ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ತೇವಾಂಶ: ಕೋಳಿ ಸಾಕಣೆದಾರರಿಗೆ ಸಂಕಷ್ಟ

Last Updated 13 ಮೇ 2022, 16:14 IST
ಅಕ್ಷರ ಗಾತ್ರ

ಯಳಂದೂರು:ತಾಲ್ಲೂಕಿನಲ್ಲಿ ಶುಕ್ರವಾರವೂ ಮಳೆಯ ಆರ್ಭಟ ಮುಂದುವರಿದಿದೆ. ತುಂತುರು ಜೊತೆಗೂಡಿದ ಶೀತ ಗಾಳಿ, ಜನ ಜಾನುವಾರುಗಳಿಗೂ ನಡುಕ ತಂದಿತ್ತಿದೆ. ಬ್ರಾಯ್ಲರ್‌ ಕೋಳಿ ಸಾಕಣೆದಾರರು ಹೆಚ್ಚಾದ ತೇವಾಂಶದಿಂದ ಕಂಗೆಟ್ಟಿದ್ದಾರೆ.

ಮಾಂಸ ಮತ್ತು ಮೊಟ್ಟೆಗಾಗಿ ಬ್ರಾಯ್ಲರ್ ಕೋಳಿ ಸಾಕಲಾಗುತ್ತಿದ್ದು, ಫಾರ್ಮ್‌ ಮಾಲೀಕರಲ್ಲಿ ಕೆಲವರು ಚಿಕನ್ ಕಂಪನಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕೋಳಿ ಪೂರೈಸುತ್ತಾರೆ. ಕೆಲವೆಡೆ ಮೊಟ್ಟೆಗಾಗಿ ಕುಕ್ಕಟೋದ್ಯಮ ನಂಬಿಕೊಂಡವರು ಇದ್ದಾರೆ. ಅತಿಯಾದ ಉಷ್ಣಾಂಶ ಇಲ್ಲವೇ ಶೀತವನ್ನು ಕೋಳಿ ಸಹಿಸದು. ಈ ಬಾರಿ ಮೇ ತಿಂಗಳ ಮಧ್ಯಭಾಗದಲ್ಲೇ ವರ್ಷಧಾರೆ ಆಗುತ್ತಿದ್ದು, ತಾಪಮಾನ ನಿರೀಕ್ಷೆಗೂ ಮೀರಿ ಕುಸಿತವಾಗಿದೆ. ಇದು ಕೋಳಿಗಳ ಬೆಳವಣಿಗೆ ಮತ್ತು ಸಾಕಣೆಗೆ ತೊಂದರೆಯಾಗಿ ಪರಿಣಮಿಸಿದೆ.

‘ಒಂದು ದಿನದ ಮರಿಯನ್ನು ಕೊಂಡು ಸಾಕಣೆ ಮಾಡುತ್ತೇವೆ. ಇವುಗಳ ಪೋಷಣೆಗೆ 30-35 ಡಿಗ್ರಿ ತಾಪಮಾನ ಸಾಕು. ಉತ್ತಮವಾಗಿ ಬೆಳೆದ ಕೋಳಿಗಳನ್ನು 45-50 ದಿನಗಳಲ್ಲಿ ಕಂಪನಿಗಳಿಗೆ ಒದಗಿಸಬಹುದು. ಆದರೆ, ಉಷ್ಣಾಂಶ 20 ಡಿಗ್ರಿ ಆಸುಪಾಸಿನಲ್ಲಿ ಇದೆ. ಇದರಿಂದ ಕೋಳಿಗಳು ಹಲವು ಬಾಧೆಗೆ ಸಿಲುಕುತ್ತವೆ. ಸಣ್ಣ ಮರಿಗಳು ಶೀತ ಹವಾಮಾನದಲ್ಲಿ ಬದುಕುವುದು ಕಷ್ಟ. ಇಂತಹ ಸಮಯ ಕೋಳಿ ಶೆಡ್‌ಗಳಲ್ಲಿ ತಾಪಮಾನ ಹೆಚ್ಚಿಸಲು ದಿನವಿಡೀ ಪ್ರಾಯಾಸ ಪಡಬೇಕು’ ಎಂದು ಮದ್ದೂರು ವಿಶ್ವನಾಥ್ ಹೇಳಿದರು.

ಮಳೆ, ಗಾಳಿ ಹೆಚ್ಚಾದರೆ ನಿರ್ವಹಣಾ ವೆಚ್ಚವೂ ಏರುತ್ತದೆ. ಲಾಭಾಂಶ ಕುಸಿಯುತ್ತದೆ. ಕಂಪನಿಗಳು ಗುಣಮಟ್ಟದ ಕೋಳಿ ಪೂರೈಕೆಗೆ ಬೇಡಿಕೆ ಸಲ್ಲಿಸುತ್ತವೆ ಎಂದರು.

ಶೆಡ್ ಸಂರಕ್ಷಿಸಿ: ‘ಶೆಡ್‌ಗಳಲ್ಲಿ ಆಧುನಿಕ ವಿಧಾನವನ್ನು ಅಳವಡಿಸಿಕೊಂಡು ಸಾಕಣೆದಾರರು ಕೋಳಿ ಮರಿಗಳನ್ನು ರಕ್ಷಿಸಬೇಕು. ಶೆಡ್‌ಗಳಲ್ಲಿ ಉಷ್ಣಾಂಶ ಹೆಚ್ಚಿಸಲು ಅತಿನೆರಳೆವಿದ್ಯುತ್ ಬಲ್ಬ್ ಬಳಸಬಹುದು. ಜಾನುವಾರು ಸಾಕಣೆದಾರರು ಕೊಟ್ಟಿಗೆಗಳಲ್ಲಿ ಗಾಳಿ, ಬೆಳಕು ಬರುವಂತೆ ಸಿದ್ಧತೆ ಮಾಡಬೇಕು. ಮಳೆ ನೀರು ತೊಟ್ಟಿಕ್ಕದಂತೆ ಎಚ್ಚರವಹಿಸಬೇಕು’ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಸುನಾದರಾಜ್ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT