ಭಾನುವಾರ, ಸೆಪ್ಟೆಂಬರ್ 19, 2021
28 °C

ಮಹದೇಶ್ವರ ಬೆಟ್ಟ: ಪ್ರಾಧಿಕಾರದ ಸಿಬ್ಬಂದಿ ವಿರುದ್ಧ ಪೌರಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿಯೊಬ್ಬರ ವಿರುದ್ಧ ಪೌರಕಾರ್ಮಿಕರು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಶುಕ್ರವಾರ ದಿಢೀರ್‌ ಪ್ರತಿಭಟನೆ ನಡೆಸಿದರು. 

ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ಪ್ರಾಧಿಕಾರದ ಕಾರ್ಯಧರ್ಶಿ ಜಯವಿಭವಸ್ವಾಮಿ ಅವರು ಶುಕ್ರವಾರ ಬೆಳಿಗ್ಗೆ ಪೌರ ಕಾರ್ಮಿಕರ ಕಾಲೊನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಜೊತೆಯಲ್ಲಿದ್ದ ಬೆರಳಚ್ಚುಗಾರ (ಟೈಪಿಸ್ಟ್‌) ನಾಗರಾಜು ಎಂಬುವವರು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜು ಹಾಗೂ ಪಳನಿ ಎಂಬುವವರ ಜಾತಿ ನಿಂದನೆ ಮಾಡಿದ್ದಾರೆ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 

ಪೌರಕಾರ್ಮಿಕರೊಂದಿಗೆ ಜೊತೆಗೂಡಿದ ನೌಕರರ ಸಂಘದ ಪದಾಧಿಕಾರಿಗಳು ಕೂಡ ಪ್ರತಿಭಟನೆಯಲ್ಲಿ ಭಾಗಿಯಾದರು. ನಾಗರಾಜು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. 

ಪ್ರಾಧಿಕಾರದ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಕ್ಕಾಗಿ ನೌಕರರು ಕಾಯುತ್ತಿದ್ದರು. ಅಧಿಕಾರಿಗಳು ಬಾರದೇ ಇದ್ದುದರಿಂದ ಕೋಪಗೊಂಡ ಪೌರ ಕಾರ್ಮಿಕರು, ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಚೇರಿ ಮುಂಭಾಗದಲ್ಲಿದ ಕಸದ ಡಬ್ಬದಲ್ಲಿದ್ದ ಕಸವನ್ನು ಚೆಲ್ಲಿ ಚೆಲ್ಲಾಪಿಲ್ಲಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. 

ಪೌರ ಕಾರ್ಮಿಕರಾದ ರಾಜು ಹಾಗೂ ಗೋಪಾಲ್ ಅವರು ಮಾತನಾಡಿ, ‘ಪ್ರಾಧಿಕಾರದಲ್ಲಿ ಹಲವು ವರ್ಷಗಳಿಂದ ಬೆರಳಚ್ಚುಗಾರರಾಗಿರುವ ನಾಗರಾಜು ಅವರು ನೌಕರರ ಜೊತೆ ಮನ ಬಂದಂತೆ ವರ್ತಿಸುತ್ತಿದ್ದು, ಪೌರ ಕಾರ್ಮಿಕರನ್ನು ಕೀಳುಭಾವನೆಯಿಂದಲೇ ನೋಡುತಿದ್ದಾರೆ. ಈ ವಿಚಾರ ಪ್ರಾಧಿಕಾರ ಕಾರ್ಯದರ್ಶಿಯವರಿಗೆ ತಿಳಿದಿದ್ದರೂಕ್ರಮ ತೆಗೆದುಕೊಳ್ಳುತ್ತಿಲ್ಲ. ರಜಾ ಸಂಧರ್ಭದಲ್ಲಿ ಮತ್ತು ಪಿಂಚಣಿ ಇಎಸ್‌ಐ ಅರ್ಜಿಗಳನ್ನು ಭರ್ತಿ ಮಾಡಲು ಲಂಚವಾಗಿ ₹500, ₹1000 ಹಣವನ್ನು ನಾಗರಾಜು ಅವರು ಪಡೆಯುತ್ತಿದ್ದಾರೆ. ಇದರಿಂದ ನೌಕರರು ಮಾನಸಿಕವಾಗಿ ನೊಂದಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡುತ್ತೇವೆ’ ಎಂದು ಎಚ್ಚರಿಸಿದರು. 

ಪ್ರತಿಭಟನೆ ಕಾವೇರುತಿದ್ದಂತೆಯೇ ಮಧ್ಯ ಪ್ರವೇಶಿಸಿದ ಪೋಲೀಸರು ಪ್ರತಿಭಟನಾ ನಿರತರನ್ನು ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಈ ವಿಚಾರವನ್ನು ಪ್ರಾಧಿಕಾರದ ಸಭೆಯಲ್ಲಿಟ್ಟು ನಂತರ ಕ್ರಮ ಕೈಗೊಳ್ಳಲಾಗುವುದು ಎಂಬ ಅವರು ಭರವಸೆ ನೀಡಿದ ಬಳಿಕ ಕಾರ್ಮಿಕರು ಪ್ರತಿಭಟನೆ ವಾಪಸ್‌ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.