ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಮಕ್ಕಳ ಪ್ರಾಯೋಗಿಕ ಕೃಷಿ ಕಲಿಕೆ

ಹನೂರು: ಬಂಡಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು, ರೈತರ ಸಂವಾದ
Last Updated 22 ಜುಲೈ 2022, 20:00 IST
ಅಕ್ಷರ ಗಾತ್ರ

ಹನೂರು: ಬಾಲ್ಯದಿಂದಲೇ ಮಕ್ಕಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ರೈತರ ಪಾತ್ರದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡುವ ಉದ್ದೇಶದಿಂದ ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹೊಸ ಪ್ರಯೋಗ ನಡೆಸಿತ್ತು.

ವಿದ್ಯಾರ್ಥಿಗಳು ಹಾಗೂ ರೈತರ ನಡುವೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

8ನೇ ತರಗತಿಯ ವಿಜ್ಞಾನ ವಿಷಯದಲ್ಲಿರುವ ‘ಬೆಳೆಯ ಉತ್ಪಾದನೆ ಹಾಗೂ ನಿರ್ವಹಣೆ’ ಎಂಬ ವಿಷಯದ ಬಗ್ಗೆ ಸಮಗ್ರವಾಗಿ ತಿಳಿಸಿಕೊಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೃಷಿಯ ಬಗ್ಗೆ ತಮಗಿರುವ ಗೊಂದಲಗಳನ್ನು ನಿವಾರಿಸಿಕೊಂಡರು.

ಶಾಲೆಗೆ ಹೊಂದಿಕೊಂಡಂತೆ ಇರುವ ಜಮೀನಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ರೈತರು ಕೂಡ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಅವರಲ್ಲಿರುವ ಗೊಂದಲಗಳನ್ನು ನಿವಾರಿಸಿದರು.

ಜಮೀನಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ವಿವಿಧ ಫಸಲು ಹಾಗೂ ಪಶು ಸಂಗೋಪನೆಯ ಬಗ್ಗೆ ಸವಿವರವಾಗಿ ಮಾಹಿತಿ ಪಡೆದರು. ಕೃಷಿ ಪದ್ಧತಿ, ರಸಗೊಬ್ಬರ, ಸಾವಯವ ಗೊಬ್ಬರ, ಕಳೆಗಳು ಹಾಗೂ ಕ್ರಿಮಿನಾಶಕ ಸಿಂಪಡಣೆಯ ಬಗ್ಗೆ ತಿಳಿದುಕೊಂಡರು.

ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಮಿಶ್ರ ಬೆಳೆಗಳ ಬಗ್ಗೆ ಹಾಗೂ ತಾವು ಮಾಡುತ್ತಿರುವ ಪಶು ಸಂಗೋಪನೆಯ ಬಗ್ಗೆ ರೈತ ರಾಚಪ್ಪ ಮಕ್ಕಳಿಗೆ ವಿವರಣೆ ನೀಡಿದರು.

‘ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದು ಮಕ್ಕಳ ನೆನಪಿನಲ್ಲಿ ದೀರ್ಘಕಾಲ ಉಳಿಯುತ್ತದೆ. ಇದನ್ನು ಆಧರಿಸಿ ಮಕ್ಕಳಿಗೆ ಪ್ರಾಯೋಗಿಕವಾಗಿ ಹೇಳಿಕೊಡುವ ಉದ್ದೇಶದಿಂದ ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ಕೂಡ ಇದರಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುವುದರ ಮೂಲಕ ತಮ್ಮ ಗೊಂದಲಗಳನ್ನು ನಿವಾರಿಸಿಕೊಂಡರು. ಜತೆಗೆ ಕೃಷಿ ವಿವಿಧ ಹಂತಗಳ ಬಗ್ಗೆ ಅರಿತರು’ ಎಂದು ಶಿಕ್ಷಕರು ಹೇಳಿದರು.

‘ಕೇವಲ ಓದು, ಕ್ರೀಡೆ ಹಾಗೂ ಇನ್ನಿತರ ವಿಷಯಗಳಲ್ಲೇ ಆಸಕ್ತಿ ತೋರುತ್ತಿದ್ದ ನಮಗೆ ಶಿಕ್ಷಕರು ಕೃಷಿ ಬಗ್ಗೆ ತಿಳಿಸಿಕೊಡಲು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ಹೊಸದೆನಿಸಿತು. ಪೂರ್ವಿಕರು ಕೃಷಿ ಮಾಡುತ್ತಿದ್ದರೂ ಅದನ್ನು ಶಾಲೆಯ ಮುಖೇನ ತಿಳಿದುಕೊಳ್ಳಲು ಸಾಧ್ಯವಾಗಿದೆ. ರೈತ ದೇಶದ ಬೆನ್ನೆಲುಬು. ಆದರೆ, ಬೆಳೆದ ಬೆಳೆ ಕೈಸೇರಲು ಆತ ಪಡುವ ಶ್ರಮವನ್ನು ಕಣ್ಣಾರೆ ನೋಡಿದಂತಾಯಿತು’ ಎಂಬುದು ವಿದ್ಯಾರ್ಥಿ ಪ್ರದೀಪನ ಅನುಭವ.

--

ರೈತರ ಮಕ್ಕಳಾಗಿದ್ದರೂ ಅವರ ಕಷ್ಟ ತಿಳಿಯುವಲ್ಲಿ ವಿಫಲರಾಗಿದ್ದೆವು.ಜಮೀನಿನಲ್ಲಿ ನಡೆದ ಸಂವಾದದಿಂದ ರೈತರ ಮಹತ್ವ ತಿಳಿಯಿತು
ಮನು, 8ನೇ ತರಗತಿ.

--

ಸಂವಾದ ಕಾರ್ಯಕ್ರಮದಿಂದ ಕೃಷಿಯಲ್ಲಿ ಅನುಸರಿಸಬೇಕಾದ ಹಂತಗಳು ಹಾಗೂ ಪಶು ಸಂಗೋಪನೆಯ ಕಾರ್ಯ ವಿಧಾನ ಗೊತ್ತಾಯಿತು
ಜಡೇರುದ್ರಮ್ಮ, 8ನೇ ತರಗತಿ

--

ಶಾಲೆಗಳಲ್ಲಿ ಪಠ್ಯವಸ್ತುವಿಗೆ ಪೂರಕವಾಗಿ ಕೆಲವು ನೈಜ ಸನ್ನಿವೇಶಗಳನ್ನು ನೋಡಿದಾಗ ಮಕ್ಕಳ ಕಲಿಕೆಯಲ್ಲಿ ಪಕ್ವತೆ ಉಂಟಾಗುತ್ತದೆ
ಸಿ. ಮಹಾದೇವ, ವಿಜ್ಞಾನ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT