ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹಳ್ಳಿ ರಾಜಕಾರಣದತ್ತ ಪಕ್ಷಗಳ ಚಿತ್ತ

ವರ್ಷಾಂತ್ಯದೊಳಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ, ಅಭ್ಯರ್ಥಿಗಳ ಹುಡುಕಾಟದಲ್ಲಿ ಪಕ್ಷಗಳು
Last Updated 30 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಡಿಸೆಂಬರ್ ಅಂತ್ಯದೊಳಗೆ ಗ್ರಾಮ‌ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲೀಗ ಹಳ್ಳಿ ರಾಜಕಾರಣ ಬಿರುಸು ಪಡೆದಿದೆ.

ಗ್ರಾಮೀಣ ಪ್ರದೇಶದಲ್ಲಿ ಚುನಾವಣಾ ರಾಜಕೀಯ ನಿಧಾನವಾಗಿ ರಂಗೇರುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳು ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು‌ ನೀಡುತ್ತಿವೆ.

ಗ್ರಾಮ‌ ಪಂಚಾಯಿತಿಯಲ್ಲಿ ಪಕ್ಷದ ಹೆಸರಿನಲ್ಲಿ‌ ಚುನಾವಣೆ ನಡೆಯುವುದಿಲ್ಲವಾದರೂ, ಪಕ್ಷಗಳು ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಕ್ಕೆ ಏರಲು ಯತ್ನಿಸುತ್ತವೆ.

ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳ ಪೈಕಿ 129 ಪಂಚಾಯಿತಿಗಳ ಅವಧಿ ಈಗಾಗಲೇ ಮುಕ್ತಾಯವಾಗಿದ್ದು (ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮ‌ ಪಂಚಾಯಿತಿಯ ಅಧಿಕಾರದ ಅವಧಿ 2021ರ ನವೆಂಬರ್ 1ರವರೆಗೂ ಇದೆ), 2,157 ಸದಸ್ಯ ಸ್ಥಾನಗಳಿಗೆ ಶೀಘ್ರದಲ್ಲಿ ಚುನಾವಣೆ ನಡೆಯಲಿದೆ.

ಪಕ್ಷಗಳ ನಡುವೆ ಪೈಪೋಟಿ: ಜಿಲ್ಲೆಯಲ್ಲಿರುವ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗ್ರಾಮ‌ಪಂಚಾಯಿತಿಗಾಗಿ ಒಂದೆರಡು ತಿಂಗಳುಗಳಿಂದಲೇ ಸಿದ್ಧತೆ ಆರಂಭಿಸಿವೆ. ಬಹುಜನ ಸಮಾಜ ಪಕ್ಷ ಕೂಡ ಸಿದ್ಧತೆ ನಡೆಸುತ್ತಿದೆ.

ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಕೆಲವು ವಾರಗಳಿಂದೀಚೆಗೆ ನಡೆಸುತ್ತಿರುವ ಚಟುವಟಿಕೆಗಳನ್ನು ಗಮನಿಸಿ ಹೇಳುವುದಾದರೆ, ಕಾಂಗ್ರೆಸ್ ಹಾಗೂ ಬಿಎಸ್‌ಪಿಗಳಿಗಿಂತ ಬಿಜೆಪಿಯು ಹೆಚ್ಚು ವ್ಯವಸ್ಥಿತವಾಗಿ ಚುನಾವಣೆಗೆ ಸಜ್ಜಾಗುತ್ತಿದೆ.

ಎರಡು ತಿಂಗಳ ಹಿಂದೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಿಲ್ಲೆಗೆ ಭೇಟಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಆ ಬಳಿಕ ವಿವಿಧ ಮೋರ್ಚಾಗಳ ಸಭೆಗಳು‌ ನಡೆದಿವೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ರಚಿಸಲಾಗಿರುವ ಮಹಾ ಶಕ್ತಿ ಕೇಂದ್ರಗಳ ಸಭೆಗಳು ನಿಯಮಿತವಾಗಿ‌ ನಡೆಯುತ್ತಿವೆ. ಶಕ್ತಿ ಕೇಂದ್ರ ಹಾಗೂ ಬೂತು ಮಟ್ಟದಲ್ಲೂ ವಿವಿಧ ಸಮಿತಿಗಳನ್ನು ರಚಿಸಿರುವ ಬಿಜೆಪಿ ಪಕ್ಷವನ್ನು ಸಂಘಟಿಸುವುದರ ಜೊತೆಗೆ, ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಶೋಧನೆಯಲ್ಲಿ ‌ನಿರತವಾಗಿದೆ.

ಇತ್ತ ಜಿಲ್ಲಾ ಕಾಂಗ್ರೆಸ್ ಕೂಡ, ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಗ್ರಾಮೀಣ ಜನರನ್ನು‌ ತಲುಪುವ ಪ್ರಯತ್ನ ನಡೆಸಿದೆ.

ಪಕ್ಷದ ವತಿಯಿಂದ ಕೊರೊನಾ ವಾರಿಯರ್ ಗಳನ್ನು‌ ನೇಮಿಸಿಕೊಂಡು, ಅವರ ಮೂಲಕ ಗ್ರಾಮೀಣ ಜನರಿಗೆ ಕೋವಿಡ್ ಪರೀಕ್ಷೆ‌ ನಡೆಸುವುದು, ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ಜಿಲ್ಲೆಯಲ್ಲಿರುವ ಎಲ್ಲ 23 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆಯನ್ನು ಅದು ಹಮ್ಮಿಕೊಂಡಿದೆ. ಹರವೆ ಕ್ಷೇತ್ರದಲ್ಲಿ ಇತ್ತೀಚೆಗೆ ಒಂದು ಸಭೆ ನಡೆದಿದೆ.

ಜಿಲ್ಲೆಯಲ್ಲಿ ತನ್ನದೇ ಮತದಾರರನ್ನು ಹೊಂದಿರುವ ಬಿಎಸ್ ಪಿ ಕೂಡ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದು ಸುತ್ತಿನ‌ ಕಾರ್ಯಕರ್ತರ ಸಭೆಯನ್ನು ಪೂರ್ಣಗೊಳಿಸಿದೆ. ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಅವರೇ ಎಲ್ಲ ಕ್ಷೇತ್ರಗಳಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ.

ತಳ ಮಟ್ಟದಲ್ಲಿ ಪಕ್ಷ ಸಂಘಟನೆ

ಗ್ರಾಮ‌ ಪಂಚಾಯಿತಿ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಲಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿಯನ್ನು ಹೊಂದಿದ್ದೇವೆ. ತಳ ಮಟ್ಟದಲ್ಲಿ ಪಕ್ಷ ಸಂಘಟಿಸುವ ಕೆಲಸಕ್ಕೆ ಒತ್ತು ನೀಡುತ್ತಿದ್ದೇವೆ. ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಸಭೆಗಳನ್ನು ನಡೆಸಲಾಗಿದೆ. ವಿವಿಧ ಮೋರ್ಚಾಗಳ ಸಭೆಯನ್ನೂ ನಡೆಸಲಾಗುತ್ತಿದೆ. ಒಮ್ಮತದಿಂದ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ.

-ಮಂಗಲ ಶಿವಕುಮಾರ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ‌ ಕಾರ್ಯದರ್ಶಿ

ಜಿ.ಪಂ. ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ

ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ. ಎಲ್ಲ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದೇವೆ. ಹರವೆಯಲ್ಲಿ ಈಗಾಗಲೇ ನಡೆದಿದೆ. ಮುಂದಿನ ಸಭೆ ಬೇಗೂರಿನಲ್ಲಿ‌ ನಡೆಯಲಿದೆ. ಗ್ರಾಮ‌ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ.

–ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

****

ಬೆಂಬಲಿಗರನ್ನು ಕಣಕ್ಕಿಳಿಸುತ್ತೇವೆ

ನಮ್ಮ ಪಕ್ಷದ ಬೆಂಬಲಿಗರು ಕೂಡ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುತ್ತಿದೆ. ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಭೆ ನಡೆದಿದೆ. ತಾಲ್ಲೂಕು ಮಟ್ಟ ಹಾಗೂ ಗ್ರಾಮ‌ ಪಂಚಾಯಿತಿ ಮಟ್ಟದಲ್ಲೂ ಕಾರ್ಯಕರ್ತರ ಸಭೆ ನಡೆಸುತ್ತೇವೆ

ಎನ್.ನಾಗಯ್ಯ, ಬಿಎಸ್ ಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT