ಶುಕ್ರವಾರ, ಸೆಪ್ಟೆಂಬರ್ 17, 2021
22 °C
ವಾರ್ಡ್‌ ಸದಸ್ಯ ಮಹೇಶ್‌ ಪ್ರಯತ್ನದ ಫಲ, ಎಂಟು ವಿದ್ಯುತ್‌ ಕಂಬಗಳ ಅಳವಡಿಕೆ

ಚಾಮರಾಜನಗರ: ಪೌರಕಾರ್ಮಿಕರ ಕಾಲೊನಿಗೆ ಬಂದು ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪ್ರತಿ ದಿನ ರಾತ್ರಿ ಕತ್ತಲೆಯನ್ನೇ ಮೈಹೊದ್ದು ಮಲಗುತ್ತಿದ್ದ ನಗರದ ಪೌರಕಾರ್ಮಿಕರ ಕಾಲೊನಿಯಲ್ಲಿ ಈಗ ಬೆಳಕು ಮೂಡಿದೆ. 

75ನೇ ಸ್ವಾತಂತ್ರ್ಯೋತ್ಸವದ ಹಿಂದಿನ ದಿನ ಕಾಲೊನಿಯ ಬೀದಿಗಳಿಗೆ ಹೊಸದಾಗಿ ವಿದ್ಯುತ್‌ ದೀಪಗಳನ್ನು ಅಳವಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕೆ ಕಾರಣವಾಗಿದ್ದು, ಸ್ಥಳೀಯ 9ನೇ ವಾರ್ಡ್‌ ಸದಸ್ಯ, ಎಸ್‌ಡಿಪಿಐನ ಎಂ.ಮಹೇಶ್‌ ಅವರ ನಿರಂತರ ಪ್ರಯತ್ನ.

ಪೌರಕಾರ್ಮಿಕರ ಕಾಲೊನಿಯಲ್ಲಿ 92 ಕುಟುಂಬಗಳು ವಾಸ ಇವೆ. ನಾಲ್ಕು ಬೀದಿಗಳು ಇಲ್ಲಿದ್ದು, ಕೇವಲ ಎರಡು ವಿದ್ಯುತ್‌ ಕಂಬಗಳಿದ್ದವು. ಎಲ್ಲ ಮನೆಗಳಿಗೂ ಈ ಎರಡು ಕಂಬಗಳಿಂದಲೇ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿತ್ತು. 

ಪೌರಕಾರ್ಮಿಕರ ಮನೆಯೊಳಗೆ ಏನೋ ಬೆಳಕು ಇತ್ತು. ಆದರೆ, ಹೊರಗಡೆ ಬೀದಿಗಳಲ್ಲಿ ಬೆಳಕು ಇರಲಿಲ್ಲ. ಪುಟ್ಟ ಪುಟ್ಟ ಮನೆಗಳಾಗಿರುವುದರಿಂದ ಮನೆಯೊಳಗಿನ ಬೆಳಕು ಹೊರಗಡೆ ಬರುತ್ತಿರಲಿಲ್ಲ. ಇದರಿಂದಾಗಿ ಪೌರಕಾರ್ಮಿಕರು ರಾತ್ರಿ ಹೊತ್ತಲ್ಲಿ ಹೊರಗಡೆ ಓಡಾಡಲು ಭಯ ಪಡುತ್ತಿದ್ದರು. ಬೀದಿಗಳಿಗೆ ವಿದ್ಯುತ್‌ ಕಂಬಗಳನ್ನು ಅಳವಡಿಸಿ ದೀಪಗಳನ್ನು ಅಳವಡಿಸಬೇಕು ಎಂಬುದು ಅವರ ಬಹು ದಿನಗಳ ಬೇಡಿಕೆಯಾಗಿತ್ತು. 

9ನೇ ವಾರ್ಡ್‌ನ ಸದಸ್ಯರಾಗಿ ಆಯ್ಕೆಯಾಗಿರುವ ಮಹೇಶ್‌ ಅವರಿಗೆ ಈ ಸಮಸ್ಯೆ ಅರಿವಿಗೆ ಬಂದ ತಕ್ಷಣ, ಕಾಲೊನಿಗೆ ಹೊಸ ವಿದ್ಯುತ್‌ ಕಂಬಗಳು ಹಾಗೂ ದೀಪಗಳ ಅಳವಡಿಕೆಗೆ ಪ್ರಯತ್ನ ಆರಂಭಿಸಿದರು. ಸಫಾರಿ ಕರ್ಮಾಚಾರಿ ಆಯೋಗದ ವಿಚಕ್ಷಣ ದಳದ ಸದಸ್ಯರ ಜೊತೆ ಸೇರಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮಕ್ಕೆ (ಸೆಸ್ಕ್‌) ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೇ ಕಂಬಗಳು ಅಳವಡಿಸಿದ ನಂತರ ಅಲ್ಲಿಗೆ ಬೀದಿ ದೀಪ ಅಳವಡಿಸುವ ಸಂಬಂಧ ನಗರಸಭೆ ಆಯುಕ್ತರು ಹಾಗೂ ಅಧ್ಯಕ್ಷರಿಗೆ ಮನವಿ ಮಾಡಿದ್ದರು. 

ಈ ಪ್ರಯತ್ನಗಳಿಗೆ ಇತ್ತೀಚೆಗೆ ಫಲ ದೊರಕಿದ್ದು, ಸೆಸ್ಕ್ ಕಾಲೊನಿಯ ನಾಲ್ಕು ಬೀದಿಗಳಲ್ಲಿ ಎಂಟು ಕಂಬಗಳನ್ನು ಹಾಕಿದೆ. ನಗರಸಭೆಯು ಅವುಗಳಿಗೆ ಬೀದಿ ದೀಪಗಳನ್ನು ಅಳವಡಿಸಿದೆ.

ಅನುಕೂಲವಾಗಿದೆ: ಕಾಲೊನಿಯ ಬೀದಿಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಿರುವುದರ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಚಿಕೊಂಡ ಸ್ಥಳೀಯ ನಿವಾಸಿ ಅಮುದಾ ಅವರು, ‘ಹುಟ್ಟಿದಾಗಿನಿಂದ ನಮ್ಮ ಬೀದಿಗಳಿಗೆ ಬೆಳಕು ಇರಲಿಲ್ಲ. ರಾತ್ರಿ ಹೊರಗಡೆ ಬರುವುದಕ್ಕೇ ಭಯವಾಗುತ್ತಿತ್ತು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ರಾತ್ರಿ ಎಂಟು ಗಂಟೆಗೆ ಮನೆಯೊಳಕ್ಕೆ ಸೇರುತ್ತಿದ್ದರು. ಆ ಮೇಲೆ ಯಾರೂ ಹೊರಗಡೆ ಹೋಗುತ್ತಿರಲಿಲ್ಲ. ಕಂಬಗಳನ್ನು ಹಾಕಿ ಬೀದಿ ದೀಪ ಅಳವಡಿಸಿರುವುದರಿಂದ ನಮಗೆ ತುಂಬಾ ಅನುಕೂಲವಾಗಿದೆ. ಮಕ್ಕಳೆಲ್ಲ ರಾತ್ರಿ 10 ಗಂಟೆಯವರೆಗೂ ಹೊರಗಡೆ ಇರುತ್ತಾರೆ. ಓಡಾಡುವುದಕ್ಕೂ ಸುಲಭವಾಗಿದೆ’ ಎಂದರು. 

‘ವಾರ್ಡ್‌ ಸದಸ್ಯ ಮಹೇಶ್‌ ಅವರು ನಮ್ಮ ಕಷ್ಟಗಳನ್ನು ಅರಿತು ಬೀದಿ ದೀಪದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ವಾರ್ಡ್‌ನಲ್ಲಿ ಉತ್ತಮ ಕೆಲಸಗಳಾಗುತ್ತಿವೆ’ ಎಂದರು. 

‘ಕರ್ತವ್ಯ ನಿರ್ವಹಿಸಿದ ತೃಪ್ತಿ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾರ್ಡ್‌ಸ ಸದಸ್ಯ ಎಂ.ಮಹೇಶ್‌ ಅವರು, ‘ಪೌರ ಕಾರ್ಮಿಕರ ಕಾಲೊನಿಯಲ್ಲಿ ಕೇವಲ ಎರಡು ವಿದ್ಯುತ್ ಕಂಬಗಳು ಮಾತ್ರ ಇತ್ತು. ರಾತ್ರಿ ಹೊತ್ತು ಇಡೀ ಕಾಲೊನಿಗೆ ಕತ್ತಲೆ ಆವರಿಸುತ್ತಿತ್ತು. ನಿವಾಸಿಗಳಿಗೆ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಸೆಸ್ಕ್‌ಗೆ ಮನವಿ ಮಾಡಿ, ನಿರಂತರ ಪ್ರಯತ್ನದ ಫಲವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ನಗರಸಭೆಯ ಅಧ್ಯಕ್ಷರು ಹಾಗೂ ಆಯುಕ್ತರ ಸಹಕಾರದೊಂದಿಗೆ ಬೀದಿ ದೀಪಗಳನ್ನು ಅಳವಡಿಸಿ ಕಾಲೊನಿಗೆ ಬೆಳಕು ನೀಡಲಾಗಿದೆ. ಒಬ್ಬ ಜನಸೇವಕನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಿದ ತೃಪ್ತಿ ಹಾಗೂ ಹೆಮ್ಮೆ ಇದೆ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು