ಭಾನುವಾರ, ಜನವರಿ 17, 2021
26 °C
ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಹನೂರಿನಿಂದ ಕೌದಳ್ಳಿವರೆಗೆ ನಡೆದಿದ್ದ ರಸ್ತೆ ದುರಸ್ತಿ ಕಾಮಗಾರಿ

ಮಹದೇಶ್ವರ ಬೆಟ್ಟ: ಸಿ.ಎಂ. ಹೋಗಾಯ್ತು, ತೇಪೆಯೂ ಕಿತ್ತು ಬಂದಾಯ್ತು!

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲೋಕೋಪ‍ಯೋಗಿ ಇಲಾಖೆಯು ಹನೂರಿನಿಂದ ಕೌದಳ್ಳಿವರೆಗೆ ಕೈಗೊಂಡಿದ್ದ ರಸ್ತೆ ಗುಂಡಿ ಮುಚ್ಚುವ ಕೆಲಸ ನೀರಿನಲ್ಲಿ ಹೋಮ ಮಾಡಿದಂತಾಗಿದೆ. 

ಮುಖ್ಯಮಂತ್ರಿ ಅವರು ಬೆಂಗಳೂರಿಗೆ ತೆರಳುತ್ತಿದ್ದಂತೆ, ರಸ್ತೆಯ ಗುಂಡಿಗಳಿಗೆ ಹಾಕಿದ್ದ ತೇಪೆ ಕಿತ್ತು ಬಂದಿದೆ. ಬಹುತೇಕ ಕಡೆಗಳಲ್ಲಿ ಮೊದಲಿನ ರೀತಿಯ ಹೊಂಡವೇ ಕಾಣುತ್ತಿದೆ. 10 ದಿನಗಳ ಕಾಲವೂ ರಸ್ತೆ ಸುಸ್ಥಿತಿ ಇರಲಿಲ್ಲ. ಕಳಪೆ ಕಾಮಗಾರಿ ನಡೆಸಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. 

ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪ‍ನೆಗಾಗಿ ಬಿ.ಎಸ್‌.ಯಡಿಯೂರಪ್ಪ ಅವರು ನವೆಂಬರ್‌ 25 ಹಾಗೂ 26ರಂದು ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರು. ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಅದರಲ್ಲೇ ತೆರಳುವುದು ಎಂಬುದು ನಿಗದಿಯಾಗಿದ್ದರೂ, ಎರಡು ದಿನಗಳ ಅವಧಿಯಲ್ಲಿ ಗಣ್ಯರು ರಸ್ತೆಯಲ್ಲಿ ಓಡಾಡುವುದರಿಂದ ರಸ್ತೆ ಗುಂಡಿಯನ್ನು ಮುಚ್ಚುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿತ್ತು. ಮುಖ್ಯಮಂತ್ರಿ ಭೇಟಿಗೆ 10 ದಿನಗಳ ಹಿಂದೆ ಹನೂರು ಹಾಗೂ ಕೌದಳ್ಳಿ ನಡುವಿನ ರಸ್ತೆಯಲ್ಲಿದ್ದ ಗುಂಡಿಗಳನ್ನು ಜಲ್ಲಿ, ಡಾಂಬರು ಹಾಕಿ ಮುಚ್ಚಲಾಗಿತ್ತು. 

ಆದಾಗಿ ವಾರದಲ್ಲಿ ಆ ಭಾಗದಲ್ಲಿ ಮಳೆಯಾಗಿತ್ತು. ಮುಖ್ಯಮಂತ್ರಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲೂ ಬೆಟ್ಟದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿತ್ತು. ಆ ಸಮಯಕ್ಕಾಲೇ ಹಾಕಿದ್ದ ತೇಪೆ ಕಿತ್ತು ಬರಲು ಆರಂಭಿಸಿತ್ತು. ಪ್ರತಿಕೂಲ ಹವಾಮಾನದ ಕಾರಣದಿಂದ ಮುಖ್ಯಮಂತ್ರಿ ಅವರಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಲು ಆಗಿರಲಿಲ್ಲ. ಅವರು ರಸ್ತೆ ಮಾರ್ಗದಲ್ಲೇ ಬೆಂಗಳೂರಿಗೆ ಹೋಗಿದ್ದರು. ಅವರು ಹೋದ ಮೂರು ದಿನಗಳಲ್ಲಿ ಬಹುತೇಕ ಎಲ್ಲ ಗುಂಡಿಗಳು ಮೊದಲಿನ ಸ್ಥಿತಿ ತಲುಪಿವೆ. ಕೆಲವು ಕಡೆಗಳಲ್ಲಿ ದುರಸ್ತಿ ಮಾಡಿರುವ ಕುರುಹೂ ಕಾಣಿಸುತ್ತಿಲ್ಲ!

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಡಾಂಬರು ಹಾಕಿ ಗುಂಡಿಗಳನ್ನು ಮುಚ್ಚಿದ್ದು ಮಂತ್ರಿಗಳಿಗಾಗಿಯೇ ವಿನಾ ಜನಸಾಮಾನ್ಯರಿಗಲ್ಲ ಎಂದು ತಾಲ್ಲೂಕಿನ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಮಧುವನಹಳ್ಳಿಯಿಂದ ಕೆ–ಶಿಪ್‌ನವರು ರಸ್ತೆ ಕಾಮಗಾರಿ ಮಾಡುತ್ತಿರುವುದರಿಂದ ಗುಂಡಿ ಮುಚ್ಚುವ ಕೆಲಸವನ್ನೂ ಅವರಿಗೆ ವಹಿಸಲಾಗಿತ್ತು. ಪುನಃ ಗುಂಡಿಗಳಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕರೆದು ಪುನಃ ಗುಂಡಿ ಮುಚ್ಚಲು ಸೂಚಿಸಲಾಗುವುದು’ ಎಂದು ಕೊಳ್ಳೇಗಾಲ ವಿಭಾಗದ ಲೋಕೋಪಯೋಗಿ ಇಲಾಖೆ ಎಇಇ ರಾಮಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹನೂರಿನಿಂದ ಕೌದಳ್ಳಿ ಮಾರ್ಗವಾಗಿ ಹೋಗುತ್ತಿದ್ದಂತೆ ಕಳಪೆ ಕಾಮಗಾರಿಯ ನಗ್ನದರ್ಶನವಾಗುತ್ತದೆ. ಕೋವಿಡ್‌ನಿಂದ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಬೆಟ್ಟದಲ್ಲಿ ಪುನಃ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಈಗ ವಾಹನಗಳ ಓಡಾಟ ಹೆಚ್ಚಾಗಿದೆ.ಲೋಕೋಪಯೋಗಿ ಇಲಾಖೆ ಮಾಡಿರುವ ತೇಪೆ ಹಾಕುವ ಕಾಮಗಾರಿ ಮೂರ್ನಾಲ್ಕು ದಿನಗಳಲ್ಲಿ ಕಿತ್ತು ಬಂದಿದೆ. ಎರಡು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ರಸ್ತೆ ಇನ್ನೆಷ್ಟು ಅಧ್ವಾನವಾಗಲಿದೆಯೋ’ ಎಂದು ಪಟ್ಟಣದ ಶಿವಕುಮಾರ್ ಅವರು ಹೇಳಿದರು. 

ತೇಪೆಗೆ ₹6.75 ಲಕ್ಷ ವೆಚ್ಚ

ಮಹದೇಶ್ವರ ಬೆಟ್ಟದ ಲೋಕೋಪಯೋಗಿ ಉಪ ವಿಭಾಗದ ವತಿಯಿಂದ ಹನೂರಿನಿಂದ ತಾಳಬೆಟ್ಟದವರೆಗೆ ಮೂರು ಹಂತದಲ್ಲಿ ತೇಪೆ ಹಾಕುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಹನೂರು-ಪಾಲಾರ್ ರೋಡ್ (ಎಂಡಿಆರ್), ರಾಜ್ಯ ಹೆದ್ದಾರಿ 79 ಯೋಜನೆಯಡಿ ಹನೂರಿನಿಂದ ರಾಮಾಪುರ ಮಾರ್ಗವಾಗಿ ತಾಳಬೆಟ್ಟದವರೆಗೆ ಮತ್ತು ತಾಳಬೆಟ್ಟದಿಂದ ಪಾಲಾರ್‌ವರೆಗೆ ತೇಪೆ ಹಾಕುವ ಕಾಮಗಾರಿಯನ್ನು ನಡೆಸಲಾಗುತ್ತಿದೆ.

‘ಮೊದಲನೇ ಹಂತವಾಗಿ (ಈಗ ಆಗಿರುವ ಕಾಮಗಾರಿ) ಹನೂರು-ಕೌದಳ್ಳಿವರೆಗೆ 16 ಕಿ.ಮೀ ರಸ್ತೆಗೆ ₹6.75 ಲಕ್ಷ ಖರ್ಚಾಗಿದೆ. ಈಗ ನಡೆದಿರುವ ಕಾಮಗಾರಿ ಕಿತ್ತು ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಮಳೆ ಬಂದು ಹಾಳಾಗಿದ್ದರೆ ಪುನಃ ಸರಿಪಡಿಸಲಾಗುವುದು. ಜನವರಿ ವೇಳೆ ಮತ್ತೊಮ್ಮ ನಿರ್ವಹಣೆ ಮಾಡಲಾಗುವುದು’ ಎಂದು ಮಲೆಮಹದೇಶ್ವರ ಬೆಟ್ಟ ಲೋಕೋಪಯೋಗಿ ಇಲಾಖೆ ಉಪವಿಭಾಗದ ಇಂಜಿನಿಯರ್ ತನೂಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು