ್ಲಿ ಪಕ್ಷ ಎರಡು ಹೋಳಾಗಿದೆ. ಮಹೇಶ್‌ ಅವರ ಕಟ್ಟಾ ಬೆಂಬಲಿಗರು ಕೂಡ ಬಿಎಸ್‌ಪಿಯಿಂದ ದೂರವಾಗಿದ್ದಾರೆ.

ಮಹೇಶ್‌ ಅವರ ಉಚ್ಚಾಟನೆಯಿಂದ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಕೊಳ್ಳೇಗಾಲದಲ್ಲಿ ಬಿಎಸ್‌ಪಿಗೆ ಕೊಂಚ ಹಾನಿಯಾಗಿರುವುದು ನಿಜ. ಎರಡು ವರ್ಷಗಳಿಂದಲೂ ಇದೇ ಪರಿಸ್ಥಿತಿ ಇದೆ. ಈಗ ಅವರು ಬಿಜೆಪಿಗೆ ಸೇರುವುದರಿಂದ ಬಿಎಸ್‌ಪಿಗೆ ದೊಡ್ಡ ನಷ್ಟ ಆಗದು ಎಂದು ಹೇಳುತ್ತಾರೆ ಸ್ಥಳೀಯ ರಾಜಕೀಯ ಬಲ್ಲವರು.

ಬಿಜೆಪಿಗೆ ದಲಿತ ಮತಗಳು?: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿ ಚುನಾವಣೆಯಲ್ಲಿ ದಲಿತರ ಹೆಚ್ಚು ಮತಗಳು ಕಾಂಗ್ರೆಸ್‌ಗೆ ಬೀಳುತ್ತವೆ.‌ಇದೇ ಸಮುದಾಯದಿಂದ ಬಂದಿರುವ ಮಹೇಶ್‌ ಅವರು ಓದಿದವರು, ತಿಳಿದವರು. ಮಾತಿನ ಮೂಲಕ ಜನರನ್ನು ಸೆಳೆಯುವ ಕಲೆ ಅವರಿಗೆ ‌ಗೊತ್ತಿದೆ. ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರೊಂದಿಗೂ ಉತ್ತಮ ಸಂಬಂಧ ಹೊಂದಿರುವ ಅವರು ಚುನಾವಣೆ ಸಂದರ್ಭದಲ್ಲಿ ದಲಿತರ ಮತಗಳನ್ನು ಸ್ವಲ್ಪವಾದರೂ ಸೆಳೆಯಬಹುದು ಎಂಬುದು ಜಿಲ್ಲೆಯ ಬಿಜೆಪಿ ಮುಖಂಡರ ಅಂಬೋಣ.

‘ಕೊಳ್ಳೇಗಾಲದಲ್ಲಿ ಪಕ್ಷದ ಕೆಲವು ಮುಖಂಡರಿಗೆ ಮಹೇಶ್‌ ಸೇರ್ಪಡೆ ಇಷ್ಟವಿಲ್ಲದಿದ್ದರೂ, ಬಹಿರಂಗವಾಗಿ ಅದನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಹೇಶ್‌ ಅವರು ಟಿಕೆಟ್‌ ಪಡೆಯಲು ಯತ್ನಿಸಿದರೂ, ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ. ಯಾರೇ ಅಭ್ಯರ್ಥಿಯಾದರೂ ಮಹೇಶ್‌ ಅವರು ಪಕ್ಷದ ಪರವಾಗಿ ಪ್ರಚಾರ ನಡೆಸಲೇಬೇಕಾಗುತ್ತದೆ. ಅವರ ಬೆಂಬಲಿಗರು ಹಾಗೂ ಸಮುದಾಯದ ಮತಗಳು ಪಕ್ಷಕ್ಕೇ ಬೀಳಲಿವೆ’ ಎಂದು ಹೇಳುತ್ತಾರೆ ಜಿಲ್ಲೆಯ ಬಿಜೆಪಿ ಮುಖಂಡರು.

ಜಿಲ್ಲೆಯ ದಲಿತ ಸಮುದಾಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಲೇ ಬಂದಿದೆ (ಕಳೆದ ಲೋಕಸಭಾ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್‌ ಅವರನ್ನೂ ಬೆಂಬಲಿಸಿತ್ತು). ಎನ್‌.ಮಹೇಶ್‌ ಅವರು ಬಿಜೆಪಿಗೆ ಸೇರಿದ್ದರೂ, ‍‍ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂಬುದು ಕಾಂಗ್ರೆಸ್‌ ಮುಖಂಡರ ಮಾತು.

‘ಕೊಳ್ಳೇಗಾಲದಲ್ಲಿ ಮಹೇಶ್‌ ಅವರು ಈಗಾಗಲೇ ಹೆಸರು ಕೆಡಿಸಿಕೊಂಡಿದ್ದಾರೆ. ಯಾವ ಅಭಿವೃದ್ಧಿ ಕೆಲಸವೂ ಆಗಿಲ್ಲ. ಅವರು ಮುಂದೆ ಚುನಾವಣೆಗೆ ನಿಂತರೆ ಸೋಲು ಖಚಿತ. ಅವರು ಬಿಜೆಪಿ ಸೇರುವುದರಿಂದ ಪಕ್ಷಕ್ಕೆ ಲಾಭವೇ ವಿನಾ ನಷ್ಟವಲ್ಲ’ ಎಂದು ಹೇಳುತ್ತಾರೆ ಕಾಂಗ್ರೆಸ್‌ ಮುಖಂಡರು.

ಮಹೇಶ್‌ಗೆ ಹೆಚ್ಚು ಬಲ

ಬಿಜೆಪಿ ಸೇರ್ಪಡೆಯಿಂದ ಸ್ವತಃ ಮಹೇಶ್‌ ಅವರಿಗೆ ಹೆಚ್ಚು ಲಾಭ ಎಂದು ಹೇಳುತ್ತಾರೆ ರಾಜಕೀಯದಲ್ಲಿರುವವರು. ಬಿಎಸ್‌ಪಿಯಿಂದ ಉಚ್ಚಾಟಿತರಾಗಿದ್ದ ಅವರು ರಾಜಕೀಯದಲ್ಲಿ ಅತಂತ್ರರಾಗಿದ್ದರು.

ಬಿಜೆಪಿಗೆ ಸೇರುವ ಮೂಲಕ ಅವರು ಜಾಣ ನಡೆಯನ್ನು ಪ್ರದರ್ಶಿಸಿದ್ದಾರೆ.ರಾಷ್ಟ್ರೀಯ ಪಕ್ಷವೊಂದರ ಬಲ ಅವರಿಗೆ ಸಿಗಲಿದೆ. ಮುಂದೆ ರಾಜಕೀಯವಾಗಿ ಉತ್ತಮ ಅವಕಾಶಗಳೂ ಸಿಗಲಿವೆ. ವಿಧಾನಸಭಾ ಚುನಾವಣೆಗೆ ಟಿಕೆಟ್‌ ಸಿಗದಿದ್ದರೂ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಅವಕಾಶವಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ಸೂಕ್ತ ಅಭ್ಯರ್ಥಿಗಳಿಲ್ಲ. ಮಹೇಶ್‌ ಅವರು ಶ್ರೀನಿವಾಸ ಪ್ರಸಾದ್‌ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಬೆಂಬಲ ಸಿಕ್ಕಿದರೆ, ಮಹೇಶ್‌ ಅವರು ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಲೂ ಬಹುದು ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

--

ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರನ್ನೂ ಬಿಜೆಪಿ ಸ್ವಾಗತಿಸಿದೆ. ಅದೇ ರೀತಿಯಲ್ಲಿ ಎನ್‌.ಮಹೇಶ್‌ ಅವರನ್ನು ಸ್ವಾಗತಿಸುತ್ತೇವೆ. ಪಕ್ಷದ ಸಂಘಟನೆಯಲ್ಲಿ ಅವರು ತೊಡಗಲಿದ್ದಾರೆ
ಆರ್‌.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

---

ಮಹೇಶ್‌ ಅವರು ಬಿಜೆಪಿಗೆ ಸೇರುವುದರಿಂದ ಕಾಂಗ್ರೆಸ್‌ಗೆ ಏನೂ ನಷ್ಟವಿಲ್ಲ. ನಿಜ ಹೇಳಬೇಕೆಂದರೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಈ ಬೆಳವಣಿಗೆಯಿಂದ ನಮಗೆ ಇನ್ನಷ್ಟು ಅನುಕೂಲವಾಗಲಿದೆ
ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

------

ನಮಗೆ ಯಾವುದೇ ಹಾನಿ ಇಲ್ಲ. ನಮ್ಮದು ಕಾರ್ಯಕರ್ತರ ಆಧರಿತ ಪಕ್ಷ. ಕೆಲವರು ಮಾತ್ರ ಆಮಿಷಕ್ಕೆ ಒಳಗಾಗಿ ಮಹೇಶ್‌ ಜೊತೆ ಹೋಗಿದ್ದಾರೆ. ಕಾರ್ಯಕರ್ತರು ನಮ್ಮೊಂದಿಗೆ ಇದ್ದಾರೆ
ಎನ್‌.ನಾಗಯ್ಯ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT