ಗುರುವಾರ , ಅಕ್ಟೋಬರ್ 6, 2022
22 °C
ಮಾತೃವಂದನಾ ಸಪ್ತಾಹ ಹಾಗೂ ಪೋಷಣಾ ಮಾಸಾಚರಣೆ ಕಾರ್ಯಕ್ರಮ

ಅಪೌಷ್ಟಿಕತೆ ನಿವಾರಣೆಗೆ ಪೋಷಣ್‌ ಅಗತ್ಯ: ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಬಾಣಂತಿ ಹಾಗೂ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರ ಮಾಡಲು ಪೋಷಣ್‌ ಅಭಿಯಾನದಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಶುಕ್ರವಾರ ತಿಳಿಸಿದರು. 

ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆ.ಡಿ.ಪಿ. ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ನಡೆದ ಮಾತೃವಂದನಾ ಸಪ್ತಾಹ ಹಾಗೂ ಪೋಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗರ್ಭಿಣಿ ಸ್ತ್ರೀ, ಬಾಣಂತಿ ಹಾಗೂ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರವಿಡಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಇಂತಹ ಜನೋಪಯೋಗಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು’ ಎಂದರು.

ಹಿರಿಯ ಸಿವಿಲ್ ನ್ಯಾಯಧೀಶ ಹೊನ್ನಸ್ವಾಮಿ ಮಾತನಾಡಿ, ‘ಮಾತೃವಂದನಾ ಸಪ್ತಾಹ ಹಾಗೂ ಪೋಷಣಾ ಮಾಸಾಚರಣೆ ಕಾರ್ಯಕ್ರಮ ಕೇವಲ ಮಾಸಾಚರಣೆಗಷ್ಟೇ ಸೀಮಿತವಾಗಬಾರದು.  ವರ್ಷ ಪೂರ್ತಿ ಬಾಣಂತಿ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ಆಗಬೇಕು. ಪೌಷ್ಟಿಕ ಆಹಾರದ ಬಳಕೆ, ಉಪಯೋಗದ ಕುರಿತು ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು’ ಎಂದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ, ‘ತಾಯಿ ಮತ್ತು ಮಗುವಿನ ಮರಣವನ್ನು ತಡೆಗಟ್ಟುವುದು ಮಾತೃವಂದನಾ ಸಪ್ತಾಹ ಹಾಗೂ ಪೋಷಣಾ ಮಾಸಾಚರಣೆಯ ಪ್ರಮುಖ ಉದ್ದೇಶ. ಗರ್ಭಿಣಿ ಸ್ತ್ರೀಯರನ್ನು ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಸುಲಭ ಹೆರಿಗೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಗೀತಾಲಕ್ಷ್ಮಿ, ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ಯೋಗಾನಂದ, ವಕೀಲರಾದ ಮಂಜುಳ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಆಯ್ದ ಗರ್ಭಿಣಿಯರಿಗೆ ಸಾಂಕೇತಿಕವಾಗಿ ಸೀಮಂತ ಕಾರ್ಯವನ್ನು ನೆರವೇರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಗಣ್ಯರಿಂದ ಪೋಷಣ್ ಅಭಿಯಾನ ವಾಹನಕ್ಕೆ ಚಾಲನೆ ದೊರೆಯಿತು.

ಜಿಲ್ಲಾಡಳಿತ ಭವನದಿಂದ ಹೊರಟ ವಾಹನವು ರಾಮಸಮುದ್ರ, ಚೆನ್ನೀಪುರದಮೋಳೆ, ಉಪ್ಪಾರ ಬಡಾವಣೆ, ರೈಲ್ವೆ ಬಡಾವಣೆ, ಸೋಮವಾರಪೇಟೆ, ಮಲ್ಲಯ್ಯನಪುರ, ಶಿವಪುರ ಹಾಗೂ ಉಡಿಗಾಲ ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.

ತಿಂಗಳು ಪೂರ್ತಿ ಅರಿವು ಕಾರ್ಯಕ್ರಮ: ಸಿಇಒ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಮಾತನಾಡಿ, ‘ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಕಾಲ ಕಾಲಕ್ಕೆ ಗರ್ಭಿಣಿ ಸ್ತ್ರೀಯರನ್ನು ತಪಾಸಣೆಗೊಳಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆ ತಡೆಗಟ್ಟಬೇಕು’ ಎಂದರು.

‘ಪೋಷಣ್‌ ಮಾಸಾಚರಣೆಯು ಸೆ.1ರಿಂದಲೇ ಆರಂಭವಾಗಿದ್ದು, 30ರವರೆಗೂ ನಡೆಯಲಿದೆ.  ಈ ಕಾರ್ಯಕ್ರಮದಲ್ಲಿ ಆರೋಗ್ಯ, ಶಿಕ್ಷಣ, ಮಕ್ಕಳ ಪೋಷಣೆ, ಕಲಿಕೆ, ಜಲಸಂರಕ್ಷಣೆ, ಬುಡಕಟ್ಟು ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸಾಂಪ್ರದಾಯಿಕ ಆಹಾರ ಪದ್ದತಿ ಸಂರಕ್ಷಣೆ ಹಾಗೂ ಸುಸ್ಥಿರತೆ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು